
“ಇದು ಉತ್ತರ ಕರ್ನಾಟಕದಿಂದ ಬಂದಿರುವ ತಂಡ. ನಾನು ಕೂಡ ಅಲ್ಲಿಯವನೇ. ಹಾಗಾಗಿ ಈ ತಂಡಕ್ಕೆ ನಿಮ್ಮೆಲ್ಲರ ಬೆಂಬಲ ಬಯಸುವುದು ನನ್ನ ಕರ್ತವ್ಯ. ಶುಭವಾಗಲಿ” ಎಂದು ಚಿತ್ರತಂಡಕ್ಕೆ ಶುಭ ಕೋರಿದರು ಡಿ.ಎಸ್ ಮ್ಯಾಕ್ಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಯಾನಂದ್. ಅವರು ‘ಎಲ್ಲಿ ನನ್ನ ವಿಳಾಸ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಬಸವರಾಜ್ ಪಡುಕೋಟೆ ಮಾತನಾಡಿ, “ರಾಜ್ಯದ ಎಲ್ಲ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಚಿತ್ರವನ್ನು ಪ್ರೋತ್ಸಾಹಿಸಲು ಹೇಳುವುದಾಗಿ” ತಿಳಿಸಿದರು.
ಚಿತ್ರದ ನಾಯಕ ಅಜಯ್ ಅದಿತ್ ತಮ್ಮ ಪಾತ್ರದ ಬಗ್ಗೆ ಹೇಳುತ್ತಾ, “ಯಾರ ಮಾತನ್ನು ಕೇಳದ ವಯಸ್ಸಿನಲ್ಲಿ ಅನುಭವಿಸುವ ಬದುಕು ಹೇಗೆ ಇರುತ್ತದೆ ? ಅದರ ಫಲ ಹೇಗಿರಬಹುದು ? ಎನ್ನುವುದನ್ನು ಹೇಳುವ ಚಿತ್ರ ಇದು” ಎಂದರು.
ನಾಯಕಿ ಪವಿತ್ರಾ ನಾಯಕ್ ಪ್ರಕಾರ “ವಿಳಾಸ ಹುಡುಕಿಕೊಂಡು ಕಾಡಿಗೆ ಯಾಕೆ ಹೋಗುತ್ತಾರೆ ಎನ್ನುವುದೇ ಟ್ರೇಲರ್ ನೋಡಿದವರಿಗೆ ಕಾಡುವ ಪ್ರಥಮ ಪ್ರಶ್ನೆ. ಅದಕ್ಕೆ ಉತ್ತರ ಚಿತ್ರದಲ್ಲಿದೆ” ಯಂತೆ
ಚಿತ್ರದ ನಿರ್ದೇಶಕ ಸಾಗರ್ ಎಸ್ ಗಾವಡೆ ಮಾತನಾಡಿ, “ತಂದೆ ಮತ್ತು ಮಕ್ಕಳ ಬಾಂಧವ್ಯದ ಬಗ್ಗೆ ಒಂದು ಸಂದೇಶ ಕೊಡಬೇಕು ಅನಿಸಿತು. ಯಾಕೆಂದರೆ ನಾನು ಸಿನಿಮಾ ಮಾಡಲು ಹೊರಟಾಗ ನನಗೂ ತಂದೆಯೊಂದಿಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಆದರೆ ಅದನ್ನು ಹೇಗೆ ಸೌಮ್ಯವಾಗಿ ಪರಿಹರಿಸಿ ಮುನ್ನುಗ್ಗುವುದು ಎನ್ನುವುದು ಎಲ್ಲರೂ ತಿಳಿದಿರಬೇಕಾದ ವಿಚಾರ” ಎಂದರು. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಯಾರೊಂದಿಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ನನಗಿಲ್ಲ. ಸ್ನೇಹಿತರ ನಡುವೆ ವಿಮರ್ಶಕನಾಗಿ ಗುರುತಿಸಿಕೊಂಡವನು. ಇಂಡಸ್ಟ್ರಿಯಲ್ಲಿ ನನಗೂ ಒಂದು ವಿಳಾಸ ಸಿಗಲಿ ಎಂದು ಪ್ರಯತ್ನಿಸಿದ್ದೇನೆ ಎಂದರು. ಚಿತ್ರದಲ್ಲಿ ವಿಳಾಸ ಎನ್ನುವುದು ಒಂದು ಪಾತ್ರದ ಹೆಸರು ಕೂಡ ಹೌದು. ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ ಇರಿಸಲಾಗಿದೆ. ಹಾಗಂತ ಪ್ರೇಕ್ಷಕರಿಗೆ ಯಾವುದೇ ಗೊಂದಲಗಳಾಗುವುದಿಲ್ಲ ಎಂದು ನಿರ್ದೆಶಕರು ಸಮಜಾಯಿಷಿ ನೀಡಿದರು.
“ಯುವ ಜನತೆ ದಾರಿ ತಪ್ಪುವಾಗ ಅವರಿಗೆ ಬುದ್ಧಿ ಹೇಳಿ ಸರಿ ಪಡಿಸಬೇಕು ಎನ್ನುವುದು ಚಿತ್ರದ ಮೂಲಕ ನೀಡಲಾಗಿರುವ ಸಂದೇಶ” ಎಂದು ನಿರ್ಮಾಪಕ ಸಂತೋಷ್ ಎಸ್ ಗಾವಡೆ ಹೇಳಿದರು.
ಹಿರಿಯ ಪೋಷಕ ನಟರಾದ ಗಣೇಶ್ ರಾವ್ ಕೇಸರ್ಕರ್ ಅವರು “ಚಿತ್ರದಲ್ಲಿ ನನ್ನದು ನಾಯಕಿಯ ತಂದೆಯ ಪಾತ್ರ. ತಾಳಿಕೋಟೆಯಲ್ಲೇ ಚಿತ್ರೀಕರಣ ಇತ್ತು. ಅಲ್ಲಿನ ಜನತೆ ಚಿತ್ರೀಕರಣದ ಬಳಿಕ ಸನ್ಮಾನ ಮಾಡಿ ಕಳಿಸಿದ್ದು ಕಲಾವಿದರ ಮೇಲೆ ಅವರಿಗಿರುವ ಅಭಿಮಾನವನ್ನು ಸೂಚಿಸುತ್ತದೆ” ಎಂದರು. ಈ ಸಂದರ್ಭದಲ್ಲಿ ಚಿತ್ರದ ಸಹ ನಿರ್ಮಾಪಕರಾದ ಲತೀಫ್ ಎನ್ ನದಾಫ್ ಉಪಸ್ಥಿತರಿದ್ದರು.
