“ಇಂದಿಗೆ ಈಶ್ವರಿ ಪಿಕ್ಚರ್ಸ್ ಸಂಸ್ಥೆಗೆ 50ವರ್ಷ ಆಯಿತು” ಎಂದರು ರವಿಚಂದ್ರನ್. ಅಲ್ಲಿ ಒಂದು ಸಣ್ಣ ಮೌನ ಮೂಡಿತು.
ಅವರು ಆ ಮಾತು ಹೇಳುವಾಗ ‘ಈಶ್ವರಿ ಪಿಕ್ಚರ್ಸ್’ನ ಒಂದೇ ಒಂದು ಚಿತ್ರ ನೋಡಿದವರಿಗೂ ಕೂಡ ರೋಮಾಂಚನವಾಗುವಂಥ ಅನುಭವ ಆಗಿತ್ತು. ಯಾಕೆಂದರೆ ಕನ್ನಡಕ್ಕೆ ಮೂವರು ಸ್ಟಾರ್ ನಟರನ್ನು ನೀಡಿರುವ ಸಂಸ್ಥೆ ಅದು. ಮಾತ್ರವಲ್ಲ, ಸ್ಟಾರ್ ನಟನನ್ನು ಸೂಪರ್ ಸ್ಟಾರ್ ಮಾಡಿದಂಥ ಕೀರ್ತಿ ಹೊಂದಿದ ಸಂಸ್ಥೆಯೇ ಈಶ್ವರಿ.
ದೇವೀ ಪ್ರಸನ್ನಾರ್ಥಿಧರೇ ಪ್ರಸೀತ
ಪ್ರಸೀತ ಮಾತ ಜಗತೋಭಿಲಸ್ಯಾ
ಪ್ರಸೀತ ವಿಶ್ವೇಶ್ವರಿ ಪಾಹಿ ವಿಶ್ವಂ
ತ್ವಮೀಶ್ವರಿ ದೇವಿ ಚರಾಚರಸ್ಯ
ಅಂಥದೊಂದು ಶ್ಲೋಕ ಪಿ.ಬಿ ಶ್ರೀನಿವಾಸ್ ಕಂಠದಲ್ಲಿ ಮೊಳಗುವುದು ಮತ್ತು ಅದೇ ವೇಳೆ ಈಶ್ವರೀ ದೇವಿಯ ಚಿತ್ರ ಕಾಣುವುದು ಮತ್ತು ಬಳಿಕ ಫೋನ್ ಹಿಡಿದು ಕುಳಿತ ವೀರಾಸ್ವಾಮಿಯವರ ಫೊಟೋ ಅಥವಾ ವಿಡಿಯೋ ತೋರಿಸುವ ಮೂಲಕ ಈಶ್ವರಿ ಸಂಸ್ಥೆ ನಮಗೆ ಪರದೆಯ ಮೇಲಿನ ನೆನಪಾಗಿ ಕಾಡುತ್ತದೆ. ರವಿಚಂದ್ರನ್ ಅವರ ಮಾತುಗಳ ಆಧಾರದಲ್ಲಿ ನೋಡಿದರೆ ಇಂದಿಗೆ (6-3-2020) ಐವತ್ತು ವರ್ಷಗಳ ಹಿಂದೆ ಈಶ್ವರಿ ಸಂಸ್ಥೆ ಸ್ಥಾಪನೆಯಾಗಿದೆ. ದಾಖಲೆಗಳ ಪ್ರಕಾರ ಸಂಸ್ಥೆಯಿಂದ ತೆರೆಗೆ ಬಂದ ಪ್ರಥಮ ಚಿತ್ರ ‘ಕುಲ ಗೌರವ’. ಅದು ತೆರೆಕಂಡಿದ್ದು 1971ರಲ್ಲಿ. ಅಂದರೆ ಬಹುಶಃ ಚಿತ್ರ ತೆರೆಕಾಣುವುದಕ್ಕಿಂತ ಒಂದು ವರ್ಷ ಮೊದಲೇ ಈಶ್ವರಿ ಪಿಕ್ಚರ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಶುರು ಮಾಡಿದ ದಿನ ಇರಬಹುದೆಂದುಕೊಳ್ಳಬಹುದು. ಯಾಕೆಂದರೆ ವೀರಾಸ್ವಾಮಿಯವರು ಈಶ್ವರಿ ಪಿಕ್ಚರ್ಸ್ ಮೂಲಕ 1962ರಲ್ಲೇ ಸಿನಿಮಾ ವಿತರಣೆ ಮಾಡತೊಡಗಿದ್ದರೆಂದು ದಾಖಲೆಗಳು ಹೇಳುತ್ತವೆ.
ಗೌರವ ತಂದುಕೊಟ್ಟ ‘ಕುಲಗೌರವ’
ಈಶ್ವರಿ ಪಿಕ್ಚರ್ಸ್ ಎಂದರೇನೇ ಹಲವಾರು ದಾಖಲೆಗಳನ್ನು ಮಾಡಿ ಕನ್ನಡಕ್ಕೆ ಗೌರವ ತಂದಂಥ ಸಂಸ್ಥೆ. ಮೊದಲ ಚಿತ್ರದಲ್ಲೇ ಅಂದು ಕನ್ನಡದ ಸ್ಟಾರ್ ನಟರಾಗಿದ್ದ ರಾಜ್ ಕುಮಾರ್ ಅವರನ್ನು ನಾಯಕನನ್ನಾಗಿಸಿ ಚಿತ್ರ ಮಾಡಲಾಗಿತ್ತು. ಅಷ್ಟೇ ಅಲ್ಲ, ಅದು ರಾಜ್ ಕುಮಾರ್ ಅವರ ಪಾಲಿಗೂ ವಿಶೇಷ ಚಿತ್ರವಾಗಿತ್ತು. ಯಾಕೆಂದರೆ
‘ಕುಲಗೌರವ’ ಸಿನಿಮಾದ ಮೂಲಕ ಅವರು ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಇಬ್ಬರು ನಾಯಕಿಯರಾಗಿ ಜಯಂತಿ ಮತ್ತು ಭಾರತಿ ಅಭಿನಯಿಸಿದ್ದರು. ಚಿತ್ರ ಯಶಸ್ಸಾಗಿದ್ದಷ್ಟೇ ಅಲ್ಲ, ತಮಿಳು ತೆಲುಗಿಗೂ ರಿಮೇಕ್ ಆಯಿತು. ತೆಲುಗಿನಲ್ಲಿ ಡಾ.ರಾಜ್ ಮಾಡಿದ ಪಾತ್ರದಲ್ಲಿ ಎನ್ .ಟಿ. ಆರ್ ಅಭಿನಯಿಸಿದ್ದರು. ತಮಿಳಲ್ಲಿ ಮುತ್ತುರಾಮನ್ ನಟಿಸಿದ್ದರು. ಎರಡೂ ಭಾಷೆಗಳಲ್ಲಿ ಕೂಡ ಚಿತ್ರದ ಹೆಸರು ‘ಕುಲಗೌರವಂ’ ಎಂದಾಗಿತ್ತು! ಮತ್ತೊಂದು ವಿಶೇಷ ಏನೆಂದರೆ ಈ ಮೂರು ಭಾಷೆಗಳಲ್ಲಿ ಕೂಡ ಜಯಂತಿಯವರೇ ನಾಯಕಿಯಾಗಿದ್ದರು. ಭಾರತಿಯವರ ಪಾತ್ರವನ್ನು ತೆಲುಗಿನಲ್ಲಿ ಕನ್ನಡದ ನಟಿ ಆರತಿ ನಿರ್ವಹಿಸಿದರೆ, ತಮಿಳಿನಲ್ಲಿ ಜಯಸುಧಾ ಅಭಿನಯಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಇದೇ ಚಿತ್ರದಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಹೂವೊಂದನ್ನು ತಂದು ರಾಜ್ ಕುಮಾರ್ ಅವರ ಕೈಗೆ ಕೊಟ್ಟು ಹೋಗುವ ಬಾಲಕಲಾವಿದನಾಗಿ ರವಿಚಂದ್ರನ್ ಗೋಚರಿಸಿದ್ದಾರೆ. ಅದನ್ನು ಲೆಕ್ಕ ಹಾಕಿದರೆ ಅವರ ವೃತ್ತಿ ಬದುಕಿಗೆ ಕೂಡ ಇಂದು ಐದು ದಶಕ ತುಂಬಿದಂತೆ ಎನ್ನಬಹುದು!
ಇಬ್ಬರು ತಾರೆಯರ ನೀಡಿದ ‘ನಾಗರ ಹಾವು’
ಇಬ್ಬರು ಹೊಸಮುಖದ ನಟರನ್ನು ಇರಿಸಿಕೊಂಡು ದೊಡ್ಡಮಟ್ಟದ ವೆಚ್ಚದಲ್ಲಿ ‘ನಾಗರಹಾವು’ ಚಿತ್ರ ಮಾಡಿದರು ವೀರಾಸ್ವಾಮಿ. 1972ರಲ್ಲೇ ಅಂಥದೊಂದು ಪ್ರಯೋಗಕ್ಕೆ ಮುಂದಾಗಲು ಅವರಿಗೆ ಧೈರ್ಯವಾಗಿ ಇದ್ದಿದ್ದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮೇಲಿನ ನಂಬಿಕೆ ಎಂದೇ ಹೇಳಬೇಕು. ಅದಕ್ಕೆ ಸರಿಯಾಗಿ ಕರ್ನಾಟಕದ ಇಬ್ಬರು ರಾಜರ ಹೆಸರಿನಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಷ ಎನ್ನುವ ಕಲಾವಿದರನ್ನು ಪರಿಚಯಿಸಿದರು ಪುಟ್ಟಣ್ಣ. ಮುಂದೆ ಇವರು ಚಿತ್ರರಂಗದಲ್ಲಿ ರಾಜರಂತೆ ಮೆರೆದು ಹೊಸ ಇತಿಹಾಸ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಿಷ್ಣುವರ್ಧನ್ ಅವರ ‘ಭೂತಯ್ಯನ ಮಗ ಅಯ್ಯು’, ರಾಜ್ ಕುಮಾರ್ ಅವರ ‘ನಾನಿನ್ನ ಮರೆಯಲಾರೆ, ಅಂಬರೀಷ್ ಅವರ ‘ಚಕ್ರವ್ಯೂಹ’, ಅನಂತ ನಾಗ್ ನಟನೆಯ ‘ನಾರದ ವಿಜಯ’, ಹೀಗೆ ಪ್ರತಿಯೊಬ್ಬ ನಟನಿಗೂ ಲೈಫ್ ಟೈಮ್ ಚಿತ್ರವಾಗಿ ಹೇಳಬಲ್ಲಂಥ ಸಿನಿಮಾಗಳ ನೀಡಿದ ಕೀರ್ತಿ ಈಶ್ವರಿ ಸಂಸ್ಥೆಯದು.
ರವಿಚಂದ್ರನ್ ಎನ್ನುವ ದೇಶ ಮೆಚ್ಚಿದ ತಂತ್ರಜ್ಞ
ವೀರಾಸ್ವಾಮಿಯವರ ನಿರ್ವಹಣೆ ಇರುವ ತನಕ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಿದ್ದ ಚಿತ್ರಗಳನ್ನು ಸಂಸ್ಥೆ ಹೊರತರುತ್ತಿತ್ತು. ಆದರೆ ರವಿಚಂದ್ರನ್ ಅವರು ನೇತೃತ್ವ ವಹಿಸಿ ತಂದಂಥ ಚಿತ್ರಗಳು ತಾಂತ್ರಿಕ ವೈಭವದ ಮೂಲಕ
ಭಾರತೀಯ ಚಿತ್ರರಂಗದ ಗಮನವನ್ನೇ ಸೆಳೆಯುವಂತಿದ್ದವು. ಉದಾಹರಣೆಗೆ ಪ್ರೇಮಲೋಕ, ರಣಧೀರ, ಶಾಂತಿಕ್ರಾಂತಿ ಎಂದು ಪಟ್ಟಿ ಮಾಡುತ್ತಾ ಹೋಗಬಹುದು. ಇಂದು ಕೆ.ಜಿ.ಎಫ್ ಹೇಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಗುರುತಿಸಲ್ಪಡುತ್ತಿದೆಯೋ, ಆ ಮಾದರಿಯಲ್ಲಿ ಚಿತ್ರವೊಂದನ್ನು ಮೂರು ದಶಕಕ್ಕೂ ಮೊದಲೇ ರವಿಚಂದ್ರನ್ ತೆಗೆದಿದ್ದರು. ಅದುವೇ ಶಾಂತಿಕ್ರಾಂತಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿ ದಾಖಲೆ ಮಾಡಿದ ಕೀರ್ತಿ ಆ ಚಿತ್ರದ್ದಾಗಿತ್ತು. ಇವುಗಳಲ್ಲದೆ ತಮಿಳಲ್ಲಿ ಪಡಿಕ್ಕಾತವನ್, ಹಿಂದಿಯಲ್ಲಿ ಇಂಕ್ವಿಲಾಬ್ ಸಿನಿಮಾಗಳನ್ನು ನಿರ್ಮಿಸಿರುವ ಸಂಸ್ಥೆ ಪ್ರಸ್ತುತ ಐವತ್ತರ ಸಂಭ್ರಮದಲ್ಲಿರುವುದು ಕನ್ನಡ ಸಿನಿಮಾ ಪ್ರೇಮಿಳಿಗೆ ಖಂಡಿತವಾಗಿ ಖುಷಿಯ ವಿಚಾರವೇ ಸರಿ.