“ಮಹದಾಯಿ ಹೋರಾಟಕ್ಕೆ ನ್ಯಾಯ ದೊರಕಿರುವುದು ಖುಷಿ ಇದೆ. ಆ ಬಗ್ಗೆ ಚಿತ್ರ ಮಾಡಿರುವುದು ಖುಷಿ. ಟ್ರೇಲರ್ , ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ” ಎಂದರು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಅವರು ‘ನರಗುಂದ ಬಂಡಾಯ’ ಚಿತ್ರದ ಆಡಿಯೋ ಸಿಡಿ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
“ಚಿತ್ರದ ನಾಯಕ ರಕ್ಷ್ ಅವರಿಗೆ ಇದು ಮೊದಲ ಚಿತ್ರ ಎಂದು ಅನಿಸುವುದೇ ಇಲ್ಲ. ಶುಭಪೂಂಜಾ ಮತ್ತು ಭವ್ಯಾ ಅವರು ಕೂಡ ಚೆನ್ನಾಗಿ ಕಾಣಿಸುತ್ತಾರೆ. ಚಿತ್ರ ತಂಡಕ್ಕೆ ಒಳಿತಾಗಲಿ” ಎಂದು ಶಿವಣ್ಣ ಶುಭ ಹಾರೈಸಿದರು.
ಇದು ಒಂದು ರೈತರ ಹೋರಾಟದ ಚಿತ್ರವಷ್ಟೇ ಅಲ್ಲ , ಎಲ್ಲ ಕಮರ್ಷಿಯಲ್ ಅಂಶಗಳನ್ನು ಹೊಂದಿರುವಂಥ ಚಿತ್ರ ಎಂದು ನಾಯಕ ರಕ್ಷ್ ಮತ್ತು ನಾಯಕಿ ಶುಭಾಪೂಂಜ ಏಕಕಂಠದಿಂದ ಹೇಳಿದರು. ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಹಿರಿಯ ನಟಿ ಭವ್ಯಾ ಅವರು ಇದೊಂದು ಒಳ್ಳೆಯ ಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“1982ರಲ್ಲಿ ನಡೆದ ಬಂಡಾಯವನ್ನು ನಿರ್ಮಾಪಕರು ಕತೆ ಮಾಡಿದ್ದಾರೆ. ಪ್ರತಿ ಎಕರೆಗೆ ಅತಿಯಾದ ಕಂದಾಯ ಕಟ್ಟಬೇಕೆಂದು ಸರ್ಕಾರದ ನಿರ್ದಯಿ ಆದೇಶ ಹೊರಡಿಸುತ್ತದೆ. ಆಗ ನರಗುಂದ ಹಾಗೂ ನವಲಗುಂದ ತಾಲೂಕಿನ ರೈತರ ಸಂಘಟನೆ ಮಾಡಿ ಉಗ್ರವಾಗಿ ಹೋರಾಡುತ್ತಾರೆ. ಲಾಠಿ ಚಾರ್ಜ್ ನಡೆಯುತ್ತದೆ. ಅದರಲ್ಲಿ ರೈತರ ಬಲಿಯಾಗುತ್ತದೆ. ಇಂಥದೊಂದು ನೈಜ ಘಟನೆಯನ್ನು ನಿರ್ಮಾಪಕರೇ ಚಿತ್ರಕ್ಕೆ ಕತೆ ಮಾಡಿಕೊಟ್ಟಿದ್ದಾರೆ ಎಂದು ನಿರ್ದೇಶಕ ನಾಗೇಂದ್ರ ಮಾಗಡಿಯವರು ಹೇಳಿದರು.
ಓಂಕಾರ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಮಾರ್ಚ್ 12ರಂದು ತೆರೆಗೆ ಬರುತ್ತಿದೆ. ಬಂಡಾಯದ ನಾಡಿನಿಂದ ಬಂದು ರೈತರ ಮಕ್ಕಳಾಗಿರುವ ತಾವೇ ಈ ಚಿತ್ರ ಮಾಡಿದ್ದು ತಡವಾದರೂ, ಚಿತ್ರ ಈಗ ತೆರೆಗೆ ಬರುತ್ತಿರುವುದು ಖುಷಿಯಾಗಿದೆ ಎಂದರು ನಿರ್ಮಾಪಕ ಎಸ್ ಜಿ ಸಿದ್ದೇಶ್.
ಚಿತ್ರದಲ್ಲಿ ಸಾಧು ಕೋಕಿಲ, ಅವಿನಾಶ್, ಭವ್ಯಾ, ಸಂಗೀತಾ, ನೀನಾಸಂ ಅಶ್ವಥ್, ಶಿವಕುಮಾರ್, ರವಿಚೇತನ್, ಸುರೇಶ ರಾಜ್ ಮೊದಲಾದವರು ನಟಿಸಿದ್ದಾರೆ.ಚಿತ್ರಕ್ಕೆ ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದು, ಸಾಹಿತ್ಯಕ್ಕೆ ಅವರ ಜತೆಗೆ ಕೆ.ರಾಮ್ ನಾರಾಯಣ ರಚಿಸಿದ್ದಾರೆ. ಕೌರವ ವೆಂಕಟೇಶ ಮತ್ತು ವಿನೋದ್ ಅವರ ಸಾಹಸ ಹಾಗೂ ಯಶೋವರ್ಧನ್ ಸಂಗೀತ ಚಿತ್ರಕ್ಕಿದೆ. ಧರ್ಮ ವಿಷ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.