
“ಮಂಗಳೂರು ಕರಾವಳಿಯಲ್ಲಿ ಜನರು ದೇವರ ಜತೆಗೆ ದೈವಾರಾಧನೆಯನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಕೋಲ ಕಟ್ಟುವವರು ದೈವವನ್ನು ತಮ್ಮ ಮೈಯ್ಯಲ್ಲಿ ಆವಾಹಿಸಿಕೊಂಡು ದರ್ಶನ ನೀಡಿ ಹೇಳುವ ಮಾತನ್ನು ದೇವರ ಮಾತೇ ಎಂದು ನಂಬುತ್ತಾರೆ” ಎಂದು ಭೂತಕೋಲದ ಸಂಸ್ಕೃತಿಯ ಬಗ್ಗೆ ಯುವ ನಿರ್ಮಾಪಕ ಅವಿನಾಶ್ ಶೆಟ್ಟಿಯವರು ಮಾಹಿತಿ ನೀಡಿದರು. ಅವರು ತಮ್ಮ ನಿರ್ಮಾಣದ ಪಿಂಗಾರ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಪಿಂಗಾರ’ ಎಂದರೆ ತುಳುವಿನಲ್ಲಿ ಹಿಂಗಾರಕ್ಕೆ ಇರುವ ಹೆಸರು. ಭೂತಾರಾಧನೆ ವೇಳೆ ಹಿಂಗಾರಕ್ಕೆ ಮಹತ್ವವಿದೆ. ಪ್ರಸಾದ ರೂಪದಲ್ಲಿ ನೀಡುವ ಹಿಂಗಾರವನ್ನು ತಮಗೆ ಸಿಕ್ಕಿದ ಆಶೀರ್ವಾದವಾಗಿ ಭಕ್ತರು ಕಾಣುತ್ತಾರೆ ಎಂದು ಈ ಸಂದರ್ಭದಲ್ಲಿ ಅವಿನಾಶ್ ಶೆಟ್ಟಿ ಹೇಳಿದರು. ನಿರ್ದೇಶಕ ಪ್ರೀತಂ ಶೆಟ್ಟಿಯವರು ಸ್ವತಃ ಕತೆ ಬರೆದು ನಿರ್ದೇಶಿಸಿರುವ ಚಿತ್ರ ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಚಿತ್ರ ತಂಡಕ್ಕೆ ಖುಷಿ ತಂದಿದೆ. ಕನ್ನಡ ವಿಭಾಗ ಮತ್ತು ಭಾರತೀಯ ವಿಭಾಗ ಹೀಗೆ ಎರಡೆರಡು ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷ.
ಚಿತ್ರದ ಸಹನಿರ್ಮಾಪಕ ಮಂಜುನಾಥ್ ರೆಡ್ಡಿ ಮಾತನಾಡಿ, ಇಂಥದೊಂದು ಚಿತ್ರದ ನಿರ್ಮಾಣ ನನ್ನ ಕನಸಾಗಿತ್ತು. ಅವಿನಾಶ್ ಅವರು ಕೈಜೋಡಿಸುವ ಮೂಲಕ ಅದನ್ನು ನಿಜವಾಗಿಸಿದ್ದಾರೆ ಎಂದರು.
ಚಿತ್ರದಲ್ಲಿ ಗುತ್ತಿನ ಮನೆ ಒಡತಿಯಾಗಿ ನಟಿಸಿರುವ ಉಷಾ ಭಂಡಾರಿ, ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯ ಅನಾವರಣವಾಗಿದೆ ಎಂದರು. ಚಿತ್ರವು ತುಳು ಮತ್ತು ಕನ್ನಡ ಎರಡು ಭಾಷೆಗಳನ್ನು ಸಹಜವಾಗಿ ಬಳಸಿಕೊಂಡಿರುವ ಕರ್ನಾಟಕದ ಚಿತ್ರವಾಗಿ ಹೊರಬಂದಿದೆ.

ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ನಾಯಕಿ ನೀಮಾ ರೇ, ನಟಿ, ಚಿತ್ರದ ಸಹಾಯಕ ನಿರ್ದೇಶಕಿ ಸಿಂಚನಾ ಚಂದ್ರಮೋಹನ್ ಉಪಸ್ಥಿತರಿದ್ದರು. ಚಿತ್ರದಲ್ಲಿ ಗುರುಹೆಗ್ಡೆ, ಸುನಿಲ್ ನೆಲ್ಲಿಗುಡ್ಡೆ, ಹಾಗೂ ಪ್ರಶಾಂತ್ ಸಿ.ಕೆ ಮೊದಲಾದವರು ಅಭಿನಯಿಸಿದ್ದಾರೆ.

