ಎಂ.ಬಿ ಶ್ರೀನಿವಾಸ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಚರಿತ್ರೆ ಸೃಷ್ಟಿಸುವ ಅವತಾರವಾಗಲಿದ್ದಾರೆ. ಈ ವಿಚಾರವನ್ನು ಅವರು ‘ಓಲ್ಡ್ ಮಾಂಕ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಚಿತ್ರದ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ದೇವಲೋಕದಲ್ಲಿ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀ ಸರಸ ಸಲ್ಲಾಪದಲ್ಲಿರುವ ಸಂದರ್ಭ. ಅಲ್ಲಿಗೆ ನಾರದ ಮುನಿಗಳ ಪ್ರವೇಶವಾಗುತ್ತದೆ. ತಮಗೆ ರಸಭಂಗ ಉಂಟು ಮಾಡಿದ್ದರಿಂದ ಕೋಪಗೊಂಡ ನಾರಾಯಣನು ನಾರದ ಮುನಿಗೆ ಶಾಪ ನೀಡುತ್ತಾನೆ. ಅದರ ಪ್ರಕಾರ ನಾರದನು ಮನುಷ್ಯರೂಪದಲ್ಲಿ ಭೂಲೋಕದಲ್ಲಿ ಜನಿಸಬೇಕಾಗುತ್ತದೆ. ಕಂಡ ಕಂಡ ಹುಡುಗಿಯರಲ್ಲೆಲ್ಲ ಪ್ರೀತಿ ಹುಟ್ಟಿ ಪಾಡು ಪಡಬೇಕೆಂದು ಶಪಿಸಿಬಿಡುತ್ತಾನೆ.
ಅದಕ್ಕೆ ಪರಿಹಾರ ಕೇಳಿದ ನಾರದನಲ್ಲಿ ಯಾವಾಗ ನೀನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತೀಯೋ ಅಲ್ಲಿಗೆ ನಿನ್ನ ಶಾಪ ವಿಮೋಚನೆ ಆಗುತ್ತದೆ ಎಂದು ತಿಳಿಸಲಾಗುತ್ತದೆ. ಭೂಮಿಗೆ ಬಂದ ನಾರದ ಎಷ್ಟು ಹುಡುಗಿಯರ ಪ್ರೀತಿಗೆ ಬೀಳುತ್ತಾನೆ, ಮದುವೆ ಆಗುತ್ತದಾ ಎನ್ನುವುದೇ ಚಿತ್ರದ ಕತೆ ಎನ್ನುತ್ತಾರೆ ಶ್ರೀನಿವಾಸ್.
ಮನುಷ್ಯ ರೂಪತಾಳಿ ಭೂಮಿಗೆ ಬರುವ ನಾರದ ಮುನಿಯಾಗಿ ಎಂ.ಬಿ ಶ್ರೀನಿವಾಸ್ ನಟಿಸಿದ್ದರೆ, ಅವರಿಗೆ ಭೂಮಿ ಮೇಲಿನ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅದಿತಿ, ‘ಓಲ್ಡ್ ಮಾಂಕ್’ ಅಂದರೆ ಹಳೇ ಸನ್ಯಾಸಿ ಎಂದಷ್ಟೇ ತಿಳಿದುಕೊಂಡಿದ್ದೆ. ಆಮೇಲೆ ಆ ಹೆಸರಿನ ಮಹತ್ವ ತಿಳಿಯಿತು’ ಎಂದು ನಕ್ಕರು ಅದಿತಿ ಪ್ರಭುದೇವ. ಇದು ಕಾಮಿಡಿ ಜಾನರ್ ಚಿತ್ರ. ಹತ್ತು ಸಲ ನೋಡಿದರೂ ಮತ್ತೊಮ್ಮೆ ನೋಡಬೇಕು ಅನಿಸುವಂಥ ಸನ್ನಿವೇಶಗಳಿರುವ ಚಿತ್ರ. ನನ್ನ ಪಾತ್ರಕ್ಕೆ ಪಕ್ಕದ್ಮನೆ ಹುಡುಗಿಯ ಶೇಡ್ ಇದೆ. ಪ್ರತಿ ಚಿತ್ರದ ಪಾತ್ರವು ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿ ಇರಬೇಕು ಎನ್ನುವ ಪ್ರಯತ್ನ ನನ್ನದು. ಕಾಸ್ಟ್ಯೂಮ್ ನಲ್ಲಿ ಸ್ವಲ್ಪ ತಯಾರಿ ಬೇಕು ಎನ್ನುವುದು ಬಿಟ್ಟರೆ ಪಾತ್ರಕ್ಕಾಗಿ ಅಂಥ ತಯಾರಿ ಬೇಕಾಗಿಲ್ಲ ಎಂದುಕೊಳ್ಳುತ್ತೇನೆ” ಎಂದರು.
ಪ್ರದೀಪ್ ಶರ್ಮ ನಿರ್ಮಾಣದ ಓಲ್ಡ್ ಮಾಂಕ್ ಚಿತ್ರಕ್ಕೆ ಭರತ್ ಪರಶುರಾಮ್ ಛಾಯಾಗ್ರಹಣ ಇದೆ. ಸೌರಭ್ ವೈಭವ್ ಸಂಗೀತ ನೀಡಲಿದ್ದಾರೆ.
ಚಿತ್ರದಲ್ಲಿ ಗಣೇಶ್ ಕೇಸರ್ಕರ್ ಖಳನಟನಾಗಿ ಅಭಿನಯಿಸಿದ್ದು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಚಿತ್ರದ ಮುಹೂರ್ತ ಸಮಾರಂಭವು ಶೇಷಾದ್ರಿಪುರದ ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ನೆರವೇರಿತು. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲ್ಯಾಪ್ ಮಾಡಿದರು.