‘ಸಕೂಚಿ’ ಸಿನಿಮಾ ಟ್ರೇಲರ್ ತೆರೆಗೆ

“ಎಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನು ಆಗ ಕೊಪ್ಪದಲ್ಲಿದ್ದೆ. ಅಲ್ಲೊಂದು ಸಿಡಿಲು ಬಿದ್ದ ಮನೆ. ಮನೆಯೊಳಗಿನಿಂದ ಸಕೂಚಿ ಶಬ್ದ ಕೇಳಿತ್ತು. ನಾಲ್ಕು ವರ್ಷಗಳ ಹಿಂದೆ ವಿಜಯನಗರದ ವಡ್ಡರ ಪಾಳ್ಯದಲ್ಲಿಯೂ ಅದೇ ‘ಸಕೂಚಿ’ ಎನ್ನುವ ಶಬ್ದ ಕೇಳಿದ್ದೆ. ಆಮೇಲೆ ತಿಳಿದಿದ್ದೇನೆಂದರೆ ಭಯಾನಕ ವಾಮಾಚಾರದ ಪದವೇ ಸಕೂಚಿ!” ಹೀಗೆ ನಿರ್ದೇಶಕ ಅಶೋಕ್ ಎಸ್ ವಿವರಿಸುತ್ತಿದ್ದರೆ ಸಭಾಂಗಣದೊಳಗೆ ಗಾಢಮೌನವಿತ್ತು.

ಅಶೋಕ್ ಎಸ್ ಪ್ರಥಮ ಬಾರಿ ನಿರ್ದೇಶಿಸುತ್ತಿರುವ ಚಿತ್ರವೇ ಸಕೂಚಿ. ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜನ ತುಂಬಿ ತುಳುಕುತ್ತಿದ್ದರು. ಆದರೆ ನಿರ್ದೇಶಕರು ವೇದಿಕೆ ಮೇಲೆ ನಿಂತು ತಮ್ಮ ಭಯಾನಕ ಸ್ವಾನುಭವ ಹಂಚಿಕೊಳ್ಳುವಾಗ ಅಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಕಾರಣ ಹಾರರ್ ಚಿತ್ರದ ಅನುಭವಗಳನ್ನು ಕೇಳಲು ಪ್ರೇಕ್ಷಕರು ಕಾತರರಾಗಿದ್ದರು. ಚಿತ್ರೀಕರಣ ಆರಂಭಿಸಿದ 11ನೇ ದಿನದೊಳಗೆ ಮಾವ ತೀರಿಕೊಂಡದ್ದು, ಬಳಿಕ ತಂದೆಯ ಸಾವಾಗಿದ್ದು ಎಲ್ಲವನ್ನು ಅನುಭವಗಳ ಪಟ್ಟಿಗೆ ಸೇರಿಸಿ ನಿರ್ದೇಶಕರು ಮೌನವಾದರು.

ಚಿತ್ರದ ನಾಯಕ ತ್ರಿವಿಕ್ರಮ್ ‘ಪದ್ಮಾವತಿ’ ಧಾರಾವಾಹಿಯಲ್ಲಿ ಸಾಮ್ರಾಟ್ ಆಗಿ ಕಾಣಿಸಿರೋದಕ್ಕಿಂತ ತೀರ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಡ್ಯಾನ್ಸ್ ಬಾರದ ತನ್ನನ್ನು ನೃತ್ಯ ನಿರ್ದೇಶಕರು ಚೆನ್ನಾಗಿ ಕುಣಿಸಿರುವುದಾಗಿ ಅವರು ಹೇಳಿದರು. ಎಂಥವರೂ ಕುಣಿಯುವಂಥ ಸಂಗೀತದಲ್ಲಿರು ಟಪ್ಪಾಂಗುಚ್ಚಿ ಗೀತೆಯೊಂದು ಟಗರು ಖ್ಯಾತಿಯ ಆಂಟನಿ ದಾಸನ್ ಕಂಠದಲ್ಲಿದ್ದು ಹಾಡು ಸೇರಿದಂತೆ ಟ್ರೇಲರ್ ಪ್ರದರ್ಶನ ನಡೆಯಿತು. ಸಂಗೀತ ನಿರ್ದೇಶಕ ಗಣೇಶ್ ಗೋವಿಂದ ಸ್ವಾಮಿ ತಾನು ‘ಬೀಟ್ ಗುರು’ ತಂಡದಲ್ಲಿದ್ದೆ. ಅಸಿಸ್ಟೆಂಟ್ ಆಗಿ ಹಲವಾರು ಚಿತ್ರಗಳಿಗೆ ಮ್ಯೂಸಿಕ್ ಮಾಡಿದ್ದೆ. ಸಂಗೀತ ನಿರ್ದೇಶಕ‌ನಾಗಿರುವುದು ಇದೇ ಮೊದಲು’ ಎಂದರು.

ನಾಯಕಿ ಡಯಾನ‌ ಮೇರಿ ಮಾತನಾಡಿ, ತಾವು ಮಾಡೆಲಿಂಗ್ ಕ್ಷೇತ್ರದಿಂದ ಬಂದಿದ್ದು, ಇದು ಪ್ರಥಮ ಚಿತ್ರ. ಅನುಭವ ಚೆನ್ನಾಗಿತ್ತು ಎಂದರು. ಚಿತ್ರದಲ್ಲಿ 40 ಜನ ಮಂಗಳ ಮುಖಿಯರು ಇದ್ದು ಅವರನ್ನು ಕಷ್ಟಪಟ್ಟು ಬೇರೊಂದು ರೀತಿಯಲ್ಲಿ ಕೂಡ ತೋರಿಸಲಾಗಿದೆಯಂತೆ.
ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆನಂದ್ ಸುಂದರೇಶ್ ಚಿತ್ರದ ಛಾಯಾಗ್ರಹಣ ನಿರ್ವಹಿಸಿದ್ದು, ಮಹಾವೀರ ಪ್ರಸಾದ್ ಚಿತ್ರವನ್ನು ನಿರ್ಮಿಸಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಾಗಿ ಸಾಹಿತಿ ಸಿ.ವಿ ಶಿವಶಂಕರ ಶಾಸ್ತ್ರಿ, ನಟ ನೀನಾಸಂ ಸತೀಶ್, ಖ್ಯಾತ ನಿರ್ಮಾಪಕ ಕೆ.ಮಂಜು, ಗೊಂಬೆಗಳ ಲವ್ ಖ್ಯಾತಿಯ ಅರುಣ್ ಮೊದಲಾದವರು ಉಪಸ್ಥಿತರಿದ್ದರು.

Recommended For You

Leave a Reply

error: Content is protected !!