‘ಸೀತಮ್ಮ ಬಂದಳು ಸಿರಿ ಮಲ್ಲೆ ತೊಟ್ಟು’ ಎನ್ನುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ವಾರ ತೆರೆಗೆ ಬರಲಿರುವ ಚಿತ್ರದ ನಿರ್ದೇಶಕ ಅಶೋಕ್ ಕಡಬ “ಇದು ಹೆಣ್ಣಿನ ಬಗ್ಗೆ ಮಾಡಿರುವಂಥ ಕಲಾತ್ಮಕ ಚಿತ್ರ” ಎಂದು ಮಾತು ಶುರು ಮಾಡಿದರು. ಚಿತ್ರದಲ್ಲಿ ಹೊಸ ಕಲಾವಿದರು ಇದ್ದಾರೆ. ಕತೆಗೆ ಪ್ರಾಧಾನ್ಯತೆ ಇದೆ. ಚಿತ್ರ ನೋಡಿದವರಿಗೆ ಒಂದು ಮಲಯಾಳಿ ಸಿನಿಮಾ ನೋಡಿದ ಅನುಭವ ಸಿಗಲಿದೆ ಎಂದು ಅಶೋಕ್ ತಿಳಿಸಿದರು.
ನಾಯಕಿ ಮಾಡೆಲಿಂಗ್ ಬ್ಯೂಟಿ ಸಂಹಿತಾ ಮಾತನಾಡಿ, “ಇದು ಬಿಡುಗಡೆಯಾಗುತ್ತಿರುವ ನನ್ನ ನಾಲ್ಕನೇ ಚಿತ್ರ. ಅಶೋಕ್ ಕಡಬ ಅವರ ನಿರ್ದೇಶನದಲ್ಲಿ ಎರಡನೇ ಚಿತ್ರ. ಸಿನಿಮಾದ ಬಹುತೇಕ ದೃಶ್ಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಪಕ್ಕಾ ಕಲಾತ್ಮಕ ರೀತಿಯಲ್ಲಿ ಶೂಟಿಂಗ್ ಮಾಡಲಾಗಿದೆ” ಎಂದರು.
ಚಿತ್ರದ ನಾಯಕ ನಂದೀಶ್ ರಂಗಭೂಮಿ ನಟ. ಕತೆ ಕೇಳಿ ಇಷ್ಟವಾಯಿತು. ಮಳೆ, ಪಾಚಿಕಟ್ಟಿದ ಮರಗಳು ಮತ್ತು ಹಾವುಗಳ ನಡುವೆ ಚಿತ್ರದ ಕತೆ ಸಾಗುತ್ತದೆ. ಆಗುಂಬೆ ಘಾಟಿಯಲ್ಲಿನ ಚಿತ್ರೀಕರಣ ಅವಿಸ್ಮರಣೀಯ. ಸ್ನೇಹಿತನನ್ನು ಹುಡುಕಿಕೊಂಡು ಬಂದಿರುವಾತನಿಗೆ ಆತ ತೀರಿ ಹೋಗಿರುವುದು ತಿಳಿಯುತ್ತದೆ. ಆಮೇಲೆ ಏನು ನಡೆಯುತ್ತದೆ ಎನ್ನುವುದೇ ಪ್ರಮುಖ ಕತೆ ಎಂದಿದ್ದಾರೆ. ಅಂದಹಾಗೆ ಇದು ತೊಂಬತ್ತರ ದಶಕದಲ್ಲಿ ನಡೆದ ಕತೆಯಂತೆ ತೋರಿಸಲಾಗಿದೆ. ಚಿತ್ರದಲ್ಲಿ ಮೊಬೈಲ್ ಫೋನ್ ಬಳಕೆ ಇರುವುದಿಲ್ಲ.
ಬಿ ಹನುಮಂತ ರಾಜು ಅವರು ಚಿತ್ರವನ್ನು ನಿರ್ಮಿಸಿದ್ದಾರೆ. “ನಾನು ರಿಯಲ್ ಎಸ್ಟೇಟ್ ಅರ್ಧಂಬರ್ಧ ಮಾಡಿದ್ದೆ. ಸ್ನೇಹಿತರ ಒತ್ತಾಯದ ಮೇರೆಗೆ ಚಿತ್ರ ನಿರ್ಮಿಸಿದೆ. ಮುಂದೆ ಕೂಡ ವರ್ಷಕ್ಕೊಂದು ಸಿನಿಮಾ ಮಾಡುವ ಯೋಜನೆ ಇದೆ” ಎಂದು ಅವರು ಹೇಳಿದರು.
ಫೆಬ್ರವರಿ 21ರಂದು ಶುಕ್ರ ಫಿಲಮ್ಸ್ ಮೂಲಕ ಚಿತ್ರವನ್ನು 45 ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಂಡ ತಿಳಿಸಿದೆ.