ವಾಣಿಜ್ಯ ಮಂಡಳಿ ಆಮಿಷಕ್ಕೊಳಗಾಗಿದೆ- ಟೇಶಿ ವೆಂಕಟೇಶ್

“ಹಿಂದೆ ಕನ್ನಡ ಚಿತ್ರಗಳಿಗೆ ಪರಭಾಷಾ ಚಿತ್ರಗಳ ದಬ್ಬಾಳಿಕೆ ಇರಲಿಲ್ಲ. ಯಾಕೆಂದರೆ ವಾಣಿಜ್ಯ ಮಂಡಳಿಗೆ ಅದನ್ನು ಎದುರಿಸುವ ಶಕ್ತಿ ಇತ್ತು. ಸ್ಕ್ರೀನಿಂಗ್ ಕಮಿಟಿಯ ಮೂಲಕ ಇಷ್ಟೇ ಚಿತ್ರಗಳು ಬಿಡಗಡೆಯಾಗಬೇಕು ಎನ್ನುವ ತೀರ್ಮಾನ ಮಾಡಲಾಗುತ್ತಿತ್ತು. ಈಗ ಅದೆಲ್ಲ ಬದಲಾಗಿದೆ. ಹಾಗಂತ ಅವರು ದಬ್ಬಾಳಿಕೆಗೆ ಹೆದರಿಲ್ಲ. ಆದರೆ ಪರಭಾಷಾ ಚಿತ್ರೋದ್ಯಮದ ಆಮಿಷಕ್ಕೆ ಒಳಗಾಗಿದ್ದಾರೆ. ಹಾಗಾಗಿ ನಮ್ಮ ಚಿತ್ರಗಳಿಗೆ ನಮ್ಮಲ್ಲೇ ಪ್ರೋತ್ಸಾಹ ಇರದಂತಾಗಿದೆ” ಎನ್ನುವ ಮೂಲಕ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಅವರು ವಾಣಿಜ್ಯ ಮಂಡಳಿಯ ಮೇಲೆ ಗಂಭೀರವಾದ ಆರೋಪ ಮಾಡಿದರು. ಅವರು `ಮೂವಿ ಬಜಾರ್’ಬಗ್ಗೆ ಮಾಹಿತಿ ನೀಡುವುದರ ನಡುವೆ ಈ ಮಾತುಗಳನ್ನು ಹೇಳಿದರು.

12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ  ಭಾಗವಾಗಿ ಎಲ್ಲರಿಂದ ಗಮನ ಸೆಳೆದಿರುವಂಥದ್ದು ಮೂವಿ ಬಜಾರ್.  ಅದಕ್ಕೆ ಪ್ರಮುಖ ಕಾರಣ ತಮ್ಮ ಚಿತ್ರ ವ್ಯಾಪಾರವೇ ಮಾಡುತ್ತಿಲ್ಲ ಎನ್ನುವ ಕೊರಗು ಹೊಂದಿದವರೆಲ್ಲ ಈಗ ಜೀವನ್ಮುಖಿಗಳಾಗಿದ್ದಾರೆ. ಮೂವಿ ಬಜಾರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ಟೇಶಿ ವೆಂಕಟೇಶ್ ಮಾಧ್ಯಮಗೋಷ್ಠಿ ಕರೆದು ಮಾತನಾಡುತ್ತಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸುನೀಲ್ ಪುರಾಣಿಕ್ ಅವರು ಅಧ್ಯಕ್ಷರಾಗಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿತ್ತು. ಯಾಕೆಂದರೆ ಆಗ ಮಾತ್ರ ಸದ್ಯದ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರ ಕಾರ್ಯಗಳು ನಡೆಯಲು ಸಾಧ್ಯ. ಇದೀಗ ಮೂವಿ ಬಜಾರ್ ಯೋಜನೆ ಅಂಥದೇ ಒಂದು ಕಾರ್ಯವಾಗಿದೆ. ಸಿನಿಮಾದ ಟಿ.ವಿ, ಡಿಜಿಟಲ್ ಆನ್ಲೈನ್ ಪ್ರಾಜೆಕ್ಷನ್ ಗಾಗಿ ಈಗಾಗಲೇ ನೂರಾರು ಮಂದಿ ನೋಂದಾವಣಿ ಮಾಡಿದ್ದಾರೆ. ಹೀಗೆ ನೋಂದಾವಣಿ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಸಿನಿಮಾ ಯಾವುದೇ ವರ್ಷದ್ದಾಗಿರಬಹುದು. ಆದರೆ ಹಕ್ಕುಗಳು ಮಾತ್ರ ಮುಕ್ತವಾಗಿರಬೇಕು ಎಂದು ಟೇಶಿ ವೆಂಕಟೇಶ್ ತಿಳಿಸಿದರು.

150 ವಿಭಾಗಗಳಲ್ಲಿ ವ್ಯಾಪಾರ ಮಾಡಿಕೊಳ್ಳಬಹುದು!

“ಮೊದಲು ಸಿನಿಮಾದ ಜತೆಗೆ ಅಗ್ರಿಮೆಂಟ್ ಮಾಡುವಾಗ 12 ವಿಭಾಗಗಳ ಅಗ್ರಿಮೆಂಟ್ ಗೆ ಅಷ್ಟೇ ಸಹಿ ಮಾಡಬೇಕಿತ್ತು. ಈಗ ಸುಮಾರು 150 ವಿಭಾಗಗಳಲ್ಲಿನ ನಮ್ಮ  ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಅಂದರೆ ಆಡಿಯೋ ಸೇರಿದಂತೆ ಸಾಮಾಜಿಕ ಜಾಲತಾಣದ ಎಷ್ಟೋ ವಿಭಾಗಗಳಲ್ಲಿ ನಮ್ಮ ಚಿತ್ರದಿಂದ ದುಡ್ಡು ಮಾಡುವ ಅವಕಾಶಗಳು ಇರುತ್ತವೆ. ಆದರೆ ಇವುಗಳ ಅರಿವಿಲ್ಲದ ನಾವು ನಷ್ಟದಲ್ಲಿ ಹಕ್ಕುಗಳನ್ನು ನೀಡುತ್ತೇವೆ. ಆದರೆ ಇದೀಗ ಚಲನಚಿತ್ರೋತ್ಸವದಲ್ಲಿ ಮಾರುಕಟ್ಟೆ ತೆರೆಯುವ ಮೂಲಕ ದೇಶ, ವಿದೇಶಗಳ ಮಂದಿಗೂ ನಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡುವ ಅವಕಾಶ ಇರುತ್ತದೆ. ಚಿತ್ರದ ಟ್ರೇಲರ್ ನೋಡಿ ಇಷ್ಟವಾದವರಿಗೆ ಸಿನಿಮಾದ 10 ನಿಮಿಷಗಳ ಕಂಟೆಂಟ್ ತೋರಿಸಲಾಗುತ್ತದೆ. ಅದನ್ನು ಅವರು ಇಷ್ಟಪಟ್ಟರೆ ಮುಂದಿನ ಮಾತುಕತೆ ನಡೆಯುತ್ತದೆ ಎಂದು ಹಿರಿಯ ನಿರ್ದೇಶಕರಾದ ಬಿ ಆರ್ ಕೇಶವ ಅವರು ವಿವರಿಸಿದರು.

ಚಲನಚಿತ್ರೋತ್ಸವವು ಇದೇ 26ರಿಂದ ಆರಂಭಗೊಳ್ಳಲಿದೆ. ಆದರೆ ಚಿತ್ರೋತ್ಸವ ಮುಗಿದ ಬಳಿಕ ಮೂರು ತಿಂಗಳಿಗೊಮ್ಮೆ ಮೂವಿ ಬಜಾರ್ ಮುಂದುವರಿಸುವ ಯೋಜನೆ ಇರುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು. ಮಾಧ್ಯಮಗೋಷ್ಠಿಯಲ್ಲಿ ಪ್ರಮುಖ ನಿರ್ದೇಶಕ, ನಿರ್ಮಾಪಕರು ಭಾಗಿಯಾಗಿದ್ದರು.

Recommended For You

Leave a Reply

error: Content is protected !!