ಬಿಎಸ್ ವೈ ಮುಂದೆ ಯಶ್ ವಿಶ್!

ನಾಳೆ ಗುರುವಾರದಂದು ಯಡಿಯೂರಪ್ಪನವರ ಬರ್ತ್ ಡೇ. ಹಾಗಂತ ನಮ್ಮ ನಾಯಕ ಯಶ್ ಅವರು ಬುಧವಾರವೇ ವಿಶ್ ಮಾಡಿದ ವಿಷಯ ಇದಲ್ಲ. ಅವರು ಚಿತ್ರರಂಗದ ಪರವಾಗಿ ಒಂದು ವಿಶ್ ಹೇಳಿಕೊಂಡರು.

ನಮ್ಮ ರಾಜ್ಯಕ್ಕೊಂದು ಒಳ್ಳೆಯ ಸ್ಟುಡಿಯೋ ಮಾಡ್ಕೊಡಿ‌ ಸರ್ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಕೇಳಿಕೊಂಡಿದ್ದು ರಾಜ್ಯದ ಮುಖ್ಯಮಂತ್ರಿ ‌ಬಿಎಸ್ ಯಡಿಯೂರಪ್ಪರನ್ನು. ಅದು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ
ಉದ್ಘಾಟನಾ ಸಮಾರಂಭದಲ್ಲಿ.

“ನಮ್ಮ ಕನ್ನಡಿಗರಿಗೆ ಹುರುಪಿದೆ. ಶಕ್ತಿಯಿದೆ. ಒಂದು ಸ್ಟುಡಿಯೋ ಕಟ್ಟಿಸಿ ಕೊಡಿ ಸರ್. ಅಲ್ಲಾಗುತ್ತೆ, ಇಲ್ಲಾಗುತ್ತೆ ಅಂತ ಮುಂದೆ ಹಾಕ್ತಾನೇ ಇದ್ದಾರೆ. ನೀವಾದ್ರೂ ಮಾಡ್ಸಿ ಸರ್. ಈಗಲೂ ನಾವು ಬೇರೆಲ್ಲೋ ಹೋಗಿ ಕೆಲಸ ಮಾಡಬೇಕಿದೆ. ನೀವು ಸ್ಟುಡಿಯೋ ಮೂಲಕ ನಮಗೆ ಶಕ್ತಿ ನೀಡಿದ್ದೇ ಆದರೆ ಟ್ಯಾಕ್ಸ್ ರೂಪದಲ್ಲಿ ನಾವು ವಾಪಾಸು ಕೊಡುವುದನ್ನು ಕಂಡು ನೀವೇ ಖುಷಿ ಆಗ್ತೀರಿ. ಚಿತ್ರೋದ್ಯಮವೂ ಬೆಳೆಯುತ್ತೆ” ಎಂದರು.

ಅದಕ್ಕೂ ಮೊದಲು ಮುಖ್ಯಮಂತ್ರಿಗಳು ಎಪ್ಪತ್ತನೇ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣಕಾಲ ಎಂದು ಬಣ್ಣಿಸಿರುವುದನ್ನು ಸ್ಮರಿಸಿದ ಯಶ್, “ಅಂದು ಎಪ್ಪತ್ತರ ದಶಕದಲ್ಲಿ ಮದರಾಸಿನಲ್ಲಿ ಶೂಟಿಂಗ್ ನಡೆಯುತ್ತಿದ್ದರೂ ಹೊಸ ಸಂಪರ್ಕಗಳಿಗೆ ಹೆಚ್ಚು ಅವಕಾಶಗಳಿದ್ದವು. ಜತೆಗೆ ಸೇರಿನೋ, ನೋಡಿಕೊಂಡೋ ಕೆಲಸ ಕಲಿಯಬಹುದಾಗಿತ್ತು. ಆದರೆ ಇಂದು ಪ್ರತಿಯೊಬ್ಬರೂ ಏಕಲವ್ಯರಂತೆ ಕಲಿಯುವ ಪರಿಸ್ಥಿತಿ ಇದೆ. ನಾವೇ ಯಾವುದೋ ಸಿನಿಮಾ ನೋಡಿಕೊಂಡು‌ ಕಲಿತು ಚಿತ್ರ ಮಾಡುವಂಥ ಪರಿಸ್ಥಿತಿ ಇದೆ. ಒಳ್ಳೆಯ ಇನ್ಸ್ಟಿಟ್ಯೂಶನ್ ಗಳ ಮೂಲಕ ಎಜುಕೇಶನ್ ಗೆ ಅವಕಾಶ ಸಿಕ್ಕರೆ ಖಂಡಿತವಾಗಿ ಒಳ್ಳೆಯ ಪ್ರತಿಭೆಗಳು ಚಿತ್ರರಂಗದಲ್ಲಿ ಕಾಣಿಸುತ್ತಾರೆ. ಮುಂದೆ ದುಡ್ಡು ಮಾಡಲಿ ಎಂದು ಪೋಷಕರು ಮಕ್ಕಳನ್ನೆಲ್ಲ ಇಂಜಿನಿಯರಿಂಗ್ ಓದಿಸ್ತಾರೆ. ಆದರೂ ಮಕ್ಕಳು ಇಂಜಿನಿಯರಿಂಗ್ ನಲ್ಲಿ‌ ಒಳ್ಳೆ ಮಾರ್ಕ್ ಪಡೆಯುತ್ತಾರೆ, ಮತ್ತೆ ಚಿತ್ರರಂಗಕ್ಕೆ ಬಂದು ಬರಹಗಾರರಾಗಿ, ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ ಗುರುತಿಸಲ್ಪಡುತ್ತಾರೆ. ನಿಮ್ಮ ಕಾಲದಲ್ಲಿ ಒಂದೊಳ್ಳೆಯ ಸ್ಟುಡಿಯೋ ನಿರ್ಮಾಣವಾದರೆ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಸುವರ್ಣಯುಗ ಆಗುತ್ತೆ” ಎಂದು ಯಶ್ ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ‌ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೆಂದು ವಿಶೇಷ ಆಹ್ವಾನಿತರಾಗಿದ್ದ ಯಶ್, ಬಹುಶಃ ಇಂಥದೊಂದು ಮನವಿ ಸಲ್ಲಿಸುವ ಬಗ್ಗೆ ಮೊದಲೇ ಯೋಜನೆ ಹಾಕಿದಂತೇನೂ ಇರಲಿಲ್ಲ. ಆದರೆ ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ “ವರ್ಷಕ್ಕೆ 450 ಸಿನಿಮಾಗಳೇನೋ ಬರುತ್ತಿವೆ. ಆದರೆ ಗುಣಮಟ್ಟ ಕೂಡ ಉತ್ತಮಗೊಳ್ಳಬೇಕು ಎಂದು ನನ್ನ ಅನಿಸಿಕೆ” ಎಂದು ಹೇಳಿರುವುದಕ್ಕೇನೇ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನುವಂತಿತ್ತು.

ಒಟ್ಟಿನಲ್ಲಿ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಬಾಲಿವುಡ್ ನಿರ್ಮಾಪಕ ಬೋನಿಕಪೂರ್, ನಟಿ‌, ರಾಜಕಾರಣಿ ಜಯಪ್ರಧಾ ಮೊದಲಾದವರು ಆಸೀನರಾಗಿದ್ದ ವೇದಿಕೆಯಲ್ಲಿ ಯಶ್ ಮಾಡಿದ ಮನವಿ ಅರ್ಥಪೂರ್ಣವಾಗಿತ್ತು. ಹಲವು ದಶಕಗಳ ಈ ಕೋರಿಕೆಯನ್ನು ಬಿ ಎಸ್ ವೈಯವರು ಚಾಲೆಂಜ್ ಆಗಿ ಸ್ವೀಕರಿಸಿ ಮಾಡಿಕೊಟ್ಟರೆ ಯಶ್ ಅವರ ಕನಸುಗಳು ಯೋಜನೆಗಳಾಗುವುದರಲ್ಲಿ ಸಂದೇಹವಿಲ್ಲ.

Recommended For You

Leave a Reply

error: Content is protected !!