
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಧ್ಯಾಹ್ನದ ಹೊತ್ತಿಗೆ ಚಿತ್ರರಂಗದ ಗಣ್ಯರು ಧಾರಾಕಾರವಾಗಿ ಆಗಮಿಸತೊಡಗಿದರು!
ಅನಿರುದ್ಧನಂಥ ಸ್ಟಾರ್ ಫ್ಯಾಮಿಲಿಯ ಸಿನಿಮಾ ನಟನನ್ನೇ ರಿಲಾಂಚ್ ಮಾಡಿರುವ ಮಟ್ಟಕ್ಕೆ ಜನಪ್ರಿಯವಾದ ಧಾರಾವಾಹಿಯೇ ‘ಜೊತೆಜೊತೆಯಲಿ’. ಇನ್ನು ಒಬ್ಬ ಹಿರಿಯ ನಟನಿಗೆ ಸ್ಟಾರ್ ಪಟ್ಟ ತಂದರೆ ವಿಶೇಷ ಏನಿದೆ ಹೇಳಿ?
ಕಳೆದ ಮೂರು ದಶಕಗಳಿಂದ ಕಿರುತೆರೆ ಮತ್ತು ಬಣ್ಣದ ಲೋಕದಲ್ಲಿ ಜನಪ್ರಿಯತೆ ಪಡೆದವರು ಬಿ.ಎಮ್ ವೆಂಕಟೇಶ್. ಅವರ ನಟನೆಯ ‘ಮಾಂಗಲ್ಯ’ ಧಾರಾವಾಹಿಯಂತೂ ಒಂಬತ್ತು ವರ್ಷಗಳ ಕಾಲ ಪ್ರಸಾರವಾಗಿತ್ತು! ಆದರೆ ಇಂದು ಆ ಎಲ್ಲ ಇತಿಹಾಸವನ್ನು ಮರೆತು ‘ಜೆಂಡೆ’ ರೂಪದಲ್ಲಿ ಯುವಜನ ವೆಂಕಟೇಶ್ ಅವರನ್ನು ಸ್ವೀಕರಿಸಿದ್ದಾರೆ. ಅದಕ್ಕೆ ಸಾಕ್ಷಿಯೆಂಬ ಹಾಗೆ ಯಾವ ತಾರೆಯರಿಗೂ ದೊರಕದ ಅದ್ಭುತ ಸ್ವಾಗತ ಜೆಂಡೆಯವರಿಗೆ ದೊರಕಿತು. ಅಕ್ಷರಶಃ ಅವರಿದ್ದಷ್ಟು ಹೊತ್ತು ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳನ್ನು ಕಾಣಬಹುದಿತ್ತು.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಪತ್ರಕರ್ತ,ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ನಟ, ನಿರ್ದೇಶಕ, ಸಂಕಲನಕಾರ ನಾಗೇಂದ್ರ ಅರಸ್ ಅವರು ಜತೆಜತೆಯಾಗಿಯೇ ಸಿನಿಮಾಗಳನ್ನು ಆಯ್ದುಕೊಂಡು ಥಿಯೇಟರ್ ನಿಂದ ಥಿಯೇಟರ್ ಗೆ ನುಗ್ಗುತ್ತಿರುವುದು ಕಾಣುತ್ತಿತ್ತು.
‘ನವರಂಗ್’ ಚಿತ್ರಮಂದಿರಲ್ಲಿ ಪ್ರದರ್ಶನ ಏರ್ಪಡಿಸಲಾಗಿದ್ದ ‘ಸವರ್ಣದೀರ್ಘ ಸಂಧಿ’ ಚಿತ್ರದ ಪ್ರದರ್ಶನ ಮುಗಿಸಿಕೊಂಡು, ಚಿತ್ರದ ನಿರ್ದೇಶಕ ಮತ್ತು ನಾಯಕರಾದ ವೀರೇಂದ್ರ ಶೆಟ್ಟಿ ಮತ್ತು ನಾಯಕಿ ಕೃಷ್ಣಾ ಆಗಮಿಸಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಘೋಷಣೆಯಾದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಪುತ್ರಿ ಅನನ್ಯ ಜತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಖ್ಯಾತ ಬರಹಗಾರ ವಸುಧೇಂದ್ರ, ನಟಿ ಜಯಶ್ರೀ ಎಸ್ ರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷರಾದ ಜಯರಾಜ್, ಮಾಜಿ ಅಧ್ಯಕ್ಷ ಚಿನ್ನೇಗೌಡರು ಮತ್ತು ಪದಾಧಿಕಾರಿಗಳು ಆಗಮಿಸಿದ್ದರು. ನಿರ್ಮಾಪಕ ಅವಿನಾಶ್ ಶೆಟ್ಟಿಯವರು ಶುಕ್ರವಾರ ಸಂಜೆ ಪ್ರದರ್ಶನಗೊಳ್ಳಲಿರುವ ತಮ್ಮ ನಿರ್ಮಾಣದ ಚಿತ್ರ ‘ಪಿಂಗಾರ’ದ ಆಹ್ವಾನ ಹಂಚುವಲ್ಲಿ ನಿರತರಾಗಿದ್ದು ಕಂಡು ಬಂತು.





