
ಅಂದಿನ ಕಾಲದ ಜನಪ್ರಿಯ ನಾಯಕಿ ಲೀಲಾವತಿ. ಅನುಪ್ರಭಾಕರ್ ಇಂದಿನ ಯುವ ನಟಿ. ಹಾಗಾದರೆ ಈ ಹೋಲಿಕೆ ಯಾಕೆ ಎನ್ನುವ ಸಂದೇಹ ಸಹಜ. ಆದರೆ ಹೋಲಿಸಿದವರು ವಿ ಮನೋಹರ್. ಅದಕ್ಕೆ ಕಾರಣವಾಗಿದ್ದು ‘ಸಾರಾ ವಜ್ರ’ ಎನ್ನುವ ಚಿತ್ರ.
ಹೆಸರೇ ವಿಭಿನ್ನ ಎನ್ನುವಂತಿರುವ ಚಿತ್ರ ಸಾರಾ ವಜ್ರ. ನಾಡಿನ ಖ್ಯಾತ ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್ ಅವರ ರಚನೆಯಾದ ‘ವಜ್ರಗಳು’ ಕಾದಂಬರಿ ಆಧಾರಿಸಿರುವ ಸಿನಿಮಾ ಇದು. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಒಂದು ಗ್ಯಾಪ್ ನ ಬಳಿಕ ಅನುಪ್ರಭಾಕರ್ ನಾಯಕಿಯಾಗಿ ನಟಿಸುತ್ತಿರುವ ಚಿತ್ರ. ಆರ್ನಾ ಸಾಧ್ಯ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಾಗ ಅನುಪ್ರಭಾಕರ್ ಅವರ ನಟನೆ ಕಂಡು ತಾವು ಅಚ್ಚರಿಗೊಂಡಿದ್ದಾಗಿ ಮನೋಹರ್ ಹೇಳಿದರು. ಪತ್ರಕರ್ತ ಬಿ.ಎಂ ಹನೀಫ್ ಅವರಿಂದ ಚಿತ್ರಕ್ಕೆ ಹಾಡೊಂದನ್ನು ಬರೆಸಿರುವುದಾಗಿ ಮನೋಹರ್ ತಿಳಿಸಿದರು. ಮಂಗಳೂರಿನ ಬ್ಯಾರಿಗಳ ಬಗ್ಗೆ ಚೆನ್ನಾಗಿ ಬಲ್ಲ ತಮಗೆ ಚಿತ್ರವು ಇದು ನೈಜತೆಯನ್ನು ತೋರಿಸಿರುವ ಚಿತ್ರವಾಗಿ ಅನಿಸಿದೆ ಎಂದರು. ಅಂದಹಾಗೆ ಚಿತ್ರದಲ್ಲಿ ಬರೋಬ್ಬರಿ ಒಂಬತ್ತು ಹಾಡುಗಳಿರುವುದು ವಿಶೇಷ.
ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿರುವ ರಮೇಶ್ ಭಟ್ ಅವರು ಕೂಡ ಅನು ಪ್ರಭಾಕರ್ ಅವರನ್ನು ಕಲ್ಪನಾ, ಆರತಿ, ಸರಿತಾ ಸಾಲಿನಲ್ಲಿ ಕಾಣುವುದಾಗಿ ಹೇಳಿದರು.
ಈ ಎಲ್ಲ ಪ್ರಶಂಸೆಗಳಿಗೆ ಕೃತಜ್ಞತೆ ಸೂಚಿಸಿ ಮಾತನಾಡಿದ ನಾಯಕಿ ಅನು ಪ್ರಭಾಕರ್ ಅವರು, “ನಾನು ಕವಿತಾ ಲಂಕೇಶ್ ಅವರ ಚಿತ್ರದಲ್ಲಿ ನಟಿಸಿದ್ದೇನೆ. ಇದೀಗ ಮತ್ತೋರ್ವ ಮಹಿಳಾ ನಿರ್ದೇಶಕಿ ಆರ್ನಾ ಸಾಧ್ಯ ಅವರ ನಿರ್ದೇಶನದಲ್ಲಿ ಕೂಡ ನಟಿಸುವ ಅವಕಾಶ ದೊರಕಿದೆ. ಚಿಕ್ಕ ವಯಸ್ಸಿನ ಹುಡುಗಿಯಾದರೂ, ತುಂಬ ಸ್ಪಷ್ಟತೆ ಇರುವಂಥ ಅವರ ಕಾರ್ಯವೈಖರಿ ಮತ್ತು ಆಕೆ ಆಯ್ದುಕೊಂಡಿರುವ ಕಾದಂಬರಿಯೇ ನನ್ನನ್ನು ಈ ಪಾತ್ರ ಮಾಡಲು ಪ್ರೇರೇಪಿಸಿತು” ಎಂದರು. ತಮಗೆ ಚಾಲೆಂಜಿಂಗ್ ಪಾತ್ರ ಆಗಿತ್ತು ಎಂದ ಅನು ಪ್ರಭಾಕರ್ ಇಂಥದೊಂದು ಪಾತ್ರದ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟ ನಿರ್ಮಾಪಕ ದೇವೇಂದ್ರ ರೆಡ್ಡಿಯವರಿಗೆ ಕೂಡ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ನಿರ್ದೇಶಕಿ ‘ಆರ್ನಾ ಸಾಧ್ಯ’ ಅವರು ಮಾತನಾಡಿ ಕಾದಂಬರಿಯ ರೈಟ್ಸ್ ಅನ್ನು ಅವರಿಂದ ತೆಗೆದುಕೊಳ್ಳುವುದರಲ್ಲಿ ಒಂದು ವರ್ಷ ತಡ ಆಯಿತು. ಸಾರಾ ಅವರ ಐದಾರು ಕಾದಂಬರಿಗಳನ್ನು ಓದಿದ್ದು, ಅವುಗಳಲ್ಲಿ ತುಂಬ ಇಷ್ಟವಾದ ಕತೆ ಇದು. ನರೇಂದ್ರಬಾಬು ಅವರು ಸ್ಕ್ರಿಪ್ಟ್ ಗೆ ಕುಳಿತಿದ್ದರು. ನಾನು ಭೇಟಿಯಾದ ತಾರೆಯರು ಒಪ್ಪದೇ ಹೋದರೂ ಅನು ಮೇಡಂ ಕಾಲ್ ಶೀಟ್ ಕೊಟ್ಟರು. ಸ್ಟಾರ್ ಗಳು ಮಾಡಿದ್ರೂ ಇಷ್ಟು ಚೆನ್ನಾಗಿ ಬರುತ್ತಿರಲಿಲ್ಲ. ಅಷ್ಟು ಚೆನ್ನಾಗಿ ಅನು ಮೇಡಂ ನಟಿಸಿದ್ದಾರೆ ಎಂದರು ಅರ್ನಾ ಸಾಧ್ಯ.
ಮಾಧ್ಯಮಗೋಷ್ಠಿಯನ್ನು ನಿರೂಪಿಸಿದ ‘ಬಿಗ್ ಬಾಸ್’ ಖ್ಯಾತಿಯ ರೆಹಮಾನ್ ಚಿತ್ರದಲ್ಲಿ ಬದ್ರುದ್ದೀನ್ ಹೆಸರಿನ ಪಾತ್ರವೊಂದನ್ನು ನಿಭಾಯಿಸಿದ್ದು, ಹೆಸರಿನಂತೆ ನೆಗೆಟಿವ್ ಶೇಡ್ ನಲ್ಲಿ ಭದ್ರವಾದ ಪಾತ್ರವಾಗಿತ್ತು ಎಂದರು. ಚಿತ್ರದ ಛಾಯಾಗ್ರಾಹಕ ಪುನೀತ್ ಉಪಸ್ಥಿತರಿದ್ದರು.


