ಚಿತ್ರದ ನಾಯಕ ರಕ್ಷ್ ಈ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಇದು ಪ್ರಥಮ ಸಿನಿಮಾ ಎಂದರು. ಆದರೆ ಸಾಕಷ್ಟು ಅವಕಾಶಗಳು ಬಂದಿದ್ದರೂ, ಅವೆಲ್ಲ ಸಾಮಾನ್ಯ ಲವ್ ಸ್ಟೋರಿಗಳಾಗಿದ್ದವು. ಆದರೆ ಪ್ರಥಮ ಚಿತರ ವಿಭಿನ್ನವಾಗಿರಲಿ ಎಂದು ಕಾಯುತ್ತಿದ್ದೆ. ‘ನರಗುಂದ ಬಂಡಾಯ’ ಅಂಥದೊಂದು ಅವಕಾಶವನ್ನು ನೀಡಿದೆ ಎಂದರು. ರೈತರ ಚಿತ್ರ ಅಥವಾ ಬಯೋಪಿಕ್ ಎನ್ನುವ ಕಾರಣ ನೀಡಿ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗಲ್ಲ ಎನ್ನಲಾಗದು. ಯಾಕೆಂದರೆ ಇದು ರೈತರ ಹೋರಾಟದ ಕತೆಯಲ್ಲ. ಇತಿಹಾಸದಲ್ಲಿ ನಡೆದಿರುವ ಘಟನೆ. ಐದಾರು ಹೊಡೆದಾಟಗಳು, ಹಾಡುಗಳು ಮೊದಲಾದ ಕಮರ್ಷಿಯಲ್ ಅಂಶ ಇರುವಂಥ ಸಿನಿಮಾ ಎಂದರು.ಇದೇ ಸಂದರ್ಭದಲ್ಲಿ ಮಳವಳ್ಳಿಯಿಂದ ಬಂದಂಥ ರಕ್ಷ್ ಅಭಿಮಾನಿಗಳು ಆಂಜನೇಯನ ವಿಗ್ರಹ ನೀಡಿ ತಮ್ಮ ನಾಯಕನನ್ನು ಸನ್ಮಾನಿಸಿದರು.
ಚಿತ್ರದ ನಾಯಕಿ ಶುಭ ಪೂಂಜಾ ಮಾತನಾಡಿ, “ಈಗಾಗಲೇ ನಾವು ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡಿಕೊಂಡು ಬಂದಿದ್ದೇವೆ. ಏನೇ ಕರೋನ ವೈರಸ್ ಬಗ್ಗೆ ಆತಂಕವಿದ್ದರೂ, ನಮ್ಮ ಸಿನಿಮಾಗೆ ಜನ ಬಂದೇ ಬರುತ್ತಾರೆ ಎನ್ನುವ ನಂಬಿಕೆ ನನಗಿದೆ” ಎಂದರು.
“ಇದು ಉತ್ತರ ಕರ್ನಾಟಕದಲ್ಲಿ ನಡೆದಂಥ ರಾಜ್ಯ, ದೇಶದ ಗಮನ ಸೆಳೆದ ಕ್ರಾಂತಿಯ ಕತೆ. ನಾನು ಕೂಡ ಉತ್ತರ ಕರ್ನಾಟಕದವನೇ. ಐತಿಹಾಸಿಕ ಚಿತ್ರಗಳು ಅಪರೂಪವಾಗಿ ಬರುವಂಥವು. ಇಂಥ ಚಿತ್ರದಲ್ಲಿ ನನಗೆ ಒಂದು ಪಾತ್ರ ದೊರಕಿರುವುದಕ್ಕೆ ಖುಷಿಯಿದೆ. ರೈತರ ಹೋರಾಟದ ಕತೆಯನ್ನು ಹೇಳುವ ಸಿನಿಮಾ ಆದರೂ ಸಿನಿಮಾಗಳಲ್ಲಿ ಬರುವಂಥ ಕಮರ್ಷಿಯಲ್ ಗುಣಮಟ್ಟವನ್ನು ಹೊಂದಿರುವಂಥ ಸಿನಿಮಾ ಇದು” ಎಂದರು ರವಿಚೇತನ್.
ನಿರ್ದೇಶಕ ನಾಗೇಂದ್ರ ಮಾಗಡಿ ಮಾತನಾಡಿ, “ನರಗುಂದ ಬಂಡಾಯ ನಡೆದಾಗ ನಾನು ಮೂರನೇ ಕ್ಲಾಸ್ ವಿದ್ಯಾರ್ಥಿ. ನಾನು ಕಂಡು ಕೇಳಿ ಬೆಳೆದ ಕ್ರಾಂತಿಯ ಹೋರಾಟಕ್ಕೆ ಚಿತ್ರದ ಮೂಲಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರಕ್ಕಾಗಿ ಎಲ್ಲರೂ ಜೀವದ ಹಂಗು ತೊರೆದು ನಟಿಸಿದ್ದೇವೆ.
ನಾಯಕ ರಕ್ಷ್ ಕುದುರೆಯಿಂದ ಬಿದ್ದು ಏಟಾದರೂ ಶೂಟಿಂಗ್ ಮುಂದುವರಿಸಿದ್ದಾರೆ, ಚಿತ್ರದಲ್ಲಿ ಪಾಲ್ಗೊಳ್ಳಲೇ ಬೇಕು ಎನ್ನುವ ಕರೆಗೆ ಮನ್ನಿಸಿ ಕುರುಕ್ಷೇತ್ರದ ಹೈದರಾಬಾದ್ ಸೆಟ್ ನಿಂದ ಖುದ್ದಾಗಿ ರಾತ್ರಿಯಿಡೀ ಡ್ರೈವ್ ಮಾಡಿಕೊಂಡು ಬಂದಂಥ ನಟ ರವಿಚೇತನ್ ಅವರು ತೆಗೆದುಕೊಂಡ ರಿಸ್ಕ್ ಮೆಚ್ಚಲೇಬೇಕು. ನಾಯಕಿ ಶುಭಾಪೂಂಜಾ ಅವರು ಕೂಡ ಕಾಲಿಗೆ ಏಟು ಮಾಡಿಕೊಂಡರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾನು ಕೂಡ ಒಂದು ಪಾತ್ರ ಮಾಡಿ ಮಾಡಿಕೊಂಡಿರುವ ಏಟಿನಿಂದಾಗಿ ಇಂದಿಗೂ ಓಡಲು ಅಸಾಧ್ಯವೆನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಓಂಕಾರ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿಯೇ ತೆರೆಗೆ ತರಲು ಸಿದ್ದವಾಗಿರುವುದಾಗಿ ನಿರ್ಮಾಪಕ ಎಸ್ ಜಿ ಸಿದ್ದೇಶ್ ಹೇಳಿದರು.
ಚಿತ್ರದಲ್ಲಿ ಸಾಧು ಕೋಕಿಲ, ಅವಿನಾಶ್, ಭವ್ಯಾ, ಸಂಗೀತಾ, ನೀನಾಸಂ ಅಶ್ವಥ್, ಶಿವಕುಮಾರ್, ಸುರೇಶ ರಾಜ್ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದು, ಗೀತರಚನೆಯಲ್ಲಿ ಅವರೊಂದಿಗೆ ಕೆ.ರಾಮ್ ನಾರಾಯಣ ಕೈ ಜೋಡಿಸಿದ್ದಾರೆ. ಕೌರವ ವೆಂಕಟೇಶ ಮತ್ತು ವಿನೋದ್ ಅವರ ಸಾಹಸ ಹಾಗೂ ಯಶೋವರ್ಧನ್ ಸಂಗೀತ ಚಿತ್ರಕ್ಕಿದೆ. ಧರ್ಮ ವಿಷ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.