ಡೈಲಾಗ್ ಹೊಡೆದವರೆಲ್ಲ ಹೀರೋಗಳಾಗಲ್ಲ: ಶಿವಣ್ಣ

ಶಿವರಾಜ್ ಕುಮಾರ್ ಎಂದರೆ ಹಾಗೇನೇ ಸ್ಟ್ರೈಟ್ ಹಿಟ್! ಯಾವತ್ತೂ ಮನದ ಮಾತು ಅಡಗಿಸುವವರಲ್ಲ. ಅಂಥದೇ ಒಂದು ಮಾತನ್ನು ಅವರು ಆಡಿರುವುದು ‘ಆರ್.ಡಿ.ಎಕ್ಸ್’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ.

ನೇರ ಮಾತುಗಾರರು!

ಕನ್ನಡದಲ್ಲಿ ನೇರ ಮಾತುಗಳಿಗೆ ಹೆಸರಾದವರು ಇಬ್ಬರು. ಒಬ್ಬರು ಒನ್ ಆ್ಯಂಡ್ ಓನ್ಲಿ ಅಂಬರೀಷ್ ಆದರೆ ಮತ್ತೊಬ್ಬರು ಕ್ರೇಜಿಸ್ಟಾರ್ ರವಿಚಂದ್ರನ್. ಅಂಬರೀಷ್ ಯೋಜನೆ ಹಾಕಿಕೊಂಡು ಮಾತಿಗೆ ಕುಳಿತವರೇ ಅಲ್ಲ. ಅವರು ಇದ್ದ ವೇದಿಕೆಗಳಲ್ಲಿ ತಾವೇ ಕಿಂಗ್ ಎನ್ನುವಂತೆ ಇದ್ದರು. ಹಾಗಾಗಿ ಅವರಿಂದ ಏನೇ ಮಾತು‌ ಬಂದರೂ ಉಳಿದವರು ಕೇಳಿಸಿಕೊಳ್ಳಲು ತಯಾರಾಗಿರಬೇಕಿತ್ತು. ರವಿಚಂದ್ರನ್ ಅವರು ಹಾಗಲ್ಲ. ಅವರಿಗೆ ತಾವು ಮಾತನಾಡಿದರೆ ಮುಂದೆ ಪರಿಣಾಮ ಏನಾಗುತ್ತದೆ ಎನ್ನುವುದರ ಅರಿವು ಚೆನ್ನಾಗಿಯೇ ಇರುತ್ತಿತ್ತು. ಹಾಗಾಗಿ ಸುಮ್ಮನೇ ಅಂತ ಪ್ರಶ್ನೆಗಳನ್ನೆಲ್ಲ ಕೇಳಬೇಡಿ, ಕೇಳಿದ್ರೆ ಆನ್ಸರ್ ಮಾಡೋಕೆ ನನಗೇನೂ ತೊಂದೆರೆ ಇಲ್ಲ.

ಆದರೆ ಅದು ಆಮೇಲೆ ಸುಮ್ಮನೇ ಕಾಂಟ್ರವರ್ಸಿ ಆಗುತ್ತೆ ಎನ್ನೋರು. ಆದರೂ ಏನು ವಿಷಯ ಎಂದು ನಾವು ಕುತೂಹಲ ತೋರಿಸಿದರೆ, “ಆಫ್ ದಿ ರೆಕಾರ್ಡ್ ಆದರೆ ಹೇಳ್ತೀನಿ” ಅನ್ನೋರು. ಸರಿ ಎಲ್ಲೂ ಹೊರಗೆ ತರಲ್ಲ ಎಂದು ಒಮ್ಮೆ ಭರವಸೆ ಕೊಟ್ಟರೆ ಸಾಕು ಎಲ್ಲವನ್ನೂ ಹೇಳಿ ಬಿಡೋರು. ಅವರ ಅಂಥ ಮಾತುಗಳನ್ನು ಟಾಬ್ಲಾಯ್ಡ್ ಗಳು ಕೂಡ ಹೊರಗೆ ಹಾಕಿದ ಉದಾಹರಣೆಗಳಿಲ್ಲ. ಹಾಗಾಗಿ ಒಂದು ಸಿನಿಮಾಧ್ಯಮದ ವಲಯದೊಳಗೆ ಅವರು ಕಂಫರ್ಟ್ ಆಗಿರುತ್ತಾರೆ. ಆದರೆ ಹೊಸಬರೇನಾದರೂ ಅವರದೊಂದು ಸಂದರ್ಶನ ಮಾಡಿದರೆ ಪ್ರತಿ ಮಾತುಗಳು ಕೂಡ ವಿವಾದವೆನ್ನುವಂತೆ ಚಿತ್ರಿಸಲು ಪ್ರಯತ್ನಿಸಬಹುದು!

ಆದರೆ ಶಿವಣ್ಣ ಎನ್ನುವ ಶಿವರಾಜ್ ಕುಮಾರ್ ಇವರಿಬ್ಬರಿಗಿಂತಲೂ ವಿಭಿನ್ನ. ಯಾಕೆಂದರೆ ಅವರು ಹೆಸರಲ್ಲಿ ಮಾತ್ರ ಶಿವರಾಜ. ವರ್ತನೆಯಲ್ಲಿ ಸದಾ ಯುವರಾಜ‌. ಯಾಕೆಂದರೆ ಯಾವತ್ತಿಗೂ ತಮ್ಮ ಹಿರಿತನದ ಹೆಸರು ಹೇಳಿ ಸ್ಥಾನಮಾನಕ್ಕೆ ಯತ್ನಿಸಿದವರಲ್ಲ. ಎಲ್ಲರ ಗಮನ ತಮ್ಮ ಕಡೆಗಷ್ಟೇ ಇರಬೇಕು ಎಂದುಕೊಂಡವರಲ್ಲ. ತಮಗಿಂತ ಕಿರಿಯರು ಕೂಡ ವೇದಿಕೆ ಏರಿ ಪ್ರತಿಭೆ ತೋರಿದರೆ ತಾವು ಅಭಿಮಾನಿಯಂತೆ ಚಪ್ಪಾಳೆ ತಟ್ಟಿ ಖುಷಿ ಪಡಬಲ್ಲವರು. ಆದರೆ ಅಂಥವರು ಕೂಡ ಸಿಡಿಮಿಡಿಗೊಳ್ಳುವುದು ಇದೆ. ಆಗ ಮಾತ್ರ ಅವರು ಯಾರದೇ ನಿಯಂತ್ರಣದಲ್ಲೇ ಇರುವುದಿಲ್ಲ.

ಓವರ್ ಡವ್ ಬೇಡಮ್ಮ..!

ಶಿವಣ್ಣನಿಗೆ ಕೋಪ ಬರುವ, ಅವರು ಕೂಡ ಮುಖಕ್ಕೆ ಹೊಡೆದಂತೆ ಮಾತನಾಡುವ ಸಂದರ್ಭಗಳೇ ವಿಭಿನ್ನ. ಅದಕ್ಕೆ ಬಹುಪಾಲು ಎದುರುಗಿರುವ ವ್ಯಕ್ತಿಯೇ ಕಾರಣವಾಗಿರುತ್ತಾನೆ. ಉದಾಹರಣೆಗೆ ನನ್ನದೇ ಅನುಭವದ ಬಗ್ಗೆ ಹೇಳುತ್ತೇನೆ. ಒಮ್ಮೆ ಕ್ಯಾರವಾನೊಳಗೆ ಅವರ ಸಂದರ್ಶನ ನಡೆಸುತ್ತಿದ್ದೆ. ನಾನು ಅವರ ಮಾತುಗಳನ್ನು ವಾಯ್ಸ್ ರೆಕಾರ್ಡ್ ಮಾಡುತ್ತಿದ್ದೆ. ಅವರು ಮಾತನಾಡುತ್ತಾ ಮುಂದಿನ‌ ದೃಶ್ಯಕ್ಕೆ ತಯಾರಿ ಮಾಡುತ್ತಿದ್ದರು. ಅಷ್ಟರಲ್ಲಿ ಅವರ ಸಹಾಯಕನೋರ್ವ ಚಪ್ಪಲಿ ತಂದು ಕಾಲಿಗೆ ತೊಡಿಸೋಕೆ ನೋಡಿದ. ತಕ್ಷಣ ಕಾಲು ಹಿಂದಕ್ಕೆ ಎಳೆದುಕೊಂಡ ಅವರು ‘ಓವರ್ ಡೌ ಎಲ್ಲ ಬೇಡಮ್ಮ’ ಎಂದರು.

ಕೆಲವರು ಹೇಗೆ ಬಿಲ್ಡಪ್ ತೆಗೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಯುತ್ತಿರಬೇಕಾದರೆ ಇವರು ಸದಾ ಅದನ್ನು ಅವಾಯ್ಡ್ ಮಾಡುವವರು. ಕಾಲಿಗೆರಗಲು ಬರುವವರನ್ನು ಅವರಂತೆ ತಾವು ಕೂಡ ಬಾಗಿ ಅವರ ಕೈಗಳನ್ನು ತಮ್ಮ ಕೈಗಳಿಂದ ತಡೆಯುವವರು. ಇದನ್ನೆಲ್ಲ ಮೀರಿ ಯಾರು ಮುನ್ನುಗ್ಗುತ್ತಾರೋ ಅವರ ಮೇಲೆ ಖುದ್ದು ಕೈ ಮಾಡಲೂ ಹೇಸುವುದಿಲ್ಲ ಎಂದರೆ ನಂಬಬೇಕು. ಆದರೆ ಅವರು ಯಾವುದನ್ನೇ ಆಗಲಿ ಕ್ಯಾಮೆರಾ ಆ್ಯಂಗಲ್ ಯಾವ ಕಡೆಗಿದೆ ಎಂದು ಗಮನಿಸಿ ಮಾಡುವುದಿಲ್ಲ ಎನ್ನುವುದು ಸತ್ಯ.‌ ಇದೇ ಕಾರಣದಿಂದಲೇ ಅವರು ಇಂದು ಹೇಳಿರುವಂಥ ಮಾಧ್ಯಮದ ಮುಂದೆ ಹೇಳಿರುವ ಡೈಲಾಗ್ ಒಂದು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಡೈಲಾಗ್ ಹೊಡೆದವರೆಲ್ಲ ಸ್ಟಾರ್ ಆಗಲ್ಲ!

ಸರ್, ನಿಮ್ಮ ಹೊಸ ಚಿತ್ರ ‘ಆರ್ ಡಿ ಎಕ್ಸ್’ ನಲ್ಲಿ ಡೈಲಾಗ್ ಗಳು ಹೇಗಿವೆ ಎನ್ನುವುದು ಪತ್ರಕರ್ತರೊಬ್ಬರ ಪ್ರಶ್ನೆಯಾಗಿತ್ತು. ಅದಕ್ಕೆ ಕಾರಣವೂ ಇತ್ತು. ಚಿತ್ರದಲ್ಲಿ ಶಿವಣ್ಣ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಈ ಹಿಂದೆ ಪೊಲೀಸ್ ಆಗಿದ್ದ ಟಗರು ಚಿತ್ರದಲ್ಲಿನ ಸಂಭಾಷಣೆಗಳು ಸಕತ್ ಹೈಲೈಟಾಗಿದ್ದವು. ಆದರೆ ಶಿವಣ್ಣನ ಉತ್ತರ ಮಾತ್ರ ಡಿಫರೆಂಟ್ ಆಗಿತ್ತು. “ಡೈಲಾಗ್ ಹೊಡೆದ ಮಾತ್ರಕ್ಕೆ ಹೀರೋ ಆಗಲ್ಲ. ಹೀರೋ ಅನಿಸುವಂಥ ಕ್ಯಾರೆಕ್ಟರ್ ಇರಬೇಕು. ಕ್ಯಾರೆಕ್ಟರ್ ಬಿಲ್ಡ್ ಆಗುವಂಥ ಕತೆ ಇರಬೇಕು. ಹಾಗಾಗಿ ಕತೆಯೇ ಚಿತ್ರದ ಮೊದಲ ಆದ್ಯತೆ ಆಗಿರಬೇಕು. ಅದು ಈ ಚಿತ್ರದಲ್ಲಿದೆ ಎಂದರು.

ಇಂದು ಬರುತ್ತಿರುವ ಹೊಸಬರೆಲ್ಲ ಮೊದಲ ಚಿತ್ರಕ್ಕೇನೇ ಬಿರುದು ಹಾಕಿಕೊಂಡು, ಪರದೆ ಮೇಲೆ ಪಂಚ್ ಡೈಲಾಗ್ ಹೇಳಲು ಬಯಸುತ್ತಾರೆ. ಆದರೆ ನಾಯಕನಟನೋರ್ವ ಒಳ್ಳೆಯ ಸಿನಿಮಾಗಳ ಮೂಲಕ ಸ್ಟಾರ್ ಆಗಿ ಬೆಳೆದು, ಆನಂತರ ಹೇಳುವ ಡೈಲಾಗ್ ಗಳಿಗಷ್ಟೇ ಜನರ ಮನ ಸೆಳೆಯುವ ಅವರಿಗೆ ಸ್ಫೂರ್ತಿ ನೀಡುವ, ಸಿಳ್ಳೆ ಹೊಡೆಸುವ ಶಕ್ತಿ ಇರುತ್ತದೆ ಎನ್ನುವುದು ಸತ್ಯ.

Recommended For You

Leave a Reply

error: Content is protected !!
%d bloggers like this: