ಸುಪ್ರೀಂ ಹೀರೋ ಎಂದೊಡನೆ ನೆನಪಾಗುವವರೇ ಶಶಿಕುಮಾರ್. ಇಂದು ನಾಯಕರಾಗಿ ಅವರು ನಟಿಸಿರುವ ಚಿತ್ರಗಳೇ ಬರುತ್ತಿಲ್ಲ ಎನ್ನುವ ಎಂದು ಕೊರಗುವ ಅಭಿಮಾನಿಗಳಿಗೆ ಕೊರತೆ ಇಲ್ಲ. ಆದರೆ ಆ ಕೊರತೆ ನೀಗಲು ಎನ್ನುವಂತೆ ಎಂಟ್ರಿಯಾಗುತ್ತಿದ್ದಾರೆ ಯಂಗ್ ಸುಪ್ರೀಮ್ ಹೀರೋ ಅಕ್ಷಿತ್ ಕುಮಾರ್. ಹೌದು, ಇವರು ಸಾಕ್ಷಾತ್ ಶಶಿಕುಮಾರ್ ಅವರ ಪುತ್ರ ಎನ್ನುವುದು ವಿಶೇಷ.
‘ಸೀತಾಯಣ’ದ ಆಮಂತ್ರಣ
ಎಲ್ಲವೂ ಸರಿಯಾಗಿದ್ದರೆ ಅಕ್ಷಿತ್ ಕುಮಾರ್ ಈಗಾಗಲೇ ‘ಮೊಡವೆ’ ಚಿತ್ರದ ಮೂಲಕ ಕನ್ನಡದ ಕಲಾರತ್ನಗಳ ನಡುವೆ ಒಂದು ಒಡವೆಯಾಗಿ ಸೇರಿಕೊಂಡಿರಬೇಕಿತ್ತು. ಆದರೆ ಆ ಚಿತ್ರ ಬರಲಿಲ್ಲ. ಹಾಗಂತ ಶಶಿ ಪುತ್ರ ಈ ಗೊಡವೆಯೇ ಬೇಡ ಎಂದುಕೊಳ್ಳಲಿಲ್ಲ. ಸೀತಾಯಣದ ಮೂಲಕ ಸದ್ದಿಲ್ಲದ ಪಯಣ ಶುರು ಮಾಡಿಯಾಗಿದೆ. ಬೆಂಗಳೂರು ಸೇರಿದಂತೆ ಮಂಗಳೂರು, ಆಗುಂಬೆ, ಬ್ಯಾಂಕಾಕ್, ಹೈದರಾಬಾದ್ ಮತ್ತು ವೈಜಾಗ್ ಮೊದಲಾದೆಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ 63 ದಿನಗಳ ಚಿತ್ರೀಕರಣ ಪೂರ್ತಿಯಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಂದುವರಿದಿದೆ. ನಾಳೆ ಮಾರ್ಚ್ 11ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ದ್ವಿಭಾಷೆಯಲ್ಲಿದೆ ಹೊಸಬರ ಚಿತ್ರ
ನಿರ್ದೇಶಕ ಪ್ರಭಾಕರ್ ಆರಿಪಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಾಯಕಿಯಾಗಿ ಮುಂಬೈ ಬೆಡಗಿ ಅನಹಿತ್ ಭೂಷಣ್ ನಟಿಸುತ್ತಿದ್ದಾರೆ. ನಾಯಕನಾಗಿ ಹೇಗೆ ಸ್ಟಾರ್ ನಟನ ಎರಡನೇ ತಲೆಮಾರು ಪ್ರವೇಶವಾಗುತ್ತಿದೆಯೋ ಅದೇ ಸಂಗೀತ ನಿರ್ದೇಶಕರೊಬ್ಬರ ಎರಡನೇ ತಲೆಮಾರು ಚಿತ್ರದ ಮೂಲಕ ಎಂಟ್ರಿ ನೀಡುತ್ತಿದೆ. ಕನ್ನಡ ಸಿನಿಮಾ ಸಂಗೀತದಲ್ಲಿ ದಾಖಲೆ ಮೂಡಿಸಿದ್ದಂಥ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ಪುತ್ರ ಪದ್ಮನಾಭ ಭಾರದ್ವಾಜ್ ಸೀತಾಯಣ ಚಿತ್ರದ ಸಂಗೀತ ಸಂಯೋಜಕರಾಗಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕವಿರಾಜ್ ಮತ್ತು ಗೌಸ್ ಪೀರ್ ಗೀತೆಗಳನ್ನು ರಚಿಸಿದ್ದು ಒಂದು ಗೀತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿರುವುದು ಮತ್ತೊಂದು ವಿಶೇಷ. ಕಲರ್ ಕ್ಲೌಡ್ ಎಂಟರ್ಟೇನ್ಮೆಂಟ್ ಬ್ಯಾನರ್ ನಲ್ಲಿ ರೋಹನ್ ಭಾರದ್ವಾಜ್ ಅರ್ಪಿಸಿರುವ ಈ ಚಿತ್ರವನ್ನು ಲಲಿತಾ ರಾಜಲಕ್ಷ್ಮೀಯವರು ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲಿಯೂ ನಿರ್ಮಿಸುತ್ತಿದ್ದಾರೆ.