ಮೂರನೇ ವಾರದತ್ತ ‘ಥರ್ಡ್ ಕ್ಲಾಸ್’ ಚಿತ್ರ

ಥರ್ಡ್ ಕ್ಲಾಸ್ ಚಿತ್ರ ಮೂರನೇ ವಾರಕ್ಕೆ ಮುಂದುವರಿದಿದೆ. ಒಂದು ವಾರ ಕೂಡ ಥಿಯೇಟರ್ ನಲ್ಲಿ ಉಳಿಯುವುದು ಕಷ್ಟ ಎನ್ನುವಂಥ ಸಂದರ್ಭದಲ್ಲಿ ಮೂರು ವಾರಕ್ಕೆ ಮುಂದುವರಿದಿರುವುದೇ ಯಶಸ್ಸಿನ ಸಂಕೇತ ಎಂದುಕೊಂಡಿದ್ದೇನೆ ಎಂದು ಚಿತ್ರದ ನಿರ್ದೇಶಕ ಅಶೋಕ್ ದೇವ್ ಹೇಳಿದರು.

” ಥರ್ಡ್ ಕ್ಲಾಸ್ ಸಿನಿಮಾ ನೋಡಿ ಹೆಚ್ಚಿನ ಮಂದಿ ಚೆನ್ನಾಗಿಲ್ಲ ಎಂದು ಹೇಳುವವರು ಇದ್ದಲ್ಲಿ ಥಿಯೇಟರ್ ನಿಂದ ನಾನೇ ತೆಗೆಯುತ್ತಿದ್ದೆ” ಎಂದು ಚಿತ್ರದ ನಿರ್ದೇಶಕ ಮತ್ತು ನಾಯಕರಾದ ನಮ್ ಜಗದೀಶ್ ಹೇಳಿದರು. ಹೆಣ್ಣು ಮಕ್ಕಳು ಕೂಡ ಚಿತ್ರದ ಕ್ಲೈಮ್ಯಾಕ್ಸ್ ಕಣ್ಣಲ್ಲಿ ನೀರು ಎನ್ನುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ‘ಜೋಪಾನ’ ಎನ್ನುವ ಚಿತ್ರವನ್ನು ಲಾಂಚ್ ಮಾಡುವ ಯೋಜನೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ ಸಿನಿಮಾ, ಇಂದು 35ರಷ್ಟು‌‌ ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದೆ. ಮೊದಲ ದಿನ ಮೊದಲ ಶೋ ಉಚಿತವಾಗಿತ್ತು. 50 ಸಾವಿರ ಆಟೋ ಡ್ರೈವರ್ ಗಳಿಗೆ ಉಚಿತವಾಗಿ ಇನ್ಸೂರೆನ್ಸ್ ಮಾಡಿಸಿದ್ದೇನೆ. ಜನ ಸಮಾಜ ಸೇವೆ ಮಾಡಿದ್ದೇನೆ ಎನ್ನುವ ನೆನಪು ಇರಿಸಿಕೊಂಡು‌ ಸಿನಿಮಾ ನೋಡಲು ಬರಲಿಲ್ಲ. ಆದರೆ ಅದಕ್ಕೆ ನನಗೆ ಬೇಸರವೂ ಇಲ್ಲ. ಯಾಕೆಂದರೆ ಆ ಸೇವೆಗಳನ್ನು ನಾನು ನನ್ನ ಆತ್ಮತೃಪ್ತಿಗಾಗಿ ಮಾಡಿದ್ದೇನೆ ಎಂದು ನಮ್ ಜಗದೀಶ್ ಹೇಳಿದರು.

ಭಾವುಕಳಾದ ರೂಪಿಕಾ

‘ಚೆಲುವಿನ ಚಿಲಿಪಿಲಿ’ ಎನ್ನುವ ಚಿತ್ರದ ಬಳಿಕ ನನ್ನ ಯಶಸ್ಸು ಕಂಡಿರುವ ಚಿತ್ರ ಅಂದರೆ ಇದೇ ಎನ್ನಬಹುದು. ಯಾಕೆಂದರೆ ಅದರ ಬಳಿಕ ನಾನು ನಾಯಕಿಯಾಗಿರುವ ಚಿತ್ರವೊಂದು ಸಕ್ಸಸ್ ಮೀಟ್ ನಡೆಸುತ್ತಿರುವುದು ಇದೇ ಪ್ರಥಮ. ಚಿತ್ರದಲ್ಲಿನ ನನ್ನ ನಟನೆಯ ಬಗ್ಗೆ ವಿಮರ್ಶಕರಿಂದ ಹಿಡಿದು ಸಾಮಾನ್ಯ ಪ್ರೇಕ್ಷಕರ ತನಕ ಪ್ರತಿಯೊಬ್ಬರೂ ಪ್ರಶಂಸಿಸಿದ್ದಾರೆ. ಚಿತ್ರ ಬಿಡುಗಡೆಯಂದು ಥಿಯೇಟರ್ ಮುಂದೆ ಹಾಕಲಾಗಿದ್ದ ನನ್ನ ಕಟೌಟ್ ನೋಡಿ ನನ್ನ ತಾಯಿ ಸೇರಿದಂತೆ ಮನೆ ಮಂದಿ ಸಂಭ್ರಮಿಸಿದ್ದು ಕಂಡಾಗ ನನಗೂ ಸಂತೋಷವಾಗಿತ್ತು. ನಾನು ಇದುವರೆಗೆ ನಟಿಸಿದ ಯಾವ ಚಿತ್ರದ ಬಗ್ಗೆ ಹೇಳುವಾಗಲೂ ನನ್ನ ಅಭಿನಯವನ್ನು ಯಾರೂ ಚೆನ್ನಾಗಿಲ್ಲ ಎಂದು ಹೇಳಿಲ್ಲ. ಆದರೆ ನನಗೆ ನನ್ನ ಸಾಮರ್ಥ್ಯ ತೋರಿಸುವಂಥ ಪಾತ್ರ ಮಾತ್ರ ಸಿಗಲೇ ಇಲ್ಲ. ಅದಕ್ಕಾಗಿ ನಾನು ಚಿತ್ರೋದ್ಯಮವನ್ನು ದೂರುವುದಿಲ್ಲ. ಇನ್ನಷ್ಟು ಕಾದು ನೋಡುತ್ತೇನೆ ಎಂದರು ರೂಪಿಕಾ.

ಪೋಷಕ‌ ನಟರಾಗಿ ಕಾಣಿಸಿಕೊಂಡ ವಸಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆರ್ ಜೆ ಅನಿಲ್ ಕಾರ್ಯಕ್ರಮ ನಿರೂಪಿಸಿದರು.

Recommended For You

Leave a Reply

error: Content is protected !!