ಚಿರಂಜೀವಿ ಸರ್ಜ ನಟನೆಯ ‘ಶಿವಾರ್ಜುನ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸಂಸದ ತೇಜಸ್ವಿ ಸೂರ್ಯ ನೆರವೇರಿಸಿದರು.
ಪ್ರೊಡಕ್ಷನ್ ಕಂಟ್ರೋಲರ್ ಆಗಿ ಹಲವಾರು ತಾರೆಯರ ಚಿತ್ರಗಳಿಗೆ ಕೆಲಸ ಮಾಡಿದ್ದ ಶಿವಾರ್ಜುನ ಅವರು ತಮ್ಮದೇ ಹೆಸರಿನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಶಿವಾರ್ಜುನ ಚಿತ್ರವನ್ನು ‘ಮಳೆ’ ಚಿತ್ರದ ಶಿವ ತೇಜಸ್ ನಿರ್ದೇಶಿಸಿದ್ದು ಚಿತ್ರದ ಟ್ರೇಲರನ್ನು ಶಿವರಾತ್ರಿಯಂದು ಬಿಡುಗಡೆಗೊಳಿಸುವ ಮೂಲಕ ಎಲ್ಲವೂ ಶಿವಮಯವಾದ ಸಂಭ್ರಮವನ್ನು ಎಲ್ಲರೂ ಹಂಚಿಕೊಂಡರು.
ಚಿತ್ರದ ನಾಯಕಿಯರಲ್ಲೊಬ್ಬರಾದ ಅಮೃತಾ ಅಯ್ಯಂಗಾರ್ ಅವರು ತಮಗೆ ಈ ಬಾರಿಯ ಶಿವರಾತ್ರಿ ಎರಡೆರಡು ಕಾರಣಗಳಿಂದಾಗಿ ವಿಶೇಷ ಎಂದರು. ಒಂದು ಅವರು ಪಾತ್ರ ಮಾಡಿದ್ದಂಥ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಿಡುಗಡೆಯಾಗಿತ್ತು. ಎರಡನೆಯದು ಅವರ ತಾಯಿಯ ಜನ್ಮದಿನ ಕೂಡ ಅಂದೇ ಆಗಿತ್ತು. ಮತ್ತೋರ್ವ ನಾಯಕಿ ಅಕ್ಷತಾ ಶ್ರೀನಿವಾಸ್ ತನ್ನ ಊರು ಕರ್ನಾಟಕ ಎನ್ನುವ ಮೂಲಕ ಕರ್ನಾಟಕವನ್ನೇ ಪ್ರತಿನಿಧಿಸುವ ಮಟ್ಟಕ್ಕೆ ತಾನು ಹೊರಗೆ ಗುರತಿಲ್ಪಡಬೇಕೆಂಬ ತಮ್ಮ ಆಸೆಯನ್ನು ಪ್ರಕಟಿಸಿದರು. ತಮಗೆ ಚಿತ್ರದಲ್ಲಿ ನಾಯಕ ಮತ್ತು ಸಾಧು ಕೋಕಿಲ ಅವರೊಂದಿಗೆ ಹೆಚ್ಚಿನ ದೃಶ್ಯಗಳಲ್ಲಿ ನಟಿಸುವ ಅವಕಾಶ ಇತ್ತೆಂದು ಅಕ್ಷತಾ ಹೇಳಿದರು. ಇನ್ನೊಬ್ಬ ನಾಯಕಿ ಅಕ್ಷಿತಾ ಬೋಪಯ್ಯ, ನಟ ಶಿವರಾಜ್ ಕೆ.ಆರ್ ಪೇಟೆ, ನಿರ್ಮಾಪಕಿ ಮಂಜುಳಾ ಶಿವಾರ್ಜುನ್, ಚಿತ್ರಕ್ಕೆ ಬೆಂಬಲವಾಗಿ ನಿಂತ ನಿರ್ಮಾಪಕರಾದ ಉದಯ್ ಕೆ ಮೆಹ್ತ, ಗಂಗಾಧರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯ ನಟಿ ತಾರಾ ಅನುರಾಧ ಅವರು ಚಿತ್ರದಲ್ಲಿ ತಾವು ಕುಟುಂಬ ಸಮೇತ ಪಾಲ್ಗೊಂಡಿರುವುದಾಗಿ ತಿಳಿಸುತ್ತಾ, ತಮ್ಮ ವೇಣು ಅವರೇ ಛಾಯಾಗ್ರಹಣ ನಿರ್ವಹಿಸಿದ್ದಾರೆ ಎನ್ನುವುದನ್ನು ಸ್ಮರಿಸಿಕೊಂಡರು. ಅಂದಹಾಗೆ ಚಿತ್ರದಲ್ಲಿ ತಾರಾ ಅವರೊಂದಿಗೆ ಪುತ್ರ ಕೃಷ್ಣ ಕೂಡ ನಟಿಸಿದ್ದು, ಪ್ರಥಮ ಬಾರಿ ಬಾಲನಟನಾಗಿ ಕಾಣಿಸಿಕೊಂಡಿರುವುದು ಖುಷಿ ತಂದಿದೆ ಎಂದರು.
ಚಿತ್ರೋದ್ಯಮದಲ್ಲಿ ಇದ್ದುಕೊಂಡು ಗುರುತಿಸಲ್ಪಡದೆ ಹೋಗಿರುವ ಪೋಸ್ಟರ್ ಅಂಟಿಸುವವರು, ಚಿತ್ರ ಮಂದಿರದೊಳಗೆ ಕೆಲಸ ಮಾಡುವವರು ಮೊದಲಾದವರಲ್ಲಿ ಹಿರಿಯರನ್ನು ಹುಡುಕಿ ಸನ್ಮಾನ ಮಾಡಿಸುವ ಕೆಲಸ ನಡೆಯಿತು. ಅತಿಥಿಗಳಾಗಿ ಆಗಮಿಸಿದ್ದ ದ್ರುವ ಸರ್ಜ ಸನ್ಮಾನ ನೆರವೇರಿಸಿದರು. ಇದೇ ವೇಳೆ ತೇಜಸ್ವಿ ಸೂರ್ಯ ಅವರನ್ನು ಕೂಡ ಸನ್ಮಾನಿಸಲಾಯಿತು.