‘ಮಾಂಜ್ರಾ’ ಚಿತ್ರದ ಆಡಿಯೋ ಲಾಂಚ್

ನೈಜ ಘಟನೆಯನ್ನು ಆಧಾರ ಮಾಡಿದ ಚಿತ್ರವೊಂದು ತೆರೆಗೆ ಬರುತ್ತಿದೆ. ಚಿತ್ರದ ಹೆಸರು ಮಾಂಜ್ರಾ. ಹೆಸರು ಅಪರೂಪ ಅನಿಸಿದರೂ ನಮ್ಮ ನದಿಯೊಂದರ ಹೆಸರಾದ ಕಾರಣ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ ಎಂದರು ನಿರ್ದೇಶಕ ಮುತ್ತುರಾಜ್ ರೆಡ್ಡಿ. ಚಿತ್ರದ ಆಡಿಯೋ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮುತ್ತುರಾಜ್ ರೆಡ್ಡಿ ತೆಲುಗು ಸಿನಿಮಾಗಳಾದ ‘ಅಲಾ ಮೊದಲಾಯಿಂದಿ’, ‘ಬಿಮಿಲಿ ಜುಟ್ಟು’ ಎನ್ನುವ ಎರಡು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದು, ಪ್ರಥಮ ಬಾರಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನೈಜ ಘಟನೆಯನ್ನು ತರುವುದು ಚಾಲೆಂಜಿಂಗ್ ಆಗಿತ್ತು ಎಂದರು.

ಇದು ಬೆಳಗಾವಿಯ ಶಂಕರ್ ಎನ್ನುವವರ ಬದುಕಿನ ಕತೆ. ಆತ ಪ್ರೇಮಿಸಿ ಮದುವೆಯಾದ ಹುಡುಗಿ ಶವವಾಗಿ ಪತ್ತೆಯಾದ ಮೇಲೆ ಶಂಕರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಸರಿಯಾಗಿ ಮಾತನಾಡುತ್ತಿಲ್ಲ. ಆಕೆಯ ಸಾವಿಗೆ ಕಾರಣವಾಗಲೀ, ಅದು ಸಾವೋ ಆತ್ಮಹತ್ಯೆಯೋ ಎನ್ನುವ ಸತ್ಯವಾಗಲೀ ಇದುತನಕ ತಿಳಿದಿಲ್ಲ. ಆದರೆ ಆ ಘಟನೆಗೆ ಸಿನಿಮೀಯ ಬದಲಾವಣೆ ನೀಡಿರುವ ನಿರ್ದೇಶಕರು ನಾಯಕ ಶಂಕರ್ ಬೆಂಗಳೂರಲ್ಲಿ ವೃತ್ತಿಯಲ್ಲಿರುವಂತೆ ಬದಲಾಯಿಸಿದ್ದಾರಂತೆ. ಆದರೆ ನಾಯಕಿಗೆ ಮೂಲ ಕಥಾನಾಯಕಿಯ ಹೆಸರಾದ ಪದ್ಮಾ ಎಂದೇ ಹೆಸರಿಟ್ಟಿದ್ದು, ನಿಜವಾದ ಪದ್ಮಾ ಇದ್ದ ಮನೆಯಲ್ಲಿಯೇ ಚಿತ್ರೀಕರಿಸಿದ್ದಾಗಿ ತಿಳಿಸಿದರು.

ಶಂಕರ್ ಅಂದು ಪದ್ಮಳಿಗಾಗಿ ಕಾಲ್ಗೆಜ್ಜೆ ಕೊಂಡಿದ್ದರು. ಆದರೆ ಆಕೆಗೆ ತೊಡಿಸಲು ಸಾಧ್ಯವಾಗಿರಲಿಲ್ಲ. ಆ ಘಟನೆಯನ್ನು ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ನಾಯಕ ಬೆಂಗಳೂರಲ್ಲಿ ಓದುತ್ತಿರುತ್ತಾನೆ ಎಂಬಂತೆ ತೋರಿಸಿದ್ದೇವೆ‌. ನಾಯಕಿ ಮರಾಠಿ ಹುಡುಗಿಯಾದ ಕಾರಣ, ಚಿತ್ರದಲ್ಲಿ ಕೂಡ ಇಪ್ಪತ್ತು ಪರ್ಸೆಂಟ್ ಮರಾಠಿ ಬಳಸಲಾಗಿದೆ. ಹಳೆಯ ಕಾಲದ ಪ್ರೇಮಪತ್ರ ಮತ್ತಿತರ ಲವ್ ಎಲಿಮೆಂಟ್ ಗಳನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದು ಚಿತ್ರದ ಸಂಪೂರ್ಣ ಮಾಹಿತಿಗಳನ್ನು ನಿರ್ದೇಶಕ ಮುತ್ತುರಾಜ್ ರೆಡ್ಡಿ ಹಂಚಿಕೊಂಡರು.

ನಾಯಕನಾಗಿ ರೈಸಿಂಗ್ ಸ್ಟಾರ್ ರಂಜೀತ್ ಸಿಂಗ್ ಅಭಿನಯಿಸುತ್ತಿದ್ದು “ಅವರು ಮೂಲತಃ ತಾವು ಮುಂಬೈನವರಾಗಿದ್ದು, ಇದೀಗ ಕನ್ನಡ ಕಲಿತು ಕರ್ನಾಟಕದವನೇ ಆಗಿದ್ದೇನೆ” ಎಂದರು.

ಚಿತ್ರಕ್ಕೆ ಸ್ಫೂರ್ತಿಯಾದ ನಿಜವಾದ ಪ್ರೇಮಿ ಶಂಕರ್ ಅವರ ಉಪಸ್ಥಿತಿ ಮಾಧ್ಯಮಗೋಷ್ಠಿಯ ವಿಶೇಷವಾಗಿತ್ತು. ಅವರನ್ನು ಅವರ ಊರಿನಿಂದ ಇಬ್ಬರು ಸ್ನೇಹಿತರು ಸೇರಿ‌ ಕರೆದುಕೊಂಡು ಬಂದಿದ್ದರು. ಇಂದಿಗೂ ಮಾನಸಿಕವಾಗಿ ಅಸ್ವಸ್ಥರಾಗಿರುವ ಶಂಕರ್ ಅವರು‌ ಚಿಕಿತ್ಸೆಗೂ ದುಡ್ಡಿಲ್ಲದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಚಿತ್ರ ತಂಡದವರು ಸಿಗುವ ಲಾಭದಲ್ಲಿ ಏನಾದರೂ ಸಹಾಯ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ.

ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ರವಿ ಅರ್ಜುನ್ ಪೂಜೇರ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಮೂಲಕ ನಾಯಕಿಯಾಗಿ ನವನಟಿ ಪಿ ಅಪೂರ್ವ ಪದಾರ್ಪಣೆ ಮಾಡುತ್ತಿದ್ದಾರೆ. ಡಾ. ಚಿನ್ಮಯ್ ಎಂ ರಾವ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು ಲಹರಿ ಸಂಸ್ಥೆಯ ಮೂಲಕ ಮಾರುಕಟ್ಟೆ ಸೇರಲಿದೆ. ಗೀತ ರಚನೆಕಾರ, ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಆಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಲಹರಿ ಸಂಸ್ಥೆಯ ಮಾಲೀಕ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: