ಜಂಟಲ್ ಮನ್ ಪಿ ಆರ್ ಒ ನಾಗೇಂದ್ರ..!

ಸಿನಿಮಾಗಳ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ದಾಖಲೆ ಸೃಷ್ಟಿಸಿರುವ ವಿಚಾರ ನಿಮಗೆ ಗೊತ್ತು. ಹಾಗಾಗಿ ಬಿಡುಗಡೆಯಾಗುತ್ತಿರುವ ರಾಶಿ ಚಿತ್ರಗಳಲ್ಲಿ ಎಲ್ಲವೂ ಒಳ್ಳೆಯ ಚಿತ್ರಗಳು ಎಂದು ಹೇಳಲಾಗದು. ಅದೇ ವೇಳೆ ಒಳ್ಳೆಯ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೂ ಹೇಳಲಾಗದು. ಆದರೂ ಕನ್ನಡದ ಒಳ್ಳೆಯ ಸಿನಿಮಾಗಳ ಆಯ್ಕೆಗೆ ಹೊಸದೊಂದು ಮಾನದಂಡವಿದೆ. ಅವರೇ ಪಿ. ಆರ್.ಒ ನಾಗೇಂದ್ರ!

ನಾಗೇಂದ್ರ ಅವರು ಹೊಸಬರೇನೂ ಅಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಪತ್ರಿಕಾ ಸಂಪರ್ಕಾಧಿಕಾರಿಗಳಲ್ಲೇ ಹಿರಿಯರು. ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿದವರು. ಅವರ ಮನೆಯಿಂದ ಚಿತ್ರರಂಗ ಕಲಾವಿದರನ್ನೂ ಕಂಡಿದೆ. ಅವರ ಸಹೋದರಿ ಡಾ.ರಾಜ್ ಚಿತ್ರದಲ್ಲೇ ನಾಯಕಿಯಾದವರು. ಸ್ವತಃ ನಾಗೇಂದ್ರ ಸಿನಿಮಾ ನಿರ್ಮಾಣವನ್ನು ಕೂಡ ಮಾಡಿದಂಥವರು. ಇಷ್ಟೆಲ್ಲ ಅನುಭವ ಇರುವುದರಿಂದಲೇ ಅವರಿಗೆ ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಹಾಗಾಗಿಯೇ ಈಗ ಅವರು ವರ್ಷದ ಶ್ರೇಷ್ಠ ಚಿತ್ರಗಳ ಪಿ.ಆರ್.ಒ ಎಂದು ಗುರುತಿಸಿಕೊಳ್ಳುವ ಹಂತ ತಲುಪಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ತೆರೆಕಂಡ ನಾಲ್ಕು ಅದ್ಭುತ ಚಿತ್ರಗಳು.

1.ನಾನು ಮತ್ತು ಗುಂಡ

ಶಿವರಾಜ್ ಕೆ.ಆರ್ ಪೇಟೆ ಪ್ರಥಮ ಬಾರಿಗೆ ನಾಯಕರಾಗಿರುವ ಚಿತ್ರ ‘ನಾನು ಮತ್ತು ಗುಂಡ’. ಚಿತ್ರದಲ್ಲಿ ಅವರ ಮತ್ತು ನಾಯಿಯ ನಡುವಿನ ಭಾವನಾತ್ಮಕ ಸಂಬಂಧ ನೋಡಿ ಪ್ರೇಕ್ಷಕರು ಕಣ್ಣೀರಾಗಿದ್ದಾರೆ. ಅಂಥದೊಂದು ಭಾವ ಸಂಬಂಧದ ಚಿತ್ರ ಈಗಿನ‌ ಕಾಲಘಟ್ಟದ ಪ್ರಥಮ ಅಗತ್ಯವೂ ಹೌದು.

2.ಲವ್ ಮಾಕ್ಟೈಲ್

ಡಾರ್ಲಿಂಗ್ ಕೃಷ್ಣ ನಟನಾಗಿ ಎಲ್ಲರಿಗೂ ಗೊತ್ತಿತ್ತು. ಆದರೆ ಅವರ ನಿರ್ದೇಶನದ ಬಗ್ಗೆ, ಪ್ರಥಮ ಪತ್ರಿಕಾಗೋಷ್ಠಿಯಿಂದಲೇ ಭರವಸೆಯ ಮಾತನಾಡುತ್ತಿದ್ದ ಪಿ.ಆರ್.ಒ ನಾಗೇಂದ್ರ ಅವರ ನಿರೀಕ್ಷೆ ತುಂಬ ಸತ್ಯವಾಗಿರುವಂಥದ್ದು ಎನ್ನುವುದನ್ನು ಚಿತ್ರ ಇಂದು ಸತ್ಯ ಮಾಡಿದೆ. ಯಾಕೆಂದರೆ ಚಿತ್ರ ನೋಡಿದವರು ಕತೆ, ನಟನೆ ಮಾತ್ರವಲ್ಲ ಕೃಷ್ಣರ ನಿರ್ದೇಶನದ ಬಗ್ಗೆ ಕೂಡ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.

3.ದಿಯಾ

‘6-5=2’ ಎನ್ನುವ ಸಿನಿಮಾವನ್ನು ಯಾವುದೇ ಪ್ರಚಾರಕರ್ತರಿಲ್ಲದೆ, ಮಾಧ್ಯಮಗೋಷ್ಠಿಗಳಿಲ್ಲದೆ ಮಾಡಿದಂಥವರು ನಿರ್ದೇಶಕ ಅಶೋಕ್ ಮತ್ತು ತಂಡ. ಹಾಗಿದ್ದೂ ಅವರು ಯಶಸ್ವಿ ಚಿತ್ರ ಮಾಡುವಲ್ಲಿ ಸಫಲರಾದರು. ಆದರೆ ಅವರಿಗೆ ಕಮರ್ಷಿಯಲ್ಲಾಗಿಯೇ ಒಂದು ಚಿತ್ರ ಮಾಡುವ ಇರಾದೆ ಬಂದಾಗ ನೆನಪಾದಂಥ ಪಿಆರ್ ಒ ನಾಗೇಂದ್ರರವರು. ಹಾಗಾಗಿ ಇಂದು ಪ್ರೇಕ್ಷಕರಿಂದ ಭರಪೂರ ಪ್ರಶಂಸೆ ಪಡೆಯುತ್ತಿರುವ ‘ದಿಯಾ’ ಸಿನಿಮಾದ ಪ್ರಚಾರಕರ್ತರು ಕೂಡ ಇದೇ ನಾಗೇಂದ್ರ ಎನ್ನುವುದು ಗಮನಾರ್ಹ.

4.ಜಂಟಲ್ ಮನ್

ಒಂದು ನೈಜ‌ ಘಟನೆಯನ್ನು ಸಿನಿಮೀಯವಾಗಿ ಮಾಡುವಾಗ ಎಷ್ಟು ಕಷ್ಟ ಇರುತ್ತದೆ, ಅದರಲ್ಲಿ ನೈಜತೆ ಮತ್ತು ಮಸಾಲೆಯ ಹದ ಹೊಂದದೇ ಹೋದರೆ ಗೆಲುವಿನ ಪ್ರಮಾಣ ಕಡಿಮೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಥದೊಂದು ರಿಸ್ಕಿ ಚಿತ್ರದಲ್ಲಿನ ಒಳ್ಳೆಯ ಸಬ್ಜೆಕ್ಟ್ ಗಮನಿಸಿ ಪ್ರೋತ್ಸಾಹವಾಗಿ ನಿಂತು ಪ್ರಚಾರಕರ್ತರಾಗಿ ಕೆಲಸ ಮಾಡಿದವರು ನಾಗೇಂದ್ರ. ಹೀಗೆ ಇಲ್ಲಿಯೂ ಅವರ ಉಪಸ್ಥಿತಿ ಒಂದೊಳ್ಳೆಯ ಚಿತ್ರದ ಬೆನ್ನೆಲುಬಾಗಿ ಕೆಲಸ ಮಾಡಿದೆ.

ಬಹುಶಃ ಇವಿಷ್ಟನ್ನು ಸ್ವತಃ ನಾಗೇಂದ್ರ ಹೇಳಿಕೊಂಡಿದ್ದರೆ, ಅದು ದೊಡ್ಡ ವಿಷಯವಾಗುತ್ತಿರಲಿಲ್ಲ. ಯಾಕೆಂದರೆ ತಮ್ಮ ಚಿತ್ರಗಳಿಗೆ ಬಿಲ್ಡಪ್ ತೆಗೆದುಕೊಳ್ಳಲು ಹೀಗೆ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಅನುಮಾನಿಸಬಹುದಿತ್ತು. ಆದರೆ ಈ ಗೆಲುವಿನ ಚಿತ್ರಗಳನ್ನು ಉಲ್ಲೇಖಿಸಿದ್ದು ನಿರ್ದೇಶಕ ಗುರು ದೇಶಪಾಂಡೆ ಎಂದರೆ ನಂಬಲೇಬೇಕು!

ನಿಜವಾದ ಜಂಟಲ್ ಮನ್ ನಾಗೇಂದ್ರ!

ಘಟನೆ ನಡೆದಿದ್ದು ನಿನ್ನೆ ‘ಜಂಟಲ್ ಮನ್’ ಚಿತ್ರದ ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ. ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಸ್ಫೂರ್ತಿಯಾದ ನಿಜವಾದ ಮುಂಬೈನ ಜಂಟಲ್ ಮನ್ ನ ಪರಿಚಯ ಮಾಡಲು ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಅವರ ಪರಿಚಯವೇನೋ ಆಯಿತು. ಆದರೆ ಕೊನೆಯಲ್ಲಿ ಅನಾವರಣಗೊಂಡಿದ್ದು ಮಾತ್ರ ಕನ್ನಡ ಚಿತ್ರೋದ್ಯಮದ ನಿಜವಾದ ಜಂಟಲ್ ಮನ್ ಪಿಆರ್ ಒ ನಾಗೇಂದ್ರ ಎನ್ನುವ ಸತ್ಯ!

ಚಿತ್ರದ ನಿರ್ಮಾಪಕರಾದ ಗುರುದೇಶಪಾಂಡೆಯವರು ಮಾತನಾಡುತ್ತಾ, “ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆಯ ಚಿತ್ರಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಉದಾಹರಣೆಗೆ ಜಂಟಲ್ ಮನ್ ಜತೆಯಲ್ಲೇ ಚಿತ್ರಮಂದಿರದಲ್ಲಿರುವ ‘ದಿಯಾ’ ಆಗಲೀ, ಅದಕ್ಕಿಂತ ಹಿಂದೆ ತೆರೆಕಂಡ ನಾಯಿ ಮತ್ತು ಗುಂಡ ಆಗಲೀ, ಲವ್ ಮಾಕ್ಟೈಲ್ ಆಗಲೀ ಒಳ್ಳೆಯ ಚಿತ್ರಗಳೆಂದು ಜನಗಳ ಮೆಚ್ಚುಗೆ ಪಡೆಯುತ್ತಿವೆ” ಎಂದರು. ಸಾಮಾನ್ಯವಾಗಿ ನಿರ್ಮಾಪಕರು ಉಳಿದ ಎಲ್ಲ ಚಿತ್ರಗಳಿಗಿಂತ ತಮ್ಮ ಚಿತ್ರಗಳೇ ಉತ್ತಮ ಎಂದು ಹೇಳಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಇತರ ಚಿತ್ರಗಳನ್ನು ಸೇರಿಸಿ ಅಂಥವುಗಳಿಗೆ ಇನ್ನಷ್ಟು ಜನರನ್ನು ತಲುಪಲು ಚಿತ್ರ ಮಂದಿರದಲ್ಲಿ ಕಾಲಾವಕಾಶ ಬೇಕು ಎಂದು ಗುರುದೇಶಪಾಂಡೆ ಹೇಳಿಕೆ ನೀಡಿದರು. ವಿಶೇಷ ಏನೆಂದರೆ ಗುರುದೇಶಪಾಂಡೆಯವರು ಒಳ್ಳೆಯ ಚಿತ್ರ ಎಂದು ಪಟ್ಟಿ ಮಾಡಿದಂಥ ಆ ನಾಲ್ಕು ಚಿತ್ರಗಳಿಗೂ ನಾಗೇಂದ್ರರೇ ಪಿಆರ್ ಒ ಎನ್ನುವ ವಿಚಾರ ಆಗ ಎಲ್ಲರ ಗಮನಕ್ಕೂ ಬಂದಿತ್ತು.

ಸಾಮಾನ್ಯವಾಗಿ ಚಿತ್ರರಂಗದ ಆಸೆಯಿಟ್ಟು ಬರುವವರ ಬಗ್ಗೆ ಅರಿತೊಡನೆ ಅವರಿಂದ ನಾವೇನು ಲಾಭ ಪಡೆಯಬಹುದು ಎಂದು ಯೋಚಿಸುವವರನ್ನಷ್ಟೇ ಕಾಣುತ್ತಿರುತ್ತೇವೆ. ಆದರೆ ನಾಗೇಂದ್ರ ಅವರು ತಮ್ಮ ಪಿಆರ್ ಒ ವ್ಯಾಪ್ತಿಯಾಚೆಗೆ ಮಾನವೀಯತೆಗೆ ಕೂಡ ಹೆಸರಾದವರು. ಯಾಕೆಂದರೆ ಹೊಸಬರು ಬಂದರು ಎಂದ ಕೂಡಲೇ ಅವರಿಗೆ ಪ್ರಸ್ತುತ ಕನ್ನಡ ಸಿನಿಮಾರಂಗದಲ್ಲಿ ಒಂದು ಸಿನಿಮಾ ಪೂರ್ತಿ ಮಾಡಿ ತೆರೆಗೆ ತರುವ ತನಕ ಎಷ್ಟೆಲ್ಲ ಕಷ್ಟ ಎದುರಿಸಬೇಕಾಗುತ್ತದೆ ಎನ್ನುವ ಬಗ್ಗೆ ವಿವರಣೆ ನೀಡಿ ಎಚ್ಚರಿಸುತ್ತಾರೆ. ಬಹುಶಃ ತಾವು ಕೂಡ ಒಂದೊಮ್ಮೆ ಚಿತ್ರ ನಿರ್ಮಿಸಿ, ಅನುಭವ ಪಡೆದ ಕಾರಣದಿಂದಲೇ ಇರಬಹುದು ಅವರಲ್ಲಿ ಹೊಸದಾಗಿ ಬರುವ ನಿರ್ಮಾಪಕರ ಬಗ್ಗೆ ಒಂದು ಕಾಳಜಿ‌ ಇದ್ದೇ ಇರುತ್ತದೆ. ಜತೆಗೆ ಶಿಸ್ತು ಎಲ್ಲವೂ ಸೇರಿ ಅವರಿಗೆ ಜಂಟಲ್ ಮನ್ ಪಿ.ಆರ್.ಒ ಎನ್ನುವ ಅನ್ವರ್ಥನಾಮಕ್ಕೆ ದಾರಿ ಮಾಡಿಕೊಟ್ಟಿದೆ.

Recommended For You

Leave a Reply

error: Content is protected !!