“ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..” ಎಂದು ಹಾಡಿ ಕೇಳುಗರೆಲ್ಲರೂ ಭಕ್ತರಾಗುವಂತೆ ಮಾಡಿದ ರಘು ದೀಕ್ಷಿತ್ ಇತ್ತೀಚೆಗೆ ಹಾಡಿರುವ ಕೆಲವು ಗೀತೆಗಳ ಬಗ್ಗೆ ಅಸಮಾಧಾನ ಇತ್ತು ಎನ್ನುವುದನ್ನು ಹೊರಗೆಡಹಿದ್ದಾರೆ. ಅದರಲ್ಲೊಂದು ಹೇಳಿ ಎಂದು ಮಾಧ್ಯಮದವರು ಒತ್ತಾಯ ಮಾಡಿದಾಗ ಅವರು ನೆನಪಿಸಿಕೊಂಡಿದ್ದು ‘ರುಸ್ತುಂ’ ಚಿತ್ರದ ‘ಯು ಆರ್ ಮೈ ಪೊಲೀಸ್ ಬೇಬಿ’ ಎನ್ನುವ ಗೀತೆಯನ್ನು!
ಸಾಹಸ ನಿರ್ದೇಶಕ ರವಿವರ್ಮ ಪ್ರಥಮ ಬಾರಿ ನಿರ್ದೇಶಿಸಿದ ಚಿತ್ರ ರುಸ್ತುಂ ಆಗಿತ್ತು. ಅದರಲ್ಲಿ ಡಾ. ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದರು. ಯು ಆರ್ ಮೈ ಪೊಲೀಸ್ ಬೇಬಿ ಎನ್ನುವ ಗೀತೆಯಲ್ಲಂತೂ ಶಿವಣ್ಣ ಸಕತ್ ಕಲರ್ ಫುಲ್ಲಾಗಿ ಕಾಣಿಸಿಕೊಂಡಿದ್ದರು. ಆದರೆ ರಘು ಅವರಿಗೆ ಹಾಡು ಅಸಮಾಧಾನ ತರಲು, ಅನೂಪ್ ಸೀಳಿದ ಮಾಡಿದಂಥ ಹಾಡಿನ ಕಂಪೋಸಿಂಗ್ ಆಗಲೀ, ಪರದೆಯ ಮೇಲಿನ ಡ್ಯಾನ್ಸ್ ಕಂಪೋಸಿಂಗ್ ಆಗಲೀ ಕಾರಣವಲ್ಲ. ಕಾರಣವಾಗಿದ್ದು ಎ.ಪಿ ಅರ್ಜುನ್ ಅವರ ರಚನೆಯ ಹಾಡು! ಇದು ನಿಮಗೆ ಹೇಳಿಸಿದ ಹಾಡಲ್ಲ. ನೀವು ಇಂಥ ಗೀತೆಯನ್ನು ಹಾಡಬಾರದಿತ್ತು ಎಂದು ತಮಗೆ ಆತ್ಮೀಯ ಅಭಿಮಾನಿಗಳು ಫೋನ್ ಮಾಡಿ ಹೇಳಿದ್ದಾರೆ. ತಮಗೂ ಅದು ನಿಜ ಅನಿಸಿತು ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಹಾಗೆ ನೋಡಿದರೆ ನಿರ್ದೇಶಕ ಎ.ಪಿ ಅರ್ಜುನ್ ಅವರು ಕೂಡ ಒಳ್ಳೆಯ ಗೀತ ಸಾಹಿತಿ ಕೂಡ ಹೌದು. ‘ರಾಟೆ’ ಚಿತ್ರದಲ್ಲಿ ಅವರೇ ರಚಿಸಿರುವ ‘ಜೋಡಕ್ಕಿ ಗೂಡು..’ ಗೀತೆಯಿಂದ ಹಿಡಿದು, ಅವರದೇ ಲೇಟೆಸ್ಟ್ ಹಿಟ್ ‘ನೀನೇ ಮೊದಲು.. ನೀನೇ ಕೊನೇ..” ಗೀತೆಗಳು ಅದ್ಭುತವಾದವುಗಳು. ಆದರೆ ಅವರಿಂದ ಇಂಥದೊಂದು ಹಾಡು ಬರೆಸಲ್ಪಟ್ಟಿದೆ ಹೊರತು ಅವರು ಕೂಡ ಐಟಂ ಹಾಡು ಬರೆಯವ ಬ್ರ್ಯಾಂಡ್ ನವರಲ್ಲ ಎನ್ನುವದನ್ನು ನಾವು ಕೂಡ ನೆನಪಿಸಿಕೊಳ್ಳಬಹುದು.
ಒಂದು ವೇಳೆ ಇಂಥ ಹಾಡುಗಳು ರಘು ದೀಕ್ಷಿತ್ ಅವರಿಗೆ ಇಷ್ಟವಾಗದಿದ್ದರೆ ಅವರು ಯಾಕೆ ಒಪ್ಪಿಕೊಳ್ಳಬೇಕು ಎನ್ನುವ ಪ್ರಶ್ನೆ ಸಹಜ. ಅಂದಹಾಗೆ ಈ ವಿಚಾರ ಉದ್ಭವವಾಗಲು ಕಾರಣವೇ ಅದು.
ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. “ಚಿತ್ರದ ಸಂಗೀತ ಸಂಯೋಜನೆಗೆ ತುಂಬ ಖುಷಿಯಾಗಿದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ, ಹಾಡುಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ” ಎಂದರು. ಅಂಥ ಅನಿವಾರ್ಯ ಪರಿಸ್ಥಿತಿಯಲ್ಲಿ ಹಾಡಿದ ಗೀತೆಗೆ ಉದಾಹರಣೆ ಹೇಳುವಂತೆ ಒತ್ತಡ ಹಾಕಿದಾಗ ಅವರು ನೆನಪಿಸಿಕೊಂಡ ಗೀತೆಯೇ ಯು ಆರ್ ಪೊಲೀಸ್ ಬೇಬಿ.
ಅಭಿಮಾನಿಗಳು ಇಷ್ಟ ಪಡುವುದಿಲ್ಲ ಎನ್ನುವ ವಿಚಾರಕ್ಕೆ ಬಂದರೆ ಖುದ್ದು ‘ರುಸ್ತುಂ’ ಚಿತ್ರವನ್ನೇ ಶಿವಣ್ಣನ ಅಭಿಮಾನಿಗಳು ಸ್ವೀಕರಿಸಿರಲಿಲ್ಲ! ಆದರೆ ಹಾಡುಗಳ ವಿಚಾರಕ್ಕೆ ಬಂದರೆ ‘ಯು ಆರ್ ಮೈ ಪೊಲೀಸ್ ಬೇಬಿ’ ಹಾಡು ಒಂದು ಹಂತಕ್ಕೆ ಫ್ಯಾನ್ಸ್ ಬಾಯಲ್ಲಿ ನಲಿದಾಡುತ್ತಿವೆ. ಬಹುಶಃ ನನ್ನ ಫ್ಯಾನ್ಸ್ ನನಗೆ ಹೊಂದಾಣಿಕೆ ಆಗಲ್ಲ ಎಂದದ್ದಿರಬಹುದು. ಯಾಕೆಂದರೆ ನಾನು ಭಾವಗೀತೆಯಂಥ ಹಾಡುಗಳಿಗೆ ಧ್ವನಿಯಾದವನು. ನನಗೂ ವಯಸ್ಸಾಗುತ್ತಿರುವ ಕಾರಣ ನನ್ನ ಟೇಸ್ಟ್ ಗೂ ಈ ಹಾಡುಗಳಿಗೂ ಹೊಂದಾಣಿಕೆಯಾಗದೇ ಹೋಗಿರಬಹುದು ಎನ್ನುತ್ತಾರೆ ರಘು ದೀಕ್ಷಿತ್.
ಸಿನಿಮಾರಂಗಕ್ಕೆ ಬಂದ ಮೇಲೆ, ಅಲ್ಲಿ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಕಟ್ಟುಪಾಡುಗಳನ್ನು ಹಾಕಿಕೊಂಡು ಚಿತ್ರ ಮಾಡಿ ಸ್ಟಾರಾಗಿ ಉಳಿಯಲು ಎಲ್ಲರೂ ಡಾ.ರಾಜ್ ಕುಮಾರ್ ಅಲ್ಲವಲ್ಲ?! ಹಾಗೆ ನೋಡಿದರೆ ವಿಜಯ್ ಪ್ರಕಾಶ್ ಅವರಂಥ ಪ್ರತಿಭಾವಂತರನ್ನೇ ನಮ್ಮ ಚಿತ್ರರಂಗ ಕುಡುಕರ ಗೀತೆಗಳಿಗೆ ರಾಯಭಾರಿ ಎನ್ನುವಂತೆ ಮಾಡಿಬಿಟ್ಟಿದೆ. ಹಾಗಾಗಿ ಅಸಮಾಧಾನ ತೊರೆದು ಸಿಕ್ಕ ಹಾಡುಗಳಲ್ಲೇ ನಮ್ಮ ಮನ ಹೊಕ್ಕು ನಿಲ್ಲುವ ಶಕ್ತಿ ನಿಮಗೆ ಸಿಗಲೆಂದು ರಘು ದೀಕ್ಷಿತ್ ಅವರಿಗೆ ಹಾರೈಸೋಣ