
ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳು ತಮ್ಮ ಒಲವಿನ ‘ಡಿ ಬಾಸ್’ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅದರಲ್ಲಿಯೂ ಬೆಂಗಳೂರಿನ ‘ರಾಜರಾಜೇಶ್ವರಿ’ ನಗರವಂತೂ ನಿನ್ನೆಯಿಂದಲೇ ಕಳೆಗಟ್ಟಿದೆ. ನಗರದ ಮತ್ತೊಂದು ಹಬ್ಬದಂತೆ ಸಂಭ್ರಮದಲ್ಲಿರುವ ಅಭಿಮಾನಿಗಳ ಸಾಲು ಪ್ರತಿ ವರ್ಷಗಳಂತೆ ಈ ಬಾರಿಯೂ ದಾಖಲೆ ಮಟ್ಟದಲ್ಲಿ ನೆರೆದಿದೆ. ಆದರೆ ಜನ್ಮದಿನಕ್ಕೆಂದೇ ಚಿತ್ರೀಕರಣಕ್ಕೆ ಬಿಡುವು ನೀಡಿ ಬಂದಿರುವ ದರ್ಶನ್ ಮಾತ್ರ ಇವತ್ತು ಕೂಡ ಸಿನಿಮಾ ಚಟುವಟಿಕೆಯಲ್ಲಿ ಸಕ್ರಿಯವಾಗುವ ಸೂಚನೆ ನೀಡಿದ್ದಾರೆ.
ಕೇರಳದಿಂದ ಮರಳಿದ ಧಾರಾಳಿ..!
ಕೇರಳದಲ್ಲಿ ‘ರಾಜವೀರ ಮದಕರಿ’ ಸೆಟ್ ರೆಡಿಯಾಗುತ್ತಿದ್ದಂತೆ ತರಾತುರಿಯಲ್ಲಿ ಬೆಂಗಳೂರು ತೊರೆದವರು ದರ್ಶನ್. ಅದಷ್ಟೇ ಕಂಠೀರವ ಸ್ಟುಡಿಯೋ ಒಳಾಂಗಣದಲ್ಲಿ ಹಾಕಿದ್ದ ಸೆಟ್ ನಲ್ಲಿ ‘ರಾಬರ್ಟ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿತ್ರು. ಆದರೆ ಕೇರಳಕ್ಕೆ ಹೊರಡುವ ಹಿಂದಿನ ರಾತ್ರಿ ಕೂಡ ಡಬ್ಬಿಂಗ್ ನಲ್ಲಿ ನಿರತರಾಗಿದ್ದರು ಎಂದರೆ ನೀವು ನಂಬಲೇಬೇಕು. ಕೇರಳದ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ ನಡೆಯುವಾಗಲೂ ಬರ್ತ್ ಡೇ ಮುಂಚಿತವಾಗಿಯೇ ಮನೆಗೆ ಬಂದು, ಅಭಿಮಾನಿಗಳನ್ನು ಎದುರುಗೊಳ್ಳಬೇಕು ಎನ್ನುವ ಯೋಚನೆಯಲ್ಲೇ ಇದ್ದರು ದರ್ಶನ್. ಇದೀಗ ಬರ್ತ್ ಸಂಭ್ರಮದಲ್ಲಿರುವ ದರ್ಶನ್ ಎರಡು ಮೂರು ಗಂಟೆಗಳ ಕಾಲ ರಾಬರ್ಟ್ ಸಿನಿಮಾದ ಡಬ್ಬಿಂಗ್ ನಲ್ಲಿ ಭಾಗಿಯಾಗಲಿರುವುದಾಗಿ ತಿಳಿಸಿದ್ದಾರೆ.
ಮನೆ ಮುಂದೆ ಈಗಲೂ ಸಾಲಾಗಿ ಅಭಿಮಾನಿಗಳು ತುಂಬಿರುವ ಕಾರಣ, ಅದು ಯಾವ ಮಾಯದಿಂದ ಅವರು ಹುಚ್ಚು ಫ್ಯಾನ್ಸ್ ಗಳನ್ನು ದಾಟಿ ಹೋಗುತ್ತಾರೋ ದೇವರೇ ಬಲ್ಲ. ಯಾಕೆಂದರೆ ಅಪರೂಪದಲ್ಲಿ ಹೊರಗಡೆ ಅವರ ಕಾರು ಕಂಡರೇನೇ ಬೆನ್ನು ಬಿದ್ದು ಹಿಂಬಾಲಿಸುವವರನ್ನು ಕಂಡಿದ್ದೇವೆ. ಅಂಥದರಲ್ಲಿ ಇಂದು ಅವರು ಅಭಿಮಾನಿಗಳದೇ ಕೋಟೆ ಬೇಧಿಸಿ ಮುನ್ನುಗ್ಗಬೇಕಿದೆ.
ಹಾಗೆ ಮುಂದೆ ಸಾಗಿದರೂ, ಅವರು ಡಬ್ವಿಂಗ್ ಸ್ಟುಡಿಯೋ ಸೇರಿಕೊಂಡ ಮೇಲೆ ಅಲ್ಲಿ ಹೊರಗಡೆ ಫ್ಯಾನ್ಸ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ದರ್ಶನ್ ತೀರ್ಮಾನ ಮಾಡಿಯಾಗಿದೆ. ಈ ವರ್ಷದಿಂದ ಜನ್ಮದಿನದಂದು ಸಹ ಡಬ್ಬಿಂಗ್ ಅಥವಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲೇ ಬೇಕು ಎಂದು ನಿರ್ಧರಿಸಿದ್ದಾರೆ. ಅಂಥದೊಂದು ಗಟ್ಟಿ ನಿರ್ಧಾರಕ್ಕೆ ಕಾರಣವಾಗಿರುವುದು ಕಾಯಕವೇ ಕೈಲಾಸ ಎನ್ನುವ ವಚನದ ಸಾಲಿನಲ್ಲಿ ಅಡಗಿರುವ ಅಂತರಾರ್ಥ! ಯಾಕೆಂದರೆ ಕೆಲಸವೇ ದೇವರಾದ ಮೇಲೆ ಅದನ್ನು ಬಿಟ್ಟು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎನ್ನುವುದು ದರ್ಶನ್ ನಂಬಿಕೆ.
ಈ ನಿರ್ಧಾರಕ್ಕೂ ಅಭಿಮಾನಿಗಳೇ ಕಾರಣ!

ಅಸಂಖ್ಯಾತ ಕೇಕ್ ಗಳಿಗಾಗಿ ಖರ್ಚು ಮಾಡುವ ಹಣವನ್ನು, ದೈನಂದಿನ ಆಹಾರಕ್ಕಾಗಿ ಕಷ್ಟಪಡುವವರ ದಿನಸಿ ಸಾಮಾನುಗಳಿಗೆ ಮೀಸಲಿಡುವಂತೆ ದರ್ಶನ್ ಕರೆ ನೀಡಿದ್ದರು. ಈ ಕರೆಗೆ ಕಳೆದ ವರ್ಷ ‘ಡಿ ಬಾಸ್ ಅಭಿಮಾನಿಗಳು’ ಹೇಗೆ ಸ್ಪಂದಿಸಿದ್ದರೋ, ಅದರ ದುಪ್ಪಟ್ಟು ರೀತಿಯಲ್ಲಿ ಈ ಬಾರಿಯೂ ಬಾಸ್ ಆಸೆಯನ್ನು ಫ್ಯಾನ್ಸ್ ನೆರವೇರಿಸಿದ್ದಾರೆ. ಅವರು ಮಾಡುತ್ತಿರುವ ಸೇವೆಗಳ ಅಸಂಖ್ಯಾತ ವಿಡಿಯೋಗಳಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಲಿವೆ. ಇದನ್ನು ಮೆಚ್ಚಿರುವ ದರ್ಶನ್ ಅವರು ಕೂಡ ತಾವು ದುಡಿದು ಸಂಪಾದಿಸಿರುವ ಹಣವನ್ನು ಈ ರೀತಿ ದಾನ ಮಾಡಿದ್ದಾರೆ.
ಆದರೆ ನಾನು ಮಾತ್ರ ರಜಾ ಹಾಕಿ ಅವರ ಪರಿಶ್ರಮವನ್ನು ಆನಂದಿಸುವ ಮನಸ್ಥಿತಿ ಸರಿಕಾಣುವುದಿಲ್ಲ ಎಂದಿದ್ದಾರೆ. ವಿಶೇಷ ಎಂದರೆ ಜನ್ಮದಿನ ಮಾತ್ರವಲ್ಲ, ಉಳಿದಂತೆಯೂ ದರ್ಶನ್ ಸ್ವತಃ ದಾನ ಧರ್ಮಗಳನ್ನು ಮಾಡುತ್ತಾರೆ. ಆದರೆ ಅವುಗಳನ್ನು ಎಂದಿಗೂ ಮಾಧ್ಯಮಗಳ ಮೂಲಕ ಹೇಳಿಕೊಳ್ಳುವ ಆಸಕ್ತಿ ಅವರಿಗಿಲ್ಲ. ಅವರು ಹೇಳದಿದ್ದರೂ ಅವರ ದಾನಗುಣದ ಬಗ್ಗೆ ಅರ್ಥಮಾಡಿಕೊಂಡಿರುವ ಅಭಿಮಾನಿಗಳಿಗೆ ಆ ಬಗ್ಗೆ ಯಾವುದೇ ಸಾಕ್ಷಿಗಳೂ ಬೇಕಾಗಿಲ್ಲ. ಯಾಕೆಂದರೆ ಈ ಡಿ ಬಾಸ್ ಫ್ಯಾನ್ಸ್ ತಮ್ಮ ಬಾಸ್ ಮೇಲೆ ಇಟ್ಟಿರುವ ನಂಬಿಕೆ ಅಂಥದ್ದು!
ಮೊಲ, ಬಾತುಕೋಳಿಗಳೇ ಉಡುಗೊರೆ!
ಉಡುಗೊರೆ ಬೇಡ ಎಂದ ದರ್ಶನ್ ಏನು ಕೊಟ್ಟರೆ ಸ್ವೀಕರಿಸುತ್ತಾರೆ ಎನ್ನುವುದು ಕೂಡ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಅವರು ಮುದ್ದಾದ ಮೊಲಗಳನ್ನು, ಬಾತುಕೋಳಿಗಳನ್ನು ಉಡುಗೊರೆಯಾಗಿ ತಂದಿದ್ದಾರೆ! ಇಂದು ಜನ್ಮದಿನದ ಸಂಭ್ರಮದ ನಡುವೆ ಮನೆ ಮುಂದಿನ ವೇದಿಕೆಗೆ ಬಂದ ದರ್ಶನ್ ವಿಶೇಷ ಚೇತನ ಅಭಿಮಾನಿಗಳ ಹಾರೈಕೆಗಳನ್ನು ಮೊದಲು ಸ್ವೀಕರಿಸಿದರು. ಈ ಬಾರಿ ಈ ಹಿಂದಿಗಿಂತ ಹೆಚ್ಚಿನ ಮಟ್ಟದಲ್ಲಿ ಮಹಿಳಾ ಅಭಿಮಾನಿಗಳು ನೆರೆದು ಬಂದಿದ್ದು ವಿಶೇಷವಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಬರುತ್ತಿರುವ ಅಭಿಮಾನಿಗಳನ್ನು ನೋಡುತ್ತಿದ್ದರೆ, ಬಹುಶಃ ಇದು ಅಭಿಮಾನಿಗಳ ರಾಜ್ಯೋತ್ಸವವಾಗಿ ಬದಲಾಗುವ ದಿನಗಳು ದೂರವಿಲ್ಲ ಎನ್ನುವಂತಿದೆ.






