ಸೆಲೆಬ್ರಿಟಿ ಡಿಸೈನರ್ ಲಕ್ಷ್ಮೀ ಕೃಷ್ಣ ಈ ವರ್ಷದ ಕ್ಯಾಲೆಂಡರ್ ಹೊರ ತಂದಿದ್ದಾರೆ. ಇದು ಸೆಲೆಬ್ರಿಟಿಗಳಿಂದ ಸೆಲೆಬ್ರಿಟಿಗಳಿಗೆ ಎನ್ನುವಂಥ ಕ್ಯಾಲೆಂಡರ್ ಆಗಿದ್ದು, ಅದರಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಮುಂದಿನ ಮಾರ್ಚ್ ತಿಂಗಳ ತನಕದ ದಿನಾಂಕಗಳು ಅಚ್ಚಾಗಿವೆ.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪ್ರಿಯಾಂಕಾ ಉಪೇಂದ್ರ , “ಮುಂದೆ ನಾಯಕ ನಟರ ಕ್ಯಾಲೆಂಡರ್ ಕೂಡ ಬರಲಿ. ಯಾಕೆಂದರೆ ಇದು ಫ್ಯಾಷನ್ ತುಂಬಿದ ಕ್ಯಾಲೆಂಡರ್. ಅವರಿಗೂ ಫ್ಯಾಷನ್ ಇರುವ ಕಾಸ್ಟ್ಯೂಮ್ ಪ್ರದರ್ಶಿಸಲು ಉತ್ತಮ ಅವಕಾಶ” ಎಂದರು. ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ‘ನೀರ್ ದೋಸೆ’ ಚಿತ್ರದ ನಿರ್ಮಾಪಕ ಪ್ರಸನ್ನ ಮಾತನಾಡಿ, “ನಿರ್ಮಾಪಕರ ಕುರಿತಾದ ಕ್ಯಾಲೆಂಡರ್ ಕೂಡ ಬರಲಿ. ಯಾಕೆಂದರೆ ನಟ,ನಟಿಯರ ಕ್ಯಾಲೆಂಡರ್ ಹೊಸದೇನಲ್ಲ. ಆದರೆ ನಿರ್ಮಾಪಕರ ಕ್ಯಾಲೆಂಡರ್ ಬಂದರೆ ಚೆನ್ನಾಗಿರುತ್ತೆ” ಎಂದರು.
ನಟಿಯರಾದ ಕಾರುಣ್ಯಾ ರಾಮ್, ಸಿಂಧು ಲೋಕನಾಥ್, ರಾಧಿಕಾ ಚೇತನ್, ಮೊದಲಾದವರ ಚಿತ್ರಗಳಿದ್ದ ಕ್ಯಾಲೆಂಡರ ಬಿಡುಗಡೆ ಸಮಾರಂಭದಲ್ಲಿ ಸುಮನ್ ನಗರ್ಕರ್ ದಂಪತಿ, ಸ್ಪರ್ಶ ರೇಖಾ, ವೈನಿಧಿ ಜಗದೀಶ್ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು. ನಿಮಿಕಾ ರತ್ನಾಕರ್ ನೇತೃತ್ವದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಕಾಸ್ಟ್ಯೂಮ್ ಡಿಸೈನರ್ ಸೋಮು ಉಪಸ್ಥಿತರಿದ್ದರು. ಲಕ್ಷ್ಮೀ ಕೃಷ್ಣ ಅವರು ಇದು ಎರಡನೇ ಬಾರಿ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿದ್ದು ಸುಮನ್ ನಗರ್ಕರ್ ಅವರ ನಟನೆಯ ‘ವಾರ್ಡ್11’ ಚಿತ್ರಕ್ಕೂ ಅವರೇ ವಸ್ತ್ರ ವಿನ್ಯಾಸಕಿ ಎನ್ನುವುದನ್ನು ಸ್ಮರಿಸಲಾಯಿತು.