“ತ.ರಾ.ಸು ಅವರ ಸಾಕಷ್ಟು ಕಾದಂಬರಿಗಳನ್ನು ಓದಿ ನಾವೇ ದುರ್ಗದಲ್ಲಿದ್ದ ಭಾವ ಮೂಡಿತ್ತು. ಬಿ. ಎಲ್ ವೇಣು ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಕೆಲಸ ಮಾಡುವಾಗ ಅವೆಲ್ಲವೂ ಸಹಾಯವಾಯಿತು” ಎಂದರು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್. ಅವರು ‘ಬಿಚ್ಚುಗತ್ತಿ’ ಚಿತ್ರದ ಟೀಸರ್ ಪ್ರದರ್ಶನದ ಬಳಿಕ ಮಾತನಾಡುತ್ತಿದ್ದರು.
“ಇಂಥದೊಂದು ಚಿತ್ರವನ್ನು ಈ ಕಾಲದಲ್ಲಿ ತಂದಿರುವುದಕ್ಕೆ ನಿರ್ಮಾಪಕರನ್ನು ಮತ್ತು ನಿರ್ದೇಶಕ ಸಂತು ಅವರನ್ನು ಅಭಿನಂದಿಸಲೇಬೇಕು” ಎಂದು ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ಸುಪರ್ ಹಿಟ್ ಚಿತ್ರ ‘ಪುಲಿಮುರುಗನ್’ ನಲ್ಲಿ ಹುಲಿಯನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ತೋರಿಸಲಾಗಿತ್ತು. ಅದೇ ಹೈದರಾಬಾದ್ ನ ತಾಂತ್ರಿಕ ಸಂಸ್ಥೆಯ ಮೂಲಕ ಈ ಚಿತ್ರದಲ್ಲಿಯೂ ಸಿ.ಜಿ ಮಾಡಲಾಗಿದೆ. ಕಡಿಮೆ ಬಜೆಟ್ ನಲ್ಲಿ ಉತ್ಕೃಷ್ಟವಾಗಿ ಮಾಡಿರುವ ಈ ಹುಲಿಯನ್ನು ಕಂಡು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ನಿರ್ದೇಶಕ ಹರಿಸಂತು ಹೇಳಿದರು.
ಇದು ವರ್ಷದ ಮೊದಲ ಸಿನಿಮಾ. ಅಮ್ಮನಿಗೆ ಐತಿಹಾಸಿಕ ಪಾತ್ರಗಳೆಂದರೆ ತುಂಬ ಇಷ್ಟ. ಬಾಲ್ಯದಲ್ಲಿ ಛದ್ಮವೇಷದಲ್ಲಿ ಪಾಲ್ಗೊಳ್ಳುವಾಗಲೇ ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ಪಾತ್ರಗಳನ್ನು ನೀಡಿದ್ದರು. ಇತ್ತೀಚೆಗಷ್ಟೇ ಅವರು ನನಗೆ ಮತ್ತೋರ್ವ ಐತಿಹಾಸಿಕ ಪಾತ್ರದ ಬಗ್ಗೆಯೂ ಹೇಳಿದ್ದಾರೆ. ಆ ಹೋರಾಟಗಾರ್ತಿಯ ಬಗ್ಗೆ ಇನ್ನೂ ಚಿತ್ರ ಬಂದಿಲ್ಲ. ಇಂಥ ವಾತಾವರಣದಲ್ಲಿ ಬೆಳೆದ ನನಗೆ ಬಿಚ್ಚುಗತ್ತಿಯಲ್ಲಿ ಇಂಥದೊಂದು ಪಾತ್ರ ದೊರಕಿದ್ದು ತುಂಬ ಖುಷಿಯಾಗಿದೆ ಎಂದರು ಹರಿಪ್ರಿಯಾ. ಕುದುರೆ ಸವಾರಿ ಎಲ್ಲ ನನಗೆ ಮೊದಲೇ ಗೊತ್ತಿತ್ತು. ಆದರೆ ಕತ್ತಿವರಸೆ ಕೂಡ ನಿಜವಾದ ಕತ್ತಿಯನ್ನೇ ಬಳಸಿ ಮಾಡಬೇಕಾಗಿ ಬಂದಿದ್ದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಕೇವಲ 40ದಿನದೊಳಗೆ ಇಷ್ಟೊಂದು ಜನ, ಪ್ರಾಣಿಗಳನ್ನು ಬಳಸಿ ಇಂಥದೊಂದು ಚಿತ್ರವನ್ನು ಪೂರ್ತಿ ಮಾಡಿದ್ದಕ್ಕೆ ಖಂಡಿತವಾಗಿ ನಿರ್ದೇಶಕರನ್ನು ಅಭಿನಂದಿಸಬೇಕು ಎಂದು ಹರಿಪ್ರಿಯಾ ಹೇಳಿದರು.
ಬಿಚ್ಚುಗತ್ತಿ ಒಪ್ಪಿಕೊಂಡಾಗಲೇ ಖುಷಿಯಿತ್ತು. ದರ್ಶನ್ ಅವರಿಂದ ಹಿಡಿದು ಆರಂಭದಿಂದಲೇ ಪ್ರೋತ್ಸಾಹ ನೀಡಿದ್ದಾರೆ. ಈಗ ಎಲ್ಲರೂ ಚಿತ್ರದ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದು ಖುಷಿ ತಂದಿದೆ ಎಂದರು ರಾಜವರ್ಧನ್.
ಚಿತ್ರದಲ್ಲಿ ಏಳು ಫೈಟ್ ಗಳಿವೆ!
ಹಲವು ಮಂದಿ ಫೈಟ್ ಮಾಸ್ಟರ್ ಗಳ ಮೂಲಕ ಎಂದು ನಿರ್ದೇಶಕ ಹರಿಸಂತು ಮಾಹಿತಿ ನೀಡಿದರು. ಎ ಆರ್ ರೆಹಮಾನ್ ಅವರೊಂದಿಗೆ ಮ್ಯೂಸಿಕ್ ಪ್ರೋಗ್ರಾಮಿಂಗ್ ಮಾಡುವ ನಕುಲ್ ಅಭಯಂಕರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಂಸಲೇಖ ಅವರ ಒಂದು ಹಾಡು ಕೂಡ ಇದೆ.
ಚಾಪ್ಟರ್ 2 ಬಂದೇ ಬರುತ್ತದೆ
ನಿರ್ಮಾಪಕರು ಲಾಭಕ್ಕಿಂತ ಹೆಚ್ಚಾಗಿ ಚಿತ್ರದುರ್ಗದ ಕುರಿತಾದ ಒಂದು ಒಳ್ಳೆಯ ಸಿನಿಮಾ ಬರಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಚಿತ್ರ ಸೋತರೂ, ಗೆದ್ದರೂ ಎರಡನೇ ಭಾಗವಾಗಿ ಬರುವುದು ಖಚಿತ ಎಂದಿದ್ದಾರೆ.
ತೆಲುಗಲ್ಲಿ ಡಬ್ಬಿಂಗ್ ಕೇಳಿದ್ದಾರೆ
ಚಿತ್ರವನ್ನು ತೆಲುಗಿನಲ್ಲಿ ಡಬ್ಬಿಂಗ್ ಮಾಡಲು ಯೋಜನೆ ಇದೆ. ತೆಲುಗು ಚಿತ್ರರಂಗದವರೇ ಮಾಡಲು ತಯಾರಾಗಿದ್ದಾರೆ. ಯಾಕೆಂದರೆ ಹರಿಪ್ರಿಯಾ ಅವರು ತೆಲುಗಿನಲ್ಲಿ ಈಗಾಗಲೇ 6 ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು. ಮಾತ್ರವಲ್ಲ ನಮ್ಮ ಪೋಷಕ ಕಲಾವಿದರು ಕೂಡ ಅವರಿಗೆ ಅಪರಿಚಿತರೇನಲ್ಲ. ನಾಯಕ ರಾಜವರ್ಧನ ಕೂಡ ಯಾವ ತೆಲುಗು ನಾಯಕರಿಗೂ ಕಡಿಮೆ ಇರದಂತೆ ಕಾಣಿಸುತ್ತಾರೆ. ಹಾಗಾಗಿ ‘ನಾವೇ ಡಬ್ ಮಾಡಿ ಬಿಡುಗಡೆಗೊಳಿಸುವುದು ಉತ್ತಮ’ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಅದು ಇನ್ನೂ ಕಾರ್ಯಗತವಾಗಿಲ್ಲ ಎಂದರು ಸಂತು.
ಒಂದು ಸಣ್ಣ ಗ್ಯಾಪ್ ಬಳಿಕ ಕನ್ನಡದಲ್ಲಿ ಸಕ್ರಿಯವಾಗಿರುವ ಕಲ್ಯಾಣಿಯವರು ಚಿತ್ರದಲ್ಲಿ ತಾವು ದಳವಾಯಿ ಮುದ್ದಣ್ಣನ ಪತ್ನಿ ಮಲ್ಲವ್ವನ ಪಾತ್ರ ಮಾಡಿರುವುದಾಗಿ ಹೇಳಿದರು. ‘ಬಾಹುಬಲಿ’ ಚಿತ್ರ ನೋಡಿದಾಗ ಅದರಲ್ಲಿ ರಮ್ಯಾಕೃಷ್ಣನ್ ಅವರು ನಿರ್ವಹಿಸಿದ ಪಾತ್ರ ನೋಡಿ ತುಂಬ ಮೆಚ್ಚಿಕೊಂಡಿದ್ದೆ. ಅಂಥದೊಂದು ಪಾತ್ರ ಮಾಡಬೇಕು ಎನ್ನುವ ಕನಸು ಈ ಮೂಲಕ ನನಸಾಗಿದೆ. ಅಷ್ಟು ದೊಡ್ಡದಾಗಿ ಇರುವ ಪಾತ್ರ ಅಲ್ಲವಾದರೂ, ನನಗಂತೂ ವಿಭಿನ್ನ ಅನುಭವ ನೀಡಿದೆ ಎಂದರು ಕಲ್ಯಾಣಿ. ಟೀಸರ್ ಲಾಂಚ್ ಸಮಾರಂಭದಲ್ಲಿ ಹಿರಿಯನಟ ರಮೇಶ್ ಪಂಡಿತ್ ಮತ್ತು ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಉಪಸ್ಥಿತರಿದ್ದರು. ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆಕಾಣಲಿದೆ.