‘ರಾಬರ್ಟ್’ ಸಿನಿಮಾ ನಿರ್ಮಾಪಕ ಉಮಾಪತಿಯವರು ದರ್ಶನ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅದು ರಾಬರ್ಟ್ ಮುಗಿದಾಕ್ಷಣ ಅವರು ದರ್ಶನ್ ಅವರದೇ ಮತ್ತೊಂದು ಚಿತ್ರ ನಿರ್ಮಿಸಲು ತಯಾರಾಗುತ್ತಿದ್ದಾರೆ. ಚಿತ್ರದ ಹೆಸರು ತೀರ್ಮಾನಿಸಲಾಗಿಲ್ಲ. ಆದರೆ ಸಬ್ಜೆಕ್ಟ್ ಒಪ್ಪಿಗೆಯಾಗಿದೆ ಎಂದು ಸ್ವತಃ ಉಮಾಪತಿಯವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ. ಅವರು ಮದಗಜ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಈ ವಿಚಾರ ಪ್ರಸ್ತಾಪಿಸಿದರು.
ರಾಬರ್ಟ್ ಮಾಡುತ್ತಿದ್ದ ಹಾಗೆ, ನನಗೆ ದರ್ಶನ್ ಅವರು ಐತಿಹಾಸಿಕ ಚಿತ್ರಗಳ ಬಗ್ಗೆ ಎಷ್ಟೊಂದು ಒಲವು ಇರಿಸಿಕೊಂಡಿದ್ದಾರೆ ಎನ್ನುವುದು ಅರಿವಾಯಿತು. ಹಾಗಾಗಿ ಅವರಿಗಾಗಿ ಒಬ್ಬ ಸ್ವಾತಂತ್ರ್ಯ ಯೋಧನ ಕತೆ ಆಯ್ದುಕೊಂಡೆ. ಅದು ದರ್ಶನ್ ಅವರಿಗೂ ಒಪ್ಪಿಗೆ ಆಗಿದೆ. ದುರದೃಷ್ಟವಶಾತ್ ಅದರ ಹಕ್ಕು ಬೇರೊಬ್ಬರಲ್ಲಿ ಇದೆ ಎನ್ನುವುದು ತಿಳಿಯಿತು. ಸದ್ಯಕ್ಕೆ ಅವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದೇನೆ. ಹಕ್ಕು ಕೈಗೆ ಬಂದ ಮೇಲೆ ಮಾತ್ರ ಹೆಚ್ಚಿನ ಮಾಹಿತಿ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.
ಟಿಪ್ಪು ಸುಲ್ತಾನ್ ಪಾತ್ರವೇ ಯಾಕೆ?
ಇದೀಗ ದರ್ಶನ್ ಅಭಿಮಾನಿಗಳು ಆ ಸ್ವಾತಂತ್ರ್ಯ ಹೋರಾಟಗಾರ ಯಾರಿರಬಹುದು ಎನ್ನುವ ಯೋಚನೆ ಶುರು ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಇರಬಹುದೇ ಎನ್ನುವ ಸಂದೇಹ ಕೂಡ ಇದರಲ್ಲಿ ಪ್ರಮುಖವಾಗಿದೆ. ಯಾಕೆಂದರೆ, ಆ ಹೋರಾಟಗಾರ ಕರ್ನಾಟಕದವನೇ ಎಂದು ಉಮಾಪತಿಯವರು ಒತ್ತಿ ಹೇಳಿದ್ದಾರೆ. ಇಲ್ಲವಾದರೆ ಶಿವಾಜಿಯ ಕತೆ ಇರಬಹುದೇನೋ ಎಂದು ಸಂದೇಹಿಸಿದವರಿಗೂ ಕೊರತೆ ಇಲ್ಲ. ಜತೆಗೆ ಶಿವಾಜಿ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾದವನು. ಮಾತ್ರವಲ್ಲ ಸಾಧಾರಣ ಎತ್ತರಕ್ಕಿಂತಲೂ ಕುಳ್ಳಗಿನ ದೇಹದ ವ್ಯಕ್ತಿಯೆಂದು ಶಿವಾಜಿಯನ್ನು ಹೇಳಲಾಗುತ್ತಿರುವಾಗ 6 ಅಡಿ 3 ಇಂಚು ಎತ್ತರದ ದರ್ಶನ್ ಆ ಪಾತ್ರ ಮಾಡಲಾರರು. ಒಂದು ವೇಳೆ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಿದರೂ ಅಚ್ಚರಿ ಇಲ್ಲ. ಆದರೆ ಟಿಪ್ಪು ದೇವನಹಳ್ಳಿಯಲ್ಲಿ ಹುಟ್ಟಿದವರು. ಮೈಸೂರಿನ ಹುಲಿಯಾಗಿ ಗುರುತಿಸಿಕೊಂಡವರು. ಆತ ಹೋರಾಟಗಾರ ಮಾತ್ರವಲ್ಲ ದೇಶ ಭಕ್ತನೂ ಹೌದು. ದರ್ಶನ್ ಮೈಸೂರಿನವರು. ಅಲ್ಲಿನ ಮುಸಲ್ಮಾನರಿಗೆ ಕೂಡ ದರ್ಶನ್ ಎಂದರೆ ಯಾವ ಮಟ್ಟಿನ ಅಭಿಮಾನ ಇದೆ ಎನ್ನುವುದನ್ನು ನಾವು ಈಗಾಗಲೇ ಮಂಡ್ಯದ ಚುನಾವಣಾ ಪ್ರಚಾರದ ವೇಳೆ ಕಂಡಿದ್ದೇವೆ. ಜತೆಗೆ ಟಿಪ್ಪು ಮೈಸೂರಿಗೆ, ಮುಸಲ್ಮಾನರಿಗೆ ಮಾತ್ರವಲ್ಲ ದೇಶಕ್ಕೆ ಗುರುತಾದವನು. ಹಾಗಾಗಿ ಆ ಪಾತ್ರ ದರ್ಶನ್ ಅವರಿಗೆ ಎಲ್ಲ ಕಾರಣದಿಂದಲೂ ಒಪ್ಪುತ್ತದೆ ಎನ್ನುವುದು ಹಲವರ ಅಭಿಮತ.
ಒಂದು ವೇಳೆ ಇದು ನಿಜಕ್ಕೂ ನಡೆದಿದ್ದೇ ಆದರೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಮೈಸೂರಿನ ಸುಲ್ತಾನ್ ಕೂಡ ಆಗಲಿದ್ದಾರೆ. ಟಿಪ್ಪು ಸುಲ್ತಾನನ ಹೋರಾಟದ ಬದುಕಿನಲ್ಲಿರುವ ಸಾಹಸದ ಕ್ಷಣಗಳನ್ನು ಈಗಾಗಲೇ ದರ್ಶನ್ ಅವರ ನಟನೆಯಲ್ಲಿ ಹೋಲಿಸಲು ಶುರು ಮಾಡಿರುವ ಡಿ ಬಾಸ್ ಅಭಿಮಾನಿಗಳಿಗೆ ದರ್ಶನ್ ನಿರ್ವಹಿಸುವ ಪಾತ್ರ ಯಾರದು ಎನ್ನುವ ಬಗ್ಗೆ ಸದ್ಯದಲ್ಲೇ ತಿಳಿದು ಬರಲಿದೆ.