
“ನನ್ನ ಸಿನಿಮಾ ಬದುಕಿನ ಮೊದಲ ತಂಡ ಇಲ್ಲಿ ಸೇರಿದೆ. ಸಿನಿಮಾದವರ ಜತೆಗೆ ನಾನು ಹೇಗೆ ಬೆರೆಯುವುದು ಎನ್ನುವ ಆತಂಕದಲ್ಲಿದ್ದ ನನಗೆ ಎರಡೇ ದಿನದಲ್ಲಿ ಆತ್ಮೀಯರಾದ ತಂಡ ಎಂ.ಡಿ ಶ್ರೀಧರ್ ಅವರದ್ದು. ಈಗ ಈ ತಂಡದಲ್ಲಿರುವ ಹರಿಯವರು ನಾಯಕರಾಗಿರುವುದು ಖುಷಿಯ ವಿಷಯ. ತಂಡಕ್ಕೆ ಗೆಲುವು ” ಎಂದು ಶರಣ್ ಶುಭ ಹಾರೈಸಿದರು. ಅವರು ‘ಎಂ.ಆರ್.ಪಿ’ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಮಾತನಾಡುತ್ತಿದ್ದರು.

“ಜಿಮ್ ಗೆ ಹೋದರೆ ಕರಗದ ಬಾಡಿ ಇದು ಎನ್ನುವ ಅರಿವಾದ ಬಳಿಕ, ತಾನಿದ್ದ ಹಾಗೆಯೇ ಎಂಜಾಯ್ ಮಾಡುವುದನ್ನು ಕಲಿಯುವಂಥ ದಪ್ಪ ದೇಹದ ಯುವಕನ ಕತೆಯೇ ಈ ಚಿತ್ರ” ಎನ್ನುತ್ತಾರೆ ನಿರ್ದೇಶಕ ಬಾಹುಬಲಿ. ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಜಗ್ಗೇಶ್ ಅವರು ಒಂದಷ್ಟು ದೃಶ್ಯಗಳನ್ನು ನೋಡಿ ಮೆಚ್ಚಿ ವಾಯ್ಸ್ ಓವರ್ ನೀಡಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಬಾಹುಬಲಿ ಹೇಳಿದರು.
ಎಲ್ಲವೂ ಚೆನ್ನಾಗಿ ಬಂದಿದೆ. ನಾನೇ ಡಬ್ ಮಾಡಿದ್ದೀನಿ. ಮಾತ್ರವಲ್ಲ ಸಾಹಸ ದೃಶ್ಯಗಳಲ್ಲಿ ಕೂಡ ಖುದ್ದಾಗಿ ಕಾಣಿಸಿಕೊಂಡಿದ್ದೀನಿ ಎಂದು ಚಿತ್ರದ ನಾಯಕ ಹರಿಪ್ರಸಾದ್ ತೃಪ್ತಿ ವ್ಯಕ್ತಪಡಿಸಿದರು.
ಪೂರ್ತಿ ‘ಫ್ರೆಂಡ್ಸ್’ ಚಿತ್ರತಂಡವನ್ನು ಇಲ್ಲಿ ಸೇರಿಸಬೇಕು ಎನ್ನುವ ಯೋಜನೆ ಇತ್ತು. ಆದರೆ ನಾಯಕಿ ಮತ್ತೊಂದಷ್ಟು ಜನರಿಗೆ ಬರಲು ಸಾಧ್ಯವಾಗಿಲ್ಲ. ಮುಂದೊಂದು ದಿನ ಇಡೀ ತಂಡವನ್ನು ಸೇರಿಸಲು ಪ್ರಯತ್ನಿಸುವುದಾಗಿ ಎಂದು ಚಿತ್ರದ ನಿರ್ಮಾಪಕ ಎಂ.ಡಿ ಶ್ರೀಧರ್ ಹೇಳಿದರು.
ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ‘ಚುಟು ಚುಟು..’ ಖ್ಯಾತಿಯ ರವೀಂದ್ರ ಸೊರಗಾಂವಿ ಮತ್ತು ಸಂಚಿತ್ ಹೆಗ್ಡೆ ಮೊದಲಾದವರು ಹಾಡಿದ್ದು ತುಂಬ ಚೆನ್ನಾಗಿ ಮೂಡಿ ಬಂದಿವೆ ಎಂದು ಸಂಗೀತ ನಿರ್ದೇಶಕ ಹರ್ಷವರ್ಧನ್ ಅವರು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ದಿನಕರ ತೂಗುದೀಪ ಅವರು “ಇದು ನಮ್ಮದೇ ತಂಡ ನಾವೆಲ್ಲ ವಾರಕ್ಕೆರಡು ಬಾರಿ ಭೇಟಿಯಾಗುವಂಥವರು” ಎಂದು ಆತ್ಮೀಯ ಭಾವ ತೋರಿದರು. ಮತ್ತೋರ್ವ ಅತಿಥಿ ಕವಿರಾಜ್ ಮಾತನಾಡಿ, “ಇದು ಎಷ್ಟರಮಟ್ಟಿಗೆ ನಮ್ಮದೇ ಸಿನಿಮಾ ಎಂದರೆ, ನನ್ನ ಚಿತ್ರ ‘ಕಾಳಿದಾಸ ಕನ್ನಡ ಮೇಷ್ಟ್ರು’ ಶೂಟಿಂಗ್ ಸ್ಪಾಟ್ ನಲ್ಲಿ ಒಂದೇ ಪರ್ಮಿಷನಲ್ಲಿ ಈ ಚಿತ್ರದ ದೃಶ್ಯಗಳನ್ನು ಕೂಡ ಚಿತ್ರೀಕರಿಸಲಾಗಿತ್ತು. ಈ ಗುಟ್ಟು ನಮ್ಮಲ್ಲೇ ಇರಲಿ” ಎಂದರು.
ಇದು ನಗುವಿನ ಮ್ಯಾಕ್ಸಿಮಮ್ ರಿಟೈಲ್ ಪ್ರೈಸ್ ಆಗಿರುವ ನಂಬಿಕೆ ಇದೆ. ಇದು ಫ್ರೆಂಡ್ಸ್ ಹಾಗೆಯೇ ಈ ಚಿತ್ರ ಕೂಡ ದೊಡ್ಡ ಯಶಸ್ಸು ಗಳಿಸಲಿ ಎಂದು ಆನಂದ್ ಆಡಿಯೋ ಶ್ಯಾಮ್ ಹಾರೈಸಿದರು.

ನಟ ಬಲರಾಜ್ ವಾಡಿಯವರು ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದು, ಮೊದಲ ಬಾರಿ ಖಳನಿಂದ ಕಾಮಿಡಿ ಪಾತ್ರಕ್ಕೆ ಬದಲಾಗಿದ್ದೀನಿ ಎಂದರು.
ಎಂ.ಡಿ ಶ್ರೀಧರ್ ಅವರೊಂದಿಗೆ ಛಾಯಾಗ್ರಾಹಕ ಎ.ವಿ ಕೃಷ್ಣಕುಮಾರ್ (ಕೆ.ಕೆ), ಮೋಹನ್ ಕುಮಾರ್ ಎನ್.ಜಿ, ರಂಗಸ್ವಾಮಿ ಕೆ.ಆರ್ ಸೇರಿಕೊಂಡು ಚಿತ್ರ ಮಾಡಿದ್ದಾರೆ. ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.