ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಅವರ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಆಗಮನವಾಗಿದೆ. ತಾವು ಬರುವುದರ ಜತೆಗೆ ವರ್ಷಗಳಿಂದ ಸಿನಿಮಾ ಕ್ಷೇತ್ರದ ಜತೆಗೆ ಸಂಪರ್ಕವೇ ಇಲ್ಲವೇನೋ ಎಂಬಂತಿರುವ ಸುನೀಲ್ ರಾವ್ ಅವರನ್ನು ಕೂಡ ನಾಯಕರಾಗಿ ವಾಪಾಸು ಕರೆತಂದಿದ್ದಾರೆ.
ಸುನೀಲ್ ರಾವ್ ಇಷ್ಟೊಂದು ಗ್ಯಾಪ್ ಆದರೂ ಅಂದಿನ ಹುಡುಗನಂತೆ ಕಾಣಿಸುತ್ತಾರೆ. ಆದರೆ ತಾನು ಇದಕ್ಕಿಂತಲೂ ಫಿಟ್ ಆಗಿದ್ದೆ. ಇದರಲ್ಲಿ ಸೋಮಾರಿಯ ಪಾತ್ರವಾದ ಕಾರಣ ತಿಂದುಂಡು ಮೈ ತುಂಬಿಕೊಳ್ಳುವಂತೆ ಹೇಳಿದ ನಿರ್ದೇಶಕರು ನಾನು 4ಕೆ.ಜಿ ಮೈತೂಕ ಹೆಚ್ಚುವಂತೆ ಮಾಡಿದ್ದಾರೆ ಎಂದರು ಸುನೀಲ್ ರಾವ್. ರಾಜ್ ಬಿ ಶೆಟ್ಟಿಯವರು ನಮ್ಮ ಚಿತ್ರದಲ್ಲಿರುವುದು ಒಂದು ದೊಡ್ಡ ಶಕ್ತಿ ಎಂದರು.
ಒಂದು ಮೊಟ್ಟೆಯ ಕತೆ ಬಳಿಕ ಒಪ್ಪಿಕೊಂಡಂಥ ಮೊದಲ ಚಿತ್ರ ಇದು. ನನ್ನನ್ನು ಆಡಿಶನ್ ಮಾಡಿಸಿ ಅವಕಾಶ ನೀಡಿದ್ದರು. ನನಗೆ ಬೆಂಗಳೂರಿನ ಒಬ್ಬ ಕ್ಯಾಬ್ ಡ್ರೈವರ್ ಪಾತ್ರವಿದೆ ಎಂದರು. ನಿರ್ದೇಶಕ ಹೇಮಂತ್ ಕುಮಾರ್ ಪ್ರಕಾರ, ಸೋಮಾರಿತನ ಎನ್ನುವುದು ಒಂದಲ್ಲ ಒಂದು ಬಾರಿ ಎಲ್ಲರ ಜೀವನದಲ್ಲಿ ಕೂಡ ಬಂದು ಹೋಗುವ ಭಾವ. ಚಿತ್ರದಲ್ಲಿ ನಾಯಕ ಚಿಕ್ಕ ಮಕ್ಕಳೊಂದಿಗೆ ಕ್ರಿಕೆಟ್ ಆಡಿ, ಸಿನಿಮಾ ನೋಡಿ ಸುಮ್ಮನಿರುವ ಯುವಕ. ಆದರೆ ಸಾವು ಬಂದು ಕಾಡಿದಾಗ ಮರಳಿ ಬದುಕಲು ಮೂರೇ ದಿನಗಳಲ್ಲಿ ಆತ ಏನು ಅಚೀವ್ ಮಾಡುತ್ತಾನೆ ಎನ್ನುವುದೇ ಚಿತ್ರದ ಕತೆ ಎನ್ನುವ ಹೇಮಂತ್ ಕುಮಾರ್ ಅವರಿಗೆ ಇಂಥ ಫ್ಯಾಂಟಸಿಗೆ ತಮ್ಮ ಅಜ್ಜಿಕತೆಗಳೇ ಸ್ಫೂರ್ತಿಯಂತೆ.
ಕ್ರಿಕೆಟ್ ಕೋಚ್ ಸಂಯುಕ್ತಾ ಹೆಗ್ಡೆ!
ಕಿರಿಕ್ ಪಾರ್ಟಿಯ ಆರ್ಯ ಪಾತ್ರದ ಬಳಿಕ ಅಂಥದೇ ಒಂದು ಲವಲವಿಕೆಯ ಪಾತ್ರದಲ್ಲಿ ನಟಿಸಿದ್ದೇನೆ ಎಂದರು ಸಂಯುಕ್ತಾ ಹೆಗ್ಡೆ. ಸಿಂಧು ಎನ್ನುವ ನನ್ನ ಪಾತ್ರ ಪ್ರತಿಯೊಬ್ಬರ ಮುಖದಲ್ಲಿಯೂ ನಗು ತರಿಸುವಂಥ ವ್ಯಕ್ತಿತ್ವ ಹೊಂದಿದೆ. ಚಿತ್ರದಲ್ಲಿ ಚಿಕ್ಕಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ಮಾಡುತ್ತೇನೆ. ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದೇನೆ ಎಂದರು.
ಚಿತ್ರದಲ್ಲಿ ಸುಧಾರಾಣಿ ಅವರು ನರ್ಸ್ ಆಗಿ ಕಾಣಿಸಲಿದ್ದು, ಅಚ್ಯುತ್ ಕುಮಾರ್ ಮೇಲ್ ನರ್ಸ್ ಆಗಿದ್ದಾರಂತೆ! ಹಿತಾ ಚಂದ್ರಶೇಖರ್, ಸಂಯುಕ್ತಾ ಹೆಗ್ಡೆ, ನಾಗೇಂದ್ರ ಶಾ, ಅರುಣಾ ಬಾಲರಾಜ್, ಅಮೃತಾ ರಾಮಮೂರ್ತಿ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕರು ಧೀರೇಂದ್ರ ದಾಸ್. ಅವರಿಗೆ ಇದು ಮೂರನೇ ಸಿನಿಮಾ. ಒಂದೇ ಹಾಡಲ್ಲಿ ಎರಡೆರಡು ಭಾವ ತರುವ ಪ್ರಯತ್ನ ಮಾಡಿದ್ದೇನೆ. ಗಾಯಕಿ ಸುಪ್ರಿಯಾ ಲೋಹಿತ್ ಸುಪ್ರಿಯಾ ರಾಮ್ ಹೆಸರಲ್ಲಿ ಹಾಡಿದ್ದಾರಂತೆ. ಗೀತೆಗಳಿಗೆ ಸಾಹಿತ್ಯ ನೀಡಿರುವ ಜಯಂತ್ ಕಾಯ್ಕಿಣಿ, ಧನಂಜಯ ರಂಜನ್ ಅವರೊಂದಿಗೆ ಸಹ ನಿರ್ಮಾಪಕ ಶರತ್ ಭಗವಾನ್ ಸಹನಿರ್ಮಾಪಕರಾಗಿ, ಒಂದು ಹಾಡನ್ನುಕೂಡ ರಚಿಸಿದ್ದಾರೆ. ಅವರು ಈ ಹಿಂದೆ `ಕತೆಯೊಂದು ಶುರುವಾಗಿದೆ’ ಎನ್ನುವ ಗೀತೆ ಬರೆದವರು ಎನ್ನುವುದು ಗಮನಾರ್ಹ.
ಚಿತ್ರಕ್ಕೆ 32ನಿಮಿಷಗಳ ವಿ ಎಫ್ ಎಕ್ಸ್ ಇದೆ. ಗುಣಮಟ್ಟ ಕಡಿಮೆಯಾಗದಂತೆ ಗ್ರೇಡಿಂಗ್ ನಡೆಯುತ್ತದೆ. ಸದ್ಯದಲ್ಲೇ ಸೆನ್ಸಾರ್ ಮುಗಿಸಿ ಬಿಡುಗಡೆ ದಿನಾಂಕ ಪ್ರಕಟಿಸಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.