
ಶಿವರಾಜ್ ಕುಮಾರ್ ಅವರ ‘ಮಫ್ತಿ’ ಚಿತ್ರ ನಿರ್ದೇಶಿಸಿದ ನರ್ತನ್ ಅವರಿಗೆ ತಮಿಳಿನಲ್ಲಿ ಅವಕಾಶ ದೊರಕಿರುವುದು ಎಲ್ಲರಿಗೂ ತಿಳಿದಿರಬಹುದು. ಶಿವಣ್ಣ ಯಾವಾಗಲೂ ಹಾಗೆಯೇ ನಮ್ಮ ನವ ನಿರ್ದೇಶಕರಿಗೆ ಅವಕಾಶ ನೀಡುತ್ತಾರೆ. ಮಾತ್ರವಲ್ಲ ಪರಭಾಷೆಯಲ್ಲಿ ಯುವ ನಟರಿಗೆ ಆ್ಯಕ್ಷನ್ ಕಟ್ ಹೇಳಿದವರೆಲ್ಲ ಒಬ್ಬ ಸೀನಿಯರ್ ಸ್ಟಾರ್ ಗೆ ಸಿನಿಮಾ ಮಾಡಿರುವ ಸರ್ಟಿಫಿಕೇಟ್ ಪಡೆದುಕೊಳ್ಳಲಿಕ್ಕಾಗಿ ಬರುವುದೇ ಶಿವಣ್ಣನ ಬಳಿಗೆ. ಹಾಗಾಗಿ ಶಿವಣ್ಣನ ಚಿತ್ರ ಮಾಡಲು ಭಾಷೆಯ ಗಡಿದಾಟಿ ನಿರ್ದೇಶಕರು ಕ್ಯೂ ನಿಲ್ಲುತ್ತಾರೆ.
ಶಿವಣ್ಣನ ಫ್ಯಾನ್ ರವಿ ಅರಸು!
ಈ ಬಾರಿ ಸೆಟ್ಟೇರಿರುವ ಶಿವಣ್ಣನ ‘ಆರ್ ಡಿ ಎಕ್ಸ್’ ಚಿತ್ರದ ನಿರ್ದೇಶಕರ ಜತೆಗೆ ನಿರ್ಮಾಪಕರು ಕೂಡ ಪರಭಾಷೆಯವರು. ಹಾಗಾಗಿ ನಮ್ಮ ಕಲಾವಿದರಿಗೆ ತಂತ್ರಜ್ಞರಿಗೆ ಪ್ರಮುಖ ಅವಕಾಶಗಳು ಕೈ ಜಾರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅದನ್ನು ಸುಳ್ಳು ಮಾಡಿದ್ದಾರೆ ನಿರ್ದೇಶಕ ರವಿ ಅರಸು. ಅದಕ್ಕೆ ಕಾರಣ ಅವರು ಫಾಲೋ ಮಾಡಿರುವಂಥ ಕನ್ನಡ ಚಿತ್ರಗಳು.
ರವಿ ಅರಸು ಎನ್ನುವ ಹೆಸರು ನೋಡುವಾಗ ಕನ್ನಡಿಗರಂತೆ ಕಂಡರೂ, ಇವರು ಪಕ್ಕಾ ತಮಿಳಿನವರು. ಆದರೆ ಶಿವಣ್ಣನ ಸಾಕಷ್ಟು ಚಿತ್ರಗಳನ್ನು ನೋಡಿ ಮೆಚ್ಚಿರುವುದಾಗಿ ಹೇಳಿದ ಅರಸು, “ಓಂ, ಜೋಗಿ, ಮಫ್ತಿ, ಟಗರು ಮೊದಲಾದವು ನನ್ನ ಫೇವರಿಟ್ ಸಿನಿಮಾಗಳು. ಅವರೊಂದಿಗೆ ಚಿತ್ರ ಮಾಡಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಇಷ್ಟು ಸೀನಿಯರ್ ಜತೆಗೆ ಕೆಲಸ ಮಾಡುವುದು ಹೇಗೆ ಎನ್ನುವ ಆತಂಕ ಇತ್ತು. ಆದರೆ ಭೇಟಿಯಾದ ತಕ್ಷಣದಲ್ಲೇ ಅವರು ಆತ್ಮೀಯತೆ ತೋರಿಸಿದಾಗ ಕಂಫರ್ಟೇಬಲ್ ಆದೆ” ಎಂದರು. ಟಗರು ಬಂತು ಟಗರು ಹಾಡು ಇಷ್ಟವಾದ ಕಾರಣ ಚರಣ್ ರಾಜ್ ಅವರನ್ನೇ ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿದ್ದೇವೆ” ಎಂದರು.

ನಾನು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನೋಡಿದಾಗ ಟೆಕ್ನಿಕಲಿ ತುಂಬ ಇಷ್ಟವಾಗಿತ್ತು. ಕಲಾನಿರ್ದೇಶನ ಮೆಚ್ಚುಗೆಯಾಗಿ ಅವರೊಂದಿಗೆ ಕೆಲಸ ಮಾಡಬೇಕು ಎಂದುಕೊಂಡಿದ್ದೆ. ಅದು ಆರ್ ಡಿ ಎಕ್ಸ್ ಚಿತ್ರದ ಮೂಲಕ ಈಡೇರಿದೆ. ಉಲ್ಲಾಸ್ ಅವರಿಗೇನೇ ನಾವು ಕಲಾನಿರ್ದೇಶನದ ಜವಾಬ್ದಾರಿ ವಹಿಸಿದ್ದೇವೆ ಎಂದರು. ಇತ್ತೀಚೆಗಷ್ಟೇ ನೆರವೇರಿದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್’ ನಲ್ಲಿ ಶ್ರೇಷ್ಠ ಕಲಾನಿರ್ದೇಶಕ ಪ್ರಶಸ್ತಿಯನ್ನು ಉಲ್ಲಾಸ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ನಮ್ಮ ಪ್ರೇಕ್ಷಕರು ಪರಭಾಷಾ ಚಿತ್ರಗಳ ಪ್ರಿಯರಾದರೂ, ಪರಭಾಷೆಯ ತಂತ್ರಜ್ಞರು ನಮ್ಮ ಸಿನಿಮಾಗಳನ್ನು, ನಾಯಕರನ್ನು ಮತ್ತು ತಂತ್ರಜ್ಞರನ್ನು ಗಮನಿಸುತ್ತಿದ್ದಾರೆ ಎನ್ನುವುದು ಸಂತಸದ ವಿಚಾರ.
ರವಿ ಅರಸು ಅವರು ಅಲ್ಲಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಅವರ ಜತೆಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದವರು. ಸ್ವತಃ ‘ಈಟಿ’ ಮತ್ತು ‘ಐನ್ ಗಾರನ್’ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರವಿ ಅರಸು ಪ್ರಥಮ ಬಾರಿಗೆ ಕನ್ನಡ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
