ಕನಸುಗಾರ ಎಂದರೆ ರವಿಚಂದ್ರನ್. ಅವರ ಪ್ರಾರಂಭದ ಚಿತ್ರ ಎಂದರೆ ಪ್ರೇಮಲೋಕದ್ದು ಎಂದು ತಪ್ಪು ತಿಳಿಯಬೇಡಿ. ಇದು ಪ್ರಾರಂಭ ಸಿನಿಮಾದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿರುವಂಥ ಸಮಾಚಾರ.
“ನನ್ನ ಮಗ ಸಿನಿಮಾದಲ್ಲಿ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ, ಸಿಗರೇಟ್ ಸೇದ್ತಾನೆ ಅನ್ನೋದು ಗೊತ್ತಾಯ್ತು. ಅವನೂ ಏನಾದರೂ ಮಾಡಬಹುದು ಎನ್ನುವ ನಂಬಿಕೆ ಬಂದಿದೆ” ಎಂದರು ಕ್ರೇಜಿಸ್ಟಾರ್ ರವಿಚಂದ್ರನ್. ಅವರು ಮನುರಂಜನ್ ಅಭಿನಯದ ‘ಪ್ರಾರಂಭ’ ಚಿತ್ರದ ಟೀಸರ್ ಮತ್ತು ಹಾಡುಗಳ ಲಿರಿಕಲ್ ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದ ಮುಂದೆ ಮಾತನಾಡುತ್ತಿದ್ದರು.
“ನನಗೆ ಆಗ ಪತ್ನಿಯ ಭಯ ಇತ್ತು. ಅವಳು ಏನಂತಾಳೆ, ಅವಳನ್ನು ಹೇಗೆ ಕನ್ವಿನ್ಸ್ ಮಾಡೋದು ಎಂದೆಲ್ಲ ತಲೆಯಲ್ಲಿ ಓಡಾಡುತ್ತಿತ್ತು” ಎಂದು ರವಿಚಂದ್ರನ್ ಹೇಳುತ್ತಿರಬೇಕಾದರೆ ಸಭೆಯಲ್ಲಿದ್ದ ಅವರ ಪತ್ನಿ ಸುಮತಿ ನಸುನಗುತ್ತಿದ್ದರು. ಮನುರಂಜನ್ ನಾಯಕರಾಗಿರುವ ಇದೇ ತಿಂಗಳು ತೆರೆಗೆ ತರಲು ಯೋಜನೆ ಹಾಕಿರುವಂಥ ‘ಪ್ರಾರಂಭ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರವಿಚಂದ್ರನ್ ಕುಟುಂಬ ಸಮೇತ ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು. ಆದರೆ ವಿಪರ್ಯಾಸ ಏನೆಂದರೆ ಚಿತ್ರದ ನಾಯಕ ಮನುರಂಜನ್, ನಿರ್ದೇಶಕ ಮನು ಕಲ್ಯಾಡಿಯಿಂದ ಹಿಡಿದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಂಥ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ತನಕ ಪ್ರತಿಯೊಬ್ಬರೂ ತಮಗೆ ರವಿಚಂದ್ರನ್ ಅವರ ಮುಂದೆ ಮಾತನಾಡಲು ಅಂಜಿಕೆಯಾಗುತ್ತಿರುವುದಾಗಿ ಹೇಳಿದರು! ಅದಕ್ಕೆ ಪ್ರತಿಕ್ರಿಯಿಸಿದ ರವಿಚಂದ್ರನ್, “ನಾನು ಮೊದಲೇ ಬರುವುದಿಲ್ಲ, ನೀವೇ ಚೆನ್ನಾಗಿ ಮಾಡಿ ಎಂದು ಹೇಳಿದ್ದೆ. ಈಗ ನೀವೇ ನನ್ನ ಕರೆಸಿಕೊಂಡು ಭಯ ಅಂದರೆ ಹೇಗೆ” ಎಂದು ಪ್ರಶ್ನಿಸಿದರು. ಬಳಿಕ ಅವರ ಸಲಹೆಯಂತೆ ಮತ್ತೊಮ್ಮೆ ಮೈಕ್ ಕೈಗೆ ತೆಗೆದುಕೊಂಡ ನಿರ್ದೇಶಕ ಮನು ಕಲ್ಯಾಡಿ, “ಚಿತ್ರದಲ್ಲಿ ನಾಯಕ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಸದ್ಯದಲ್ಲೇ ಟ್ರೇಲರ್ ಹೊರತರುತ್ತೇವೆ. ಈ ಚಿತ್ರದ ಆರಂಭ ಹಾಗೂ ಅಂತ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧ್ವನಿ ಬಳಸಿಕೊಂಡಿರುವುದು ವಿಶೇಷ” ಎಂದು ಹೇಳಿದರು.
“ಇದರ ಟೀಸರ್ ನೋಡಿದ ಬಹಳ ಮಂದಿ ಇದು ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಇರಬಹುದು ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಸಾಮಾನ್ಯವಾಗಿ ನಮ್ಮಲ್ಲಿನ ಎಲ್ಲಾ ಲವ್ ಸ್ಟೋರಿ ಸಿನಿಮಾಗಳು ಲವ್ ಸಕ್ಸಸ್ ಅಥವಾ ಫೆಯಿಲ್ಯೂರ್ ಜತೆಗೆ ಮುಗಿಯುತ್ತದೆ. ಆದರೆ ಇಲ್ಲಿ ಒಂದು ಭಗ್ನಪ್ರೇಮದ ಬಳಿಕ ಮುಂದೇನಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ” ಎಂದರು. ಚಿತ್ರದ ನಾಯಕಿ ಕೀರ್ತಿ ಕಲ್ಕೆರೆ ತಮಗೂ ಸಹ ಇದು ಪ್ರಥಮ ಸಿನಿಮಾ ಎಂದರು. ಇಷ್ಟು ದಿನ ಮನುರಂಜನ್ ಜತೆಗೆ ನಟಿಸಿದರೂ, ರವಿಚಂದ್ರನ್ ಅವರನ್ನು ಇನ್ನೂ ನೀನು ಭೇಟಿಯಾಗಿಲ್ವ ಎಂದು ಎಲ್ಲರೂ ಕೇಳುತ್ತಿದ್ದರು. ಕೊನೆಗೂ ಈಗ ಅವರನ್ನು ಭೇಟಿಯಾಗುವ ಅವಕಾಶ ದೊರಕಿತು ಎಂದು ಖುಷಿ ವ್ಯಕ್ತಪಡಿಸಿದರು.
ಮನುರಂಜನ್ ಸಹೋದರ ನಟ ವಿಕ್ರಮ್ ಮಾತನಾಡುತ್ತಾ “ಸಾಮಾನ್ಯವಾಗಿ ಎಲ್ಲರದ್ದೂ ಒಂದು ಲವ್ ಫೆಯಿಲ್ಯೂರ್ ಇರುತ್ತದೆ. ಆದರೆ ಅಲ್ಲಿಗೆ ಜೀವನ ಮುಗಿಯುವುದಿಲ್ಲ ಮುಂದೆ ಬದುಕು ಇದೆ ಎಂಬ ಅಂಶ ಈ ಚಿತ್ರದಲ್ಲಿದೆ. ನಾನು ಸಿನಿಮಾ ನೋಡಿದ್ದೇನೆ. ಫೀಲ್ ಗುಡ್ ಸಿನಿಮಾ, ಆಗಿ ಮೂಡಿ ಬಂದಿದ್ದು, ಚಿತ್ರದ ಕಾಲಾವಧಿ 2ಗಂಟೆ 12 ನಿಮಿಷ ಇದೆ” ಎಂದರು.
ಧ್ವನಿ ಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದ ನಾಯಕರೆನಿಸಿದ ಸಂಗೀತ ನಿರ್ದೇಶಕ ಪ್ರಜ್ವಲ್ ಮಾತನಾಡಿ, “ಈ ತಂಡದೊಂದಿಗೆ ಕೆಲಸ ಮಾಡಿದ್ದು ನನಗೆ ದೊಡ್ಡ ಅವಕಾಶ ಎಂದುಕೊಳ್ಳುತ್ತೇನೆ. ಇದಕ್ಕಿಂತ ಮೊದಲು ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಎರಡು ಹಾಡು ಮಾಡಿದ್ದೆ. ಆದರೆ ಈ ಚಿತ್ರದಲ್ಲಿ ನಾಯಕ ಮನುರಂಜನ್ ಅವರಿಂದ ಹಿಡಿದು ಪ್ರತಿಯೊಬ್ಬರು ಕೂಡ ತುಂಬ ಸಪೋರ್ಟ್ ಮಾಡಿರುವುದು ಖುಷಿಯಾಗಿದೆ” ಎಂದರು. ಚಿತ್ರಕ್ಕೆ ಆಕರ್ಷಕ ಸಾಹಿತ್ಯ ನೀಡಿರುವ ಸಂತೋಷ್ ನಾಯ್ಕ್ “ನಾನು ವರ್ಷಗಳಿಂದ ಹಾಡು ಬರೆಯುತ್ತಿದ್ದರೂ, ನನಗೆ ಮೊದಲ ಕಮರ್ಷಿಯಲ್ ಹಿಟ್ ನೀಡಿದಂಥ ಚಿತ್ರ ರವಿಚಂದ್ರನ್ ಅವರಿಗೆ ಬರೆದಂಥದ್ದು. ಹೆಬ್ಬುಲಿ ಸಿನಿಮಾದಲ್ಲಿ ರವಿಸರ್ ಮತ್ತು ಸುದೀಪ್ ಅವರು ಹಾಡಿನಲ್ಲಿ ಕಾಣಿಸಿಕೊಂಡಿರುವ ‘ಎಣ್ಣೆ ಬೇಕು ಅಣ್ಣ’ ಹಾಡು ಎಂದು ಸ್ಮರಿಸಿಕೊಂಡರು. ವೇದಿಕೆಯಲ್ಲಿದ್ದ ಛಾಯಾಗ್ರಾಹಕ ಸುರೇಶ್ ಬಾಬು ಮಾತನಾಡಿ “ನಾನು ‘ಶಾಂತಿಕ್ರಾಂತಿ’ಯಲ್ಲಿ ಲೈಟ್ ಬಾಯ್ ಆಗಿದ್ದೆ. ರವಿ ಸರ್ ಜತೆಗೆ ‘ಜಾಣ’ದ ತನಕ ಕೆಲಸ ಮಾಡಿದ್ದೇನೆ. ನಿರ್ಮಾಪಕ ಜಗದೀಶ್ ಕಲ್ಯಾಡಿ ಇದು ತಮ್ಮ ನಿರ್ಮಾಣದ ಪ್ರಥಮ ಚಿತ್ರ ಎಂದರು.
ಚಿತ್ರದ ಆಡಿಯೋವನ್ನು ತಮ್ಮ ಸಂಸ್ಥೆಯ ಮೂಲಕ ಹೊರಗೆ ತರುತ್ತಿರುವ ಆನಂದ್ ಆಡಿಯೋ ಶ್ಯಾಮ್ “ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಈ ಫಸ್ಟ್ ಸಿನಿಮಾವೇ ಬೆಸ್ಟ್ ಸಿನಿಮಾ ಆಗಿರಲಿ” ಎಂದು ಶುಭ ಕೋರಿದರು.