‘ಘಾರ್ಗಾ’ ಎಂಬ ಅರುಣನ ಹೊಸ ಮಾರ್ಗ!

‘ಘಾರ್ಗಾ’ ಎಂದರೆ ಬಹುಶಃ ನಿಮಗೆ ಯಾವ ಭಾಷೆಯಲ್ಲಿಯೂ ಅರ್ಥ ಸಿಗದು. ಅದರೆ ಈ‌ ಚಿತ್ರ ನೋಡಿ ಹೊರ ಬಂದಾಗ ಖಂಡಿತವಾಗಿ ಒಂದು ಅರ್ಥ ಕಂಡುಕೊಂಡಿರುತ್ತೀರಿ ಎಂದರು ನವ ನಿರ್ದೇಶಕ ಎಂ ಶಶಿಧರ್. ಬಹುಶಃ ಒಬ್ಬ ನವ ನಿರ್ದೇಶಕ ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಬೇಕಾದರೆ ಆ ಚಿತ್ರ ಯಾವ ಮಟ್ಟಕ್ಕೆ ತಯಾರಾಗಿದೆ ಎಂದು ನಮಗೂ ಅರ್ಥವಾದೀತು. ಅಂಥದೊಂದು ದೊಡ್ಡ ಮಟ್ಟದ ಶಕ್ತಿಯಾಗಿ ಜೋಗಿ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಇದ್ದಾರೆ.

ಫಾದರ್ ಮತ್ತು ಗಾಡ್ ಫಾದರ್ !

ಅಶ್ವಿನಿ ರಾಮ್ ಪ್ರಸಾದ್ ಅವರು ಘಾರ್ಗಾ ಚಿತ್ರದ ಮೂಲಕ ಒಬ್ಬ ಯುವ ನಿರ್ದೇಶಕನಿಗೆ ಗಾಡ್ ಫಾದರ್ ಮಾತ್ರವಲ್ಲ, ನವ ನಾಯಕನಿಗೆ ಫಾದರ್ ಆಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಂದರೆ ಚಿತ್ರದಲ್ಲಿ ಅವರು ನಾಯಕನ ತಂದೆಯೇನಲ್ಲ. ಆದರೆ ನಿಜ ಜೀವನದಲ್ಲಿ ಅವರ ಪುತ್ರನೇ ಚಿತ್ರಕ್ಕೆ ನಾಯಕ. ಅರುಣ್ ರಾಮ್ ಪ್ರಸಾದ್ ಬೆಳ್ಳಿಪರದೆಯ ಮೇಲೆ ತಾರೆಯಾಗಿ ಮೂಡುತ್ತಿರುವ ಸಂದರ್ಭದಲ್ಲಿ ಅದ್ದೂರಿ ಲಾಂಚಿಂಗ್ ಕಾರ್ಯಕ್ರಮವನ್ನು ನಗರದ ಹೋಟೆಲ್ ಅಶೋಕದಲ್ಲಿ ಆಯೋಜಿಸಲಾಗಿತ್ತು. ನಿರ್ದೇಶಕ ಶಶಿಧರ್, ಬಿಎಸ್ ಸಿ ಅನಿಮೇಶನ್‌ ಮಾಡಿ ಮೈಸೂರಿನಲ್ಲಿ ಬೆಸ್ಟ್ ಶಾರ್ಟ್ ಫಿಲ್ಮ್ ಪ್ರಶಸ್ತಿ ಪಡೆದಂಥವರು. “ಚಿತ್ರದ ಬಜೆಟ್ ಬಗ್ಗೆ ಯಾವತ್ತಿಗೂ ಚಿಂತೆ ಮಾಡಬೇಡ ಎಂದು ಭರವಸೆ ನೀಡಿದ ನಿರ್ಮಾಪಕರು ಅದರಂತೆಯೇ ನಡೆದುಕೊಂಡಿದ್ದಾರೆ. ಫೈಟ್ ಸೀನ್ ಗೆ 4 ಕ್ಯಾಮೆರಾ ಬೇಕು ಅಂದರೂ ಯಾಕೆ ಅಂತ ಕೇಳದೆ ಒದಗಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸುವಂಥ ಚಿತ್ರ ಮಾಡಿದ ನಂಬಿಕೆ ನನಗಿದೆ” ಎಂದರು.

ಅರುಣ್ ಎಂಬ ಅಪ್ರತಿಮ ಪ್ರತಿಭೆ!

ಇನ್ನು ಪ್ರಥಮ ಚಿತ್ರವೇ ತೆರೆಕಂಡಿಲ್ಲ. ಅಷ್ಟರಲ್ಲೇ ಹೇಗೆ ಅಪ್ರತಿಮ ಪ್ರತಿಭಾವಂತನಾದ ಎಂದು ಯೋಚಿಸಬೇಕಿಲ್ಲ. ಯಾಕೆಂದರೆ ಆತನ ಪಯಣ ಹಾಗಿದೆ. ನೀನಾಸಂ ವಿದ್ಯಾರ್ಥಿಯಾಗಿರುವ ಈತ, ಎರ್ನಾಕುಳಂನಲ್ಲಿ ಕಳರಿಪಯಟ್ಟ್ ಯುದ್ಧ ವಿದ್ಯೆ ಕಲಿತವರು. ಚಂದನವನದ ತಾರೆಯರ ಜಿಮ್ ಕೋಚ್ ಎಂದೇ ಗುರುತಿಸಿಕೊಂಡಿರುವ ಶ್ರೀನಿವಾಸ್ ಅವರ ಶಿಷ್ಯ. ಚಿತ್ರದಲ್ಲಿ ಸೊಫೆಸ್ಟಿಕೇಟೆಡ್ ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾದ ಸನ್ನಿವೇಶಕ್ಕಾಗಿ ಮೊದಲೇ ರಿಹರ್ಸಲ್ ಮಾಡಿ ತಯಾರಾಗುತ್ತಿದ್ದು, ತನ್ನ ನಟನೆಗಿಂತಲೂ ನಿರ್ದೇಶಕರ ಬಗ್ಗೆ ತಮಗೆ ಭರವಸೆ ಇದ್ದು, ಅವರು ನನಗೆ ಗಿಫ್ಟ್ ಆಗಿ ಲಭಿಸಿದ್ದಾರೆ ಎಂದು ಸಂಭ್ರಮಿಸಿದರು ಅರುಣ್ ರಾಮ್ ಪ್ರಸಾದ್.

ಘಾರ್ಗಾ ಚಿತ್ರದಲ್ಲಿ ಅರುಣ್ ಯಾವ ರೀತಿ ಕಾಣಿಸಿದ್ದಾರೆ ಎನ್ನುವುದರ ಫಸ್ಟ್ ಲುಕ್ ಅನ್ನು ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ ನಾಯ್ಡು ಅವರು ಬಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಶುಭ ಕೋರಲು ಆಗಮಿಸಿದ್ದ ನಿರ್ದೇಶಕ‌ ಶಶಿಧರ್ ಅವರ ಗುರು ಎ.ಪಿ ಅರ್ಜುನ್ ಶಿಷ್ಯನಿಗೆ ಶುಭ ಕೋರಿದರು.

ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಬಾಲಿವುಡ್ ನಟ ದೇವ್ ಗಿಲ್ ಮಾತನಾಡಿ, “ಮೊದಲ ಬಾರಿ ನನಗೆ ನಾಯಕನಂತೆ ಹಾಡಲ್ಲಿ ಕಾಣಿಯುವ ಅವಕಾಶ ಲಭಿಸಿದೆ ಎಂದರು. ನಾನು ಕೇಳಿದಷ್ಟು ಸಂಭಾವನೆಯನ್ನು ತಕ್ಷಣ ಒಪ್ಪಿ ನೀಡಿದ ನಿರ್ಮಾಪಕರನ್ನು ಕಂಡಾಗ ಇನ್ನಷ್ಟು ಕೇಳಬಹುದಿತ್ತಲ್ಲ ಎಂದು ನನ್ನ ಮ್ಯಾನೇಜರ್ ಗೆ ಹೇಳಿದೆ” ಎಂದು ನಕ್ಕರು. “ಚಿತ್ರದಲ್ಲಿ ಒಳ್ಳೆಯ ಪಾತ್ರ ದೊರಕಿದೆ. ನಿರ್ದೇಶಕರು ಒಳ್ಳೆಯ ಕೆಲಸ ತೆಗೆದಿದ್ದಾರೆ ” ಎಂದು ಅರುಣ್ ಸಾಗರ್ ಹೇಳಿದರು.

ಗುರುಕಿರಣ್ ಸಂಗೀತ

ಇದೇ ಸಂದರ್ಭದಲ್ಲಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಯಿತು. ಗುರುಕಿರಣ್ ಸಂಗೀತದಲ್ಲಿ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದಂಥ ಗೀತೆಗೆ ‘ಭಂಗಿ ಸೇದಿರೋ..’ ಎನ್ನುವ ನಾಗೇಂದ್ರ ಪ್ರಸಾದ್ ಸಾಹಿತ್ಯ ಆಕರ್ಷಣೆಯಾಗಿತ್ತು. ಸಮಾರಂಭದಲ್ಲಿ ಚಿತ್ರದ ನಾಯಕಿ ರಾಘವಿ, ಕೃಷ್ಣ ಪ್ರಸಾದ್, ವಸಿಷ್ಠ ಸಿಂಹ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಜೋಗಿ ಚಿತ್ರದ ಹಾಡುಗಳಿಗೆ ನೃತ್ಯಕಾರ್ಯಕ್ರಮವಿತ್ತು. ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

Recommended For You

Leave a Reply

error: Content is protected !!
%d bloggers like this: