ಹರಿಕಥೆ ಒಂದು ಸಂಯುಕ್ತ ಕಲೆ : ಮಂಜುಳಾ ಜಿ.ರಾವ್

ನಗರದಾದ್ಯಂತ ಎಲ್ಲ ದೇವಾಲಯಗಳಲ್ಲಿ ಅದ್ಧೂರಿಯಾದ ಶಿವರಾತ್ರಿ ಜಾಗರಣೆ ನಡೆಯುತ್ತಿದ್ದರೆ ಹಂಪಿನಗರದ ಮುನೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಹರಿಕಥಾ ಸಮಾರಂಭ ಇತ್ತು. ಅದನ್ನು ಮಹಿಳೆಯೊಬ್ಬರು ನಡೆಸಿಕೊಡುತ್ತಿದ್ದರು. ವಿಚಾರಿಸಿದಾಗ ಅವರು ಮಂಜುಳಾ ಗುರುರಾಜ್ ಎನ್ನುವ ಅರಿವಾಯಿತು. ಸಮಾಧಾನ, ಇವರು ಮಂಗಳೂರಿನ ಮಂಜುಳಾ ಗುರುರಾಜ್!

ಸಾಮಾನ್ಯ ಎಲ್ಲ ಹರಿದಾಸರಂತೆ ಕುತ್ತಿಗೆಯಲ್ಲೊಂದು ಹೂವಿನ ಹಾರ; ಭಕ್ತಿ ಭಾವ ಸ್ಫರಿಸುವ ಕಣ್ಣುಗಳು! ದೇಗುಲದ ಮುಂದೆ ಸಾಕ್ಷಾತ್ ದೇವತೆಯೇ ಪ್ರತ್ಯಕ್ಷವೇನೋ ಎಂಬಂತಿಹ ತೇಜೋ‌ಮಯ ಮಹಿಳೆ. ಕುತೂಹಲದಿಂದ ವಿಚಾರಿಸಿದಾಗ ಅರಿವಾಗಿದ್ದು ಅದರಾಚೆಗಿನ ಅವರ ಸಂಗೀತ ಸಾಧನೆ.

ಮಂಜುಳಾ ಅವರು ದಕ್ಷಿಣ ಕನ್ನಡದ ಇರಾ ನಿವಾಸಿಯಾದ ಗುರುರಾಜ್ ಅವರ ಪತ್ನಿ. ಆದರೆ ತಮ್ಮ ಸಂಗೀತದ ಪ್ರತಿಭೆಯಿಂದಾಗಿ ದಕ್ಷಿಣ, ಉತ್ತರ ಅಷ್ಟದಿಕ್ಕುಗಳಲ್ಲೂ ಜನಪ್ರೀತಿ ಪಡೆದಿದ್ದಾರೆ. ಮಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್ ಕಥಾಕೀರ್ತನ ಕಲಾವಿದೆ. ಇದುವರೆಗೆ 2,500ಕ್ಕೂ ಅಧಿಕ ಹರಿಕಥಾ ಪ್ರಸಂಗಗಳನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಎಂಬ ಭೇದವಿಲ್ಲದೆ ಧರ್ಮಸ್ಥಳ, ಶಿರಸಿ, ಯಲ್ಲಾಪುರ, ಶಿವಮೊಗ್ಗ, ಚಿತ್ರದುರ್ಗ,ಕೇರಳದ ಕಾಸರಗೋಡು, ಕಾಞಂಗಾಡು,ನಮ್ಮ ಬೆಂಗಳೂರು ಮಾತ್ರವಲ್ಲ, ಪಕ್ಕದ ಆಂಧ್ರಪ್ರದೇಶ ಅಲ್ಲದೇ ದೂರದ ಮುಂಬಯಿ ಮೊದಲಾದಕಡೆ ಕಾರ್ಯ ಕ್ರಮ ನೀಡಿದ ಕೀರ್ತಿವಂತರು. ಭರತ ನಾಟ್ಯದ ಹಿನ್ನಲೆ ಗಾಯಕಿಯಾಗಿ, ಸುಗಮಸಂಗೀತ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ಕೊಳಲು’ ಸಂಗೀತ ವಿದ್ಯಾಲಯ ಇರಾ ಬಂಟ್ವಾಳ ತಾಲೂಕು ಇದರ ನಿರ್ದೇಶಕಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ತರಬೇತಿ ನೀಡುತ್ತಿದ್ದಾರೆ. ಭಜನಾ ತರಬೇತಿ ಕೇಂದ್ರದ ನಿರ್ದೇಶಕಿಯಾಗಿ ಅನೇಕ ಭಜನಾ ತಂಡಗಳನ್ನು ತರಬೇತಿಗೊಳಿಸಿರುತ್ತಾರೆ. ಸಂತ ಭದ್ರಗಿರಿ ಅಚ್ಯುತ ದಾಸರ, ಲಕ್ಷ್ಮಣ ದಾಸರ ಮತ್ತು ಶಂ.ನಾ.ಅಡಿಗರ ಶಿಷ್ಯೆಯಾಗಿ ಹರಿಕಥೆ ಕಾರ್ಯಕ್ರಮ ನೀಡಿರುವ ಹಾಗೂ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ , ಶೀಲಾ ದಿವಾಕರ್, ಶ್ರೀನಾಥ್ ಮರಾಠೆಯವರ ಶಿಷ್ಯೆಯಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಕಥಾಕೀರ್ತನ ಕೋವಿದೆ, ಸಂಗೀತ ಕಲಾಸಿರಿ, ಶ್ರೀಶ ವಿಠಲಾನುಗ್ರಹ ಪ್ರಶಸ್ತಿ, ಬಹುಮುಖ ಪ್ರತಿಭೆ ಪ್ರಶಸ್ತಿ ಮೊದಲಾದವುಗಳು ಲಭಿಸಿವೆ

ಇವರ ಪುತ್ರ ಹೃಷಿಕೇಶ್ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಪ್ರಸ್ತುತ ಏಳನೆಯ ತರಗತಿ ವಿದ್ಯಾರ್ಥಿಯಾದ ಈತ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಮಾಡಿದ್ದಾನೆ. ಜತೆಗೆ ಈಗಲೇ ಉತ್ತಮ ತಬಲಾ ವಾದಕನಾಗಿ ಹೆಸರುವಾಸಿ.

ಅಂದಹಾಗೆ ಬೆಂಗಳೂರಿನ ಹಂಪಿನಗರದಲ್ಲಿ ಶಿವರಾತ್ರಿ ಪ್ರಯುಕ್ತ ಮಂಜುಳಾ ಜಿ.ರಾವ್ ನಡೆಸಿಕೊಟ್ಟಿದ್ದು, ‘ಗಿರಿಜಾ ಕಲ್ಯಾಣ’ ಕಥಾ ಪ್ರಸಂಗ. ಅದರಲ್ಲಿನ ಎಲ್ಲ ಭಾವಗಳಿಗೂ ಜೀವವಾಗಿ ಅವರು ಕತೆ ಹೇಳುತ್ತಿದ್ದ ರೀತಿ ಅನನ್ಯ. ಜತೆಗೆ ತಬಲದಲ್ಲಿ ಮಂಜುನಾಥ್, ಹಾರ್ಮೋನಿಯಂನಲ್ಲಿ ಶ್ರೀನಿವಾಸ್ ಸಾಥ್ ನೀಡಿದ್ದರು. “ಇಂದು ನನ್ನ ಬಳಿ ಹರಿಕಥೆ ಕಲಿಯುವುದಕ್ಕಿಂತ ಸಿನಿಮಾ ಗಾಯಕರಾಗುವ ಉತ್ಸಾಹದಿಂದ ಬರುವವರೇ ಹೆಚ್ಚು. ಕನ್ನಡ ಚಿತ್ರರಂಗದ ಸಂಗೀತ ಸಾಕಷ್ಟು ಪ್ರಕಾರಗಳನ್ನೊಳಗೊಂಡ ಸಂಗೀತ ಕ್ರಮ. ಕನ್ನಡ ಚಿತ್ರಗಳು ಸಂಗೀತವನ್ನು ಒಂದು ಪ್ರಕಾರವಾಗಿ ರೂಪಿಸಿವೆ. ಜನಮನದಲ್ಲಿ ಕನ್ನಡ ಚಿತ್ರ ಸಂಗೀತಕ್ಕೆ ವಿಶಿಷ್ಟ ಸ್ಥಾನ ಮಾನ ಬೆಳೆದುಬಂದಿವೆ. ಅದೇ ರೀತಿ ಹರಿಕಥೆ ಕೂಡ ಒಂದು ಸಂಯುಕ್ತ ಕಲೆ. ಅದರಲ್ಲಿ ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತು ತತ್ವಶಾಸ್ತ್ರ ಸೇರಿಕೊಂಡಿವೆ” ಎನ್ನುವುದು ಮಂಜುಳಾ ಅವರ ಅಭಿಪ್ರಾಯ.

ಮಂಜುಳಾ ಅವರು ಬಾಲ್ಯದಲ್ಲಿ ತಂದೆತಾಯಿಗಳು, ಮದುವೆ ಬಳಿಕ ಪತಿ ಮತ್ತು ಅತ್ತೆ ಮಾವಂದಿರು ನೀಡಿರುವ ಪ್ರೋತ್ಸಾಹ ಇಂದು ಈ ಮಟ್ಟಕ್ಕೆ ಸಾಧಕಿಯಾಗಿ ಗುರುತಿಸುವಂತೆ ಮಾಡಿದೆ ಎಂದು ವಿನೀತರಾಗುತ್ತಾರೆ. ನಿಜಕ್ಕೂ ಇವರ ಭಕ್ತಿ ರಸಮಂಜರಿ ಆಸ್ವಾದಕರು ಪುನೀತರಾಗುತ್ತಾರೆ.

Recommended For You

3 Comments

  1. ಶರಣು..ಮಧುರಭಾಷಿಣಿ ಸದಯರೂಪಿಣಿಯಾದ ನಿಮ್ಮ ಸಾಧನಗೆ

    1. ವಂದನೆಗಳು (ಮಂಜುಳಾ ಜಿ ರಾವ್ ಅವರ ಪರವಾಗಿ)

Leave a Reply

error: Content is protected !!
%d bloggers like this: