ಈ ಬಾರಿಯ ಬಿಗ್ ಬಾಸ್ ನಲ್ಲಿ ಗಮನ ಸೆಳೆದ ಬೆರಳೆಣಿಕೆಯ ಮಂದಿಯಲ್ಲಿ ಚೈತ್ರಾ ಕೋಟೂರು ಕೂಡ ಒಬ್ಬರು. ಅವರು ಫಿನಾಲೆ ತನಕ ಬರದೇ ಹೋಗಿರಬಹುದು. ಆದರೆ ಒಂದು ಎಲಿಮಿನೇಶನ್, ವೈಲ್ಡ್ ಕಾರ್ಡ್ ಎಂಟ್ರಿ, ನಗು, ಅಳು ಎಲ್ಲದರಲ್ಲೂ ಗಮನ ಸೆಳೆವಂಥ ಭಾವ ತುಂಬಿದ ಕಂಗಳು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ತಂಡದವರನ್ನೆಲ್ಲ ಸೇರಿಸಿ ಒಂದು ಸಿನಿಮಾ ಮಾಡೋಣ ಎಂದಿರುವ ಚೈತ್ರಾ ಇದೀಗ ವ್ಯಾಲಂಟೈನ್ ಡೇ ಬಗ್ಗೆ ಸಣ್ಣದೊಂದು ಸ್ಫೂಫ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಗರ್ಲ್ಸ್ ಮೂಡ್ಸ್ ಆನ್ ವ್ಯಾಲಂಟೈನ್’ಸ್ ಡೇ
ಹುಡುಗಿಯರು ಪ್ರೇಮಿಗಳ ದಿನಾಚರಣೆಯ ದಿನ ಹೇಗಿರುತ್ತಾರೆ ಎನ್ನುವ ಕುತೂಹಲ ಹಲವರಿಗೆ. ಆದರೆ ಅವರಿಗೆ ಅವತ್ತು ಕೂಡ ತಮ್ಮ ಮೂಡ್ ಹೇಗಿರುತ್ತದೆ ಎನ್ನುವುದರ ಮೇಲೆಯೇ ಅವಲಂಬಿತವಾಗುತ್ತದೆ ಎನ್ನುವುದು ಚೈತ್ರಾ ನಿರೂಪಣೆ. ‘ಹೆಣ್ಣು ಮಕ್ಕಳು ತುಂಬ ಸೂಕ್ಷ್ಮ’ ಎಂದು ಗಂಡಸರು ಹೇಳುತ್ತಾರೆ. ಆದರೆ ಚೈತ್ರಾ ಸ್ವತಃ ಓರ್ವ ಹೆಣ್ಣಾಗಿ ಅದನ್ನು ನಿರೂಪಿಸುವ ರೀತಿ ಸುಂದರ. ಬಹುಶಃ ಅದು ಕೂಡ ಹೆಣ್ಣುಮಕ್ಕಳ ಸೂಕ್ಷ್ಮತೆಯಲ್ಲೇ ಬರುತ್ತದೆ ಎನ್ನುವುದನ್ನು ಚೈತ್ರಾ ಸಾಬೀತು ಮಾಡಿದಂತಿದೆ.
ಕೆಲಸದ ವಿಚಾರದಲ್ಲಿ ರಾಕ್ಷಸಿ..!
ಬಿಗ್ ಬಾಸ್ ಮನೆಯಲ್ಲಿ ದ್ರೌಪದಿಯ ರೌದ್ರಾವತಾರದ ರಂಗಸಾಕ್ಷಾತ್ಕಾರ ಮಾಡಿದ್ದರು ಚೈತ್ರಾ. ಅದನ್ನು ಕಂಡು ಆಕೆ ರೊಚ್ಚಿಗೆದ್ದರೆ ರಾಕ್ಷಸಿಯಾದಾರು ಎಂದುಕೊಂಡರೆ ಅದು ತಪ್ಪು. ವೈಯಕ್ತಿಕವಾಗಿ ಚೈತ್ರಾರಿಗೆ ದ್ವೇಷ ಸಾಧನೆಯೇ ಗೊತ್ತಿಲ್ಲ. ಸುಮ್ಮನೇ ಮಕ್ಕಳಂತೆ ಒಂದೇ ವಿಚಾರಕ್ಕೆ ಗಂಟುಬಿದ್ದು ತಮಗೆ ಕಂಡ ಸತ್ಯ ಹೊರತರಲು ಪ್ರಯತ್ನಿಸುವುದು ಬಿಟ್ಟರೆ ಬೇರೇನೂ ಹಠಗಳು ಕಾಣಿಸದು. ಆದರೆ ಕೆಲವರನ್ನು ಕೆಲಸದ ವಿಚಾರದಲ್ಲಿ ರಾಕ್ಷಸರು ಎನ್ನುತ್ತೇವೆ. ಯಾಕೆಂದರೆ ಅವರು ಒಂದು ಕೆಲಸ ಮಾಡುವ ಪಣತೊಟ್ಟರೆ ಊಟ, ತಿಂಡಿ ಬಿಟ್ಟು ನಿದ್ದೆಗೆಟ್ಟು ಪೂರ್ತಿ ಮಾಡುತ್ತಾರೆ. ಅಂದಹಾಗೆ ಅದು ಯಾರದೋ ಒತ್ತಡದ ಡೆಡ್ಲೈನ್ ಗಾಗಿ ಮಾಡಿ ಮುಗಿಸುವಂಥದ್ದಲ್ಲ. ಸ್ವಯಂ ಆಸಕ್ತಿಯಿಂದ ಮಾಡಿ ತೀರಿಸುವಂಥದ್ದು ಎನ್ನುವುದು ವಿಶೇಷ! ಯಾಕೆಂದರೆ ಅವರು ಈ ಸ್ಫೂಫ್ ಮಾಡಿರುವಂಥದ್ದು ತಮ್ಮದೇ ಕಲ್ಪನೆಯೊಂದಕ್ಕೆ ಜೀವ ನೀಡಲಿಕ್ಕೇ ಹೊರತು ಬೇರೇನಕ್ಕೂ ಅಲ್ಲ. ಆ ಮೊದಲ ಪ್ರಯತ್ನದಲ್ಲೇ ಯಶಸ್ಸು ಕೂಡ ಕಂಡಿದ್ದಾರೆ.
ಒಂದೇ ದಿನದಲ್ಲಿ ಎಲ್ಲವೂ ತಯಾರಾಯ್ತು!
ಗುರುವಾರ ಬೆಳಿಗ್ಗೆ ಎದ್ದಾಗ ನಾಳೆ ವ್ಯಾಲಂಟೈನ್ ಡೇ ಎಂದು ತಿಳಿದ ಚೈತ್ರಾಗೆ ನಾಳೆಗೊಂದು ಯೂಟ್ಯೂಬ್ ಸ್ಟೋರಿ ಮಾಡಿದರೆ ಹೇಗೆ ಎಂದು ಅನಿಸಿಬಿಟ್ಟಿದೆ! ಹಾಗೆ ಅನಿಸಿದ್ದೇ ತಡ ಸಣ್ಣದಾಗಿ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಆತ್ಮೀಯರಿಗೊಂದು ಫೋನ್ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಆಕೆ ನಟಿಸಿದ್ದ ಕಿನ್ನರಿ ಧಾರಾವಾಹಿಯ ಪಾತ್ರಧಾರಿ ಪವನ್ ಕುಮಾರ್ ಜತೆಗೆ ಸೂರಜ್ ಮೊದಲಾದವರು ಕಲಾವಿದರಾಗಿ ಸಾಥ್ ನೀಡಿದ್ದಾರೆ. ತನ್ನ ಮನೆಯನ್ನೇ ಲೊಕೇಶನ್ ಮಾಡಿಕೊಂಡು, ವಿವಿಧ ಪಾತ್ರಗಳಿಗೆ ಜೀವ ತುಂಬಿದ ಚೈತ್ರಾರನ್ನು ಛಾಯಾಗ್ರಾಹಕ ಸಂದೀಪ್ ಎಂ ಥಾಮಸ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ ಇದರಲ್ಲಿ ಯಾವ ಕಲಾವಿದರಿಗೂ ಮೇಕಪ್ ಇಲ್ಲ! ಸ್ವತಃ ಚೈತ್ರಾ ಕೂಡ ಸಾಮಾನ್ಯ ತಾರೆಯೊಬ್ಬಳು ಮೇಕಪ್ ಮಾಡುವಷ್ಟು ಸಮಯವನ್ನು ಇದರ ಪೋಸ್ಟ್ ಪ್ರೊಡಕ್ಷನ್ ಗೆ ಮೀಸಲಾಗಿರಿಸಿದಂತಿದೆ. ಅಹೋರಾತ್ರ ಸ್ಟುಡಿಯೋದಲ್ಲಿ ರಾತ್ರಿ ಎಡಿಟಿಂಗು ಬೆಳಿಗ್ಗೆ ರಿರೆಕಾರ್ಡಿಂಗ್ ಮುಗಿಸಿ ವ್ಯಾಲಂಟೈನ್ ಡೇ ಪಾರ್ಟಿ ಹೊತ್ತಿಗೆ ಸರಿಯಾಗಿ ಹೆಣ್ಣು ಮಕ್ಕಳಿಗೆ ಮತ್ತು ಅವರನ್ನು ಪ್ರೀತಿಸುವ ಗಂಡು ಮಕ್ಕಳಿಗೆ ಒಂದೊಳ್ಳೆಯ ಉಡುಗೊರೆಯನ್ನೇ ನೀಡಿದ್ದಾರೆ ಚೈತ್ರಾ. ಈ ಮೂಲಕ ಸ್ವತಃ ಯೂಟ್ಯೂಬ್ ವಾಹಿನಿ ಶುರುಮಾಡಿದ್ದಾರೆ.
ಚೈತ್ರಾ ಕೋಟೂರು ಅವರ ಈ ಪ್ರಥಮ ಸಂಭ್ರಮದಲ್ಲಿ ಕೊರತೆಗಳೇ ಇಲ್ಲ ಎಂದೇನೂ ಅಲ್ಲ. ಆದರೆ ಪ್ರೀತಿಯ ಕೊಡುಗೆಗಳಲ್ಲಿ ಕೊರತೆಗಳು ಹುಡುಕಲ್ಪಡುವುದಿಲ್ಲ. ಯಾಕೆಂದರೆ ಅಲ್ಲಿ ಪ್ರೀತಿಯೇ ಒರತೆಯಾಗಿರುತ್ತದೆ.