‘ಇತ್ಯರ್ಥ’ ಧ್ವನಿ ಸಾಂದ್ರಿಕೆ ಲೋಕಾರ್ಪಣೆ

“ಇವತ್ತು ಎರಡರಲ್ಲಿ ಒಂದು ಇತ್ಯರ್ಥ ಆಗಲೇಬೇಕು” ಎಂದು ಗುಡುಗಿದರು ಲಹರಿ ವೇಲು!

ಸಾಮಾನ್ಯವಾಗಿ ಅವರು ಸಿನಿಮಾ ಮಾಧ್ಯಮಗೋಷ್ಠಿಗಳಲ್ಲಿ ಚಿತ್ರರಂಗ ಎದುರಿಸುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ, ತಪ್ಪಿತಸ್ಥರು ಎನಿಸಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುವುದು ಇರುವಂಥದ್ದೇ! ಈ ಬಾರಿ ಯಾವ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಕುತೂಹಲ ಹೆಚ್ಚು ಹೊತ್ತು ಉಳಿಯದ ಹಾಗೆ, ಅವರು ಚಿತ್ರದ ಪೋಸ್ಟರ್ ಕಡೆಗೆ ಕೈ ತೋರಿಸಿದರು. ಅಲ್ಲಿ ‘ಇತ್ಯರ್ಥ’ ಎಂದು ಚಿತ್ರದ ಹೆಸರನ್ನು ದಪ್ಪವಾಗಿ ಬರೆಯಲಾಗಿತ್ತು.

ಅವರು ಎ. ಜೆ ಶೇಷಾದ್ರಿ ನಿರ್ದೇಶನದ ‘ಇತ್ಯರ್ಥ’ ಸಿನಿಮಾದ ಆಡಿಯೋ‌ ಸಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ನಿರ್ದೇಶಕ ಎ. ಜೆ . ಶೇಷಾದ್ರಿಯವರು ಮಾತನಾಡಿ, ಇದು ನಾಲ್ವರು ಸೇರಿ ನಿರ್ಮಾಣ ಶುರು ಮಾಡಿದ ಚಿತ್ರ. ಮೂವರು ಕೈ ಕೊಟ್ಟರೂ ಚಿತ್ರ ಪೂರ್ತಿ ಮಾಡಿದವರು ಎನ್ ಎಲ್ ಎನ್ ಮೂರ್ತಿಯವರು. ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮೋಹನ್ ಅವರ ಸ್ನೇಹದಿಂದ ಚಿತ್ರಕತೆ ಚೆನ್ನಾಗಾಯಿತು.‌ ಸಂಗೀತ ನಿರ್ದೇಶಕ ಗೌತಮ್ ಮತ್ತು ನೃತ್ಯ ನಿರ್ದೇಶಕ ತ್ರಿಭುವನ್ ಅವರ ಕಾಂಬಿನೇಶನ್ ಚೆನ್ನಾಗಿ ಮೂಡಿ ಬಂದಿದೆ” ಎಂದರು. ರೊಮಾನ್ಸ್, ಥ್ರಿಲ್ಲರ್, ಹಾರರ್, ಲವ್ ಎಲ್ಲವೂ ಇರುವಂಥ ಚಿತ್ರ ಇದು.ಅರವಿಂದ್ ರಾವ್, ಬಿ ಜಯಶ್ರೀ ಮತ್ತು ನವೀನ್ ಕೃಷ್ಣ ಅವರ ಪಾತ್ರಗಳು ಚಿತ್ರದ ಪ್ರಮುಖ ಟರ್ನಿಂಗ್ ಪಾಯಿಂಟ್. ಕೊನೆಯ ಐದು ನಿಮಿಷ ಸಸ್ಪೆನ್ಸ್ ಏನು ಎನ್ನುವುದನ್ನು ಪತ್ತೆ ಮಾಡುವುದು ಕಷ್ಟ”. ಎಂದು ಶೇಷಾದ್ರಿಯವರು ಭರವಸೆ ವ್ಯಕ್ತಪಡಿಸಿದರು.

ಚಿತ್ರದ ನಾಯಕ ಮೋಹನ್ ಮಾತನಾಡಿ, “ಶೇಷಾದ್ರಿಯವರು ಧಾರಾವಾಹಿ ಕಾಲದಿಂದಲೂ ಪರಿಚಯ. ಒಳ್ಳೆಯ ಬರಹಗಾರರು. ಈ ಚಿತ್ರದಲ್ಲಿ
ಕಳಸ, ಕುಮಟ ಹೀಗೆ ಬೇರೆ ಬೇರೆ ಕಡೆ ಹಾಡಿನ‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಅವಿಸ್ಮರಣೀಯ ಅನುಭವ. ಯಾಕೆಂದರೆ ನನ್ನ ಜೀವನದಲ್ಲಿ ಇಷ್ಟೊಂದು ಸ್ಟೆಪ್ಸ್ ಎಲ್ಲಿಯೂ ಹಾಕಿರಲಿಲ್ಲ” ಎಂದು ನಕ್ಕರು.
ನಾಯಕಿ ಖುಷಿ ಮುಖರ್ಜಿಗೆ ತನ್ನ ಮೇಲೆ ಇದ್ದ ನಂಬಿಕೆಗಿಂತ ನಿರ್ದೇಶಕರ ಮೇಲೆ ಹೆಚ್ಚು ನಂಬಿಕೆ ಇತ್ತಂತೆ. “ನನಗೆ ಡ್ಯಾನ್ಸ್ ರಿಹರ್ಸಲ್ ಸಮಯದಲ್ಲಿ ತ್ರಿಭುವನ್ ಮಾಸ್ಟರ್ ಬಗ್ಗೆ ಭಯವೇ ಬಂದು ಬಿಟ್ಟಿತ್ತು” ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ತ್ರಿಭುವನ್ ಮಾಸ್ಟರ್ ತಾವು ಏನೇ ಕೊರಿಯೋಗ್ರಫಿ ಮಾಡಿದ್ದರೂ ಅದಕ್ಕೆ ಸಂಗೀತವೇ ಸ್ಫೂರ್ತಿ ಎಂದರು.

“ಎ.ಜೆ ಶೇಷಾದ್ರಿಯವರು ಧಾರಾವಾಹಿ ನಿರ್ದೇಶಿಸುತ್ತಿದ್ದಾಗ ಅನುಭವದಲ್ಲಿ ಮಾಗಿದವರಂತೆ ಸನ್ನಿವೇಶ ನೀಡುತ್ತಿದ್ದರು. ಈಗ 20 ವರ್ಷದ ಹುಡುಗನಂತೆ ಯೂತ್ ಫುಲ್ ಚಿತ್ರ ಮಾಡಿದ್ದಾರೆ” ಎಂದು ನಿರ್ದೇಶಕ ವೈವಿಧ್ಯಮಯ ಪ್ರತಿಭೆಯ ಬಗ್ಗೆ ಕಲಾವಿದ ನಾಗರಾಜ್ ಕೋಟೆ ಪ್ರಶಂಸೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ನವೀನ್ ಕೃಷ್ಣ ಮಾತನಾಡಿ, “ನಾನು ನಟನಾಗಲು, ಬರಹಗಾರನಾಗಲು ಶೇಷಾದ್ರಿಯವರೇ ಕಾರಣ” ಎಂದರು. ಅವರು ಕೂಡ ಧಾರಾವಾಹಿಯ ದಿನಗಳನ್ನು ಸ್ಮರಿಸಿಕೊಂಡು ಈ ಮಾತುಗಳನ್ನು ಹೇಳಿದರು. ಅವರೊಂದಿಗೆ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಂಥ ಶ್ರೀನಿವಾಸ ಪ್ರಭುಗಳು ಕೂಡ ಚಿತ್ರದಲ್ಲೊಂದು ಪಾತ್ರ ಮಾಡಿದ್ದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಿರ್ಮಾಪಕ ಎನ್ ಎಲ್ ಎನ್ ಮೂರ್ತಿಯವರು ಛಾಯಾಗ್ರಾಹಕ ಡಿ ಪ್ರಸಾದ್ ಬಾಬು ಅವರ ಕೆಲಸವನ್ನು ಮೆಚ್ಚಿಕೊಂಡರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೇಗೌಡರು ಚಿತ್ರ ತಂಡಕ್ಕೆ ಶುಭ ಹಾರೈಸಿ ತಾವು ತಿರುಪತಿಯಿಂದ ತಂದಂಥ ಪ್ರಸಾದವನ್ನು ಹಂಚಿದ್ದು ವಿಶೇಷವಾಗಿತ್ತು.

ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಾದ ಶಂಕರ್ ಅವರು ಆಡಿಯೋ ಸಿಡಿ ಬಿಡುಗಡೆಗೊಳಿಸಿ, ಮೂರ್ತಿಯವರು ಇನ್ನಷ್ಟು ಚಿತ್ರಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.

Recommended For You

Leave a Reply

error: Content is protected !!
%d bloggers like this: