ಇಂದು ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಭಾಗದ ವಿಜೇತ ಚಿತ್ರಗಳ ಘೋಷಣೆ ಮಾಡಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಕನ್ನಡದ ಶ್ರೇಷ್ಠ ಚಿತ್ರವಾಗಿ ಹೊರಹೊಮ್ಮಿದ ‘ಕವಲುದಾರಿ’ ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪಡೆದುಕೊಂಡರು. ದ್ವಿತೀಯ ಶ್ರೇಷ್ಠ ಚಿತ್ರ ಪ್ರಶಸ್ತಿಯು ನವ ನಿರ್ದೇಶಕ ಸಚಿನ್ ಶೆಟ್ಟಿಯವರ ನಿರ್ದೇಶನದ ‘ಒಂದು ಶಿಕಾರಿಯ ಕತೆ’ ಚಿತ್ರಕ್ಕೆ ಲಭಿಸಿದೆ. ಮೂರನೇ ಸ್ಥಾನವನ್ನು ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಪಡೆದುಕೊಂಡಿದೆ.
ಇದೇ ವೇಳೆ ಜನಪ್ರಿಯ ಚಿತ್ರಗಳ ವಿಭಾಗದಲ್ಲಿ ಜನಪ್ರಿಯ ಚಿತ್ರವಾಗಿ ನಾಗಣ್ಣ ನಿರ್ದೇಶನದ ‘ಮುನಿರತ್ನ ಕುರುಕ್ಷೇತ್ರ’ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎರಡನೇ ಜನಪ್ರಿಯ ಚಿತ್ರವಾಗಿ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ ಗುರುತಿಸಿಕೊಂಡಿದೆ. ಮೂರನೇ ಸ್ಥಾನವನ್ನು ‘ಯಜಮಾನ’ ಮುಡಿಗೇರಿಸಿಕೊಂಡಿದೆ.
ಈ ಬಾರಿ ಅಂತಾರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್ ಪ್ರೀತಮ್ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ‘ಪಿಂಗಾರ’ಕ್ಕೆ ಲಭ್ಯವಾಗಿರುವುದು ವಿಶೇಷ. ಕನ್ನಡದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ‘ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರ ಗೆದ್ದುಕೊಂಡಿದೆ. ಶ್ರೇಷ್ಠ ಭಾರತೀಯ ಚಿತ್ರ ಪ್ರಶಸ್ತಿಯು ಮರಾಠಿಯ ‘ಪಂಗ್ರನ್’ ಪಾಲಾಗಿದೆ. ಭಾರತೀಯ ಚಿತ್ರ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಮಲಯಾಳಂನ ‘ಬಿರಿಯಾನಿ’ ಚಿತ್ರಕ್ಕೆ ಲಭಿಸಿದೆ.