ಶಂಕರ ನಾಗ್ ಅವರ ನಿಜವಾದ ಮತ್ತು ಅಲ್ಲದ ಸಾಕಷ್ಟು ಕತೆಗಳು ಹರಿದಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ವಾಟ್ಸ್ಯಾಪ್ ಬಂದ ಮೇಲೆ ಈ ಹರಿದಾಟ ಹೆಚ್ಚಾಗಿದೆ. ಆದರೆ ಅವರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಅರಿವು, ಸ್ಥಾನ ಇರುವಂಥ ಅನಂತನಾಗ್ ಇಲ್ಲೊಂದು ಸತ್ಯವನ್ನು ಬಿಡಿಸಿಟ್ಟಿದ್ದಾರೆ.
ಬದುಕಿದ್ದು ಮೂವತ್ತೈದೇ ವರ್ಷ. ಆದರೆ ಅವರಿಲ್ಲದ ಮೂವತ್ತು ವರ್ಷಗಳಲ್ಲಿ ಚಾಲ್ತಿಯಲ್ಲಿರುವ ತಾರೆಗಳಷ್ಟೇ ಪ್ರೇಕ್ಷಕರ ಅಭಿಮಾನ ಪಡೆದವರಿದ್ದರೆ ಅದು ಶಂಕರ ನಾಗ್ ಮಾತ್ರ.
ಶಂಕರ ನಾಗ್ ತಾಯಿ ಕುಡ್ಲದವರು!
ಏಳು ಹೆಸರುಗಳನ್ನು ಹೊಂದಿರುವ ಜಗತ್ತಿನ ಏಕೈಕ ಊರು ಎನ್ನುವ ಹೆಗ್ಗಳಿಕೆ ಮಂಗಳೂರಿನದು. ಇಲ್ಲಿನ ಮಂದಿಯೂ ಅಷ್ಟೇ ಏಳು ಸಾಗರದಾಚೆ ಹೆಸರು ಮಾಡಿದವರಿದ್ದಾರೆ. ಅಂಡರ್ ವರ್ಲ್ಡ್ ನಿಂದ ಮಿಸ್ ವರ್ಲ್ಡ್ ತನಕ ಎಲ್ಲ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ, ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿನವರೆಗೆ ಸರಿಯಾದ ಪ್ರತಿನಿಧಿಗಳೇ ಇಲ್ಲ ಎನ್ನುವ ಭಾವನೆ ಎಲ್ಲರಲ್ಲಿತ್ತು. ಆದರೆ ಅದು ಅಪ್ಪಟ ಸುಳ್ಳು. ಮೇಲ್ನೋಟಕ್ಕೆ ಮೈಸೂರು ಮೂಲದ ಡಾ.ರಾಜ್ ಕುಮಾರ್ ಶಿರೋಭಾಗದಲ್ಲಿ, ಅಂಬರೀಷ್, ವಿಷ್ಣುವರ್ಧನ್ ಎರಡು ಭುಜಗಳಾಗಿ ಕಾಣಿಸಿಕೊಂಡಿರಬಹುದು. ಆದರೆ ಹೃದಯ ಭಾಗದಲ್ಲಿದ್ದುಕೊಂಡು ಕಾರ್ಯನಿರ್ವಹಿಸಿದ ರಂಗ ದಿಗ್ಗಜ ಬಿ.ವಿ ಕಾರಂತ್, ಅದ್ಭುತ ನಟಿ ಕಲ್ಪನಾ, ಲೀಲಾವತಿ, ಜಯಮಾಲ, ಸ್ಪುರದ್ರೂಪಿ ಸುನೀಲ್, ಖಳನಟ ಸದಾಶಿವ ಸಾಲ್ಯಾನ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಈ ಪಟ್ಟಿಯೊಳಗೆ ಅನಂತನಾಗ್ ಮತ್ತು ಶಂಕರ್ ನಾಗ್ ಅವರ ಹೆಸರು ಕೂಡ ಸೇರುವುದೆಂದು ಯಾರೂ ಕನಸಲ್ಲಿ ಕೂಡ ಅಂದುಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಸತ್ಯವನ್ನು ಪ್ರಸ್ತುತ ಅನಂತನಾಗ್ ಅವರು ಖುದ್ದಾಗಿ ಹೊರಗೆಡಹಿದ್ದಾರೆ. ಅವರು ನಟಿಸಿರುವ ತುಳು ಚಿತ್ರ ಇದೇ ತಿಂಗಳು ತೆರೆಗೆ ಬರಲಿದ್ದು, ಚಿತ್ರದ ಪ್ರಚಾರಾರ್ಥ ಮಂಗಳೂರಿಗೆ ಹೋಗಿದ್ದ ಅವರು ಸಂದರ್ಶನವೊಂದರಲ್ಲಿ ಈ ಸತ್ಯ ಹೊರಗೆಡಹಿದ್ದಾರೆ.
‘ಕುಡ್ಲ’ದ ಜತೆಗಿನ ಸಂಬಂಧ ಬಿಡಿಸಿಟ್ಟ ಅನಂತನಾಗ್
“ನಾನು ಬಾಲ್ಯದಿಂದಲೂ ಮಂಗಳೂರು, ಉಡುಪಿ, ಶಿರಾಲಿ, ಹೊನ್ನಾವರ, ಕಾಸರಗೋಡು, ಕಾಞಂಗಾಡು ಆನಂದಾಶ್ರಮದ ವಾತಾವರಣದಲ್ಲೇ ಬೆಳೆದವನು. ನಿನ್ನೆ ಹೋಳಿ ಹುಣ್ಣಿಮೆ. ಮಂಗಳೂರಲ್ಲಿ ಇರುವುದಕ್ಕೆ ಖುಷಿ ಇದೆ ಎಂದಿದ್ದಾರೆ ಅನಂತನಾಗ್. ಮೊದಲು ನನ್ನ ತಂದೆ ತಾಯಿಯವರು ಕಾಞಂಗಾಡ್ ನ ಆನಂದಾಶ್ರಮದಲ್ಲಿ ಇದ್ದರು. ಬಳಿಕ ಉತ್ತರ ಕನ್ನಡ, ಭಟ್ಕಳದ ಕಡೆಗೆ ಸಾಗಿದೆವು. ನಾವು ಕರಾವಳಿಯಲ್ಲೇ ಹುಟ್ಟಿ ಬೆಳೆದವರು. ಮುಂಬೈಗೆ ಹೋಗುವ ತನಕ ಇಲ್ಲೇ ಅಡ್ಡಾಡಿಕೊಂಡಿದ್ದವನು. ಆಗ ಆನಂದಾಶ್ರಮದಿಂದ ಮಠಕ್ಕೆ ಹೋಗಬೇಕಾದರೆ ಏಳು ನದಿಗಳನ್ನು ದಾಟಬೇಕಿತ್ತು. ನದಿ ದಂಡೆಗೆ ಬರುವುದು, ದೋಣಿಯಲ್ಲಿ ಸಾಗುವುದು ಮತ್ತು ಅಲ್ಲಿಂದ ಶಂಕರ ವಿಠಲ ಮೋಟಾರು ಸರ್ವಿಸ್ ಬಸ್ ಹತ್ತುವುದು.. ಗಂಗೊಳ್ಳಿ, ಕಲ್ಯಾಣಪುರದ ನದಿಗಳನ್ನು ದಾಟಿ ಹೋಗುತ್ತಿದ್ದೆ. ಎರಡು ವರ್ಷ ಉಡುಪಿಯ ಅಜ್ಜರ ಕಾಡು ಕಾನ್ವೆಂಟ್ ನಲ್ಲಿ ವಿದ್ಯಾರ್ಥಿಯಾಗಿದ್ದೆ. ಹಾಗಾಗಿ ಬಾಲ್ಯದಿಂದಲೂ ನಮಗೆ ಮಂಗಳೂರು ಎಂದರೆ ವಿಶೇಷ ಸಂಭ್ರಮ. ಇಂದು ಮೆಟ್ರೊಪಾಲಿಟನ್ ಸಿಟಿಯಾಗಿ ಬೆಳೆಯುತ್ತಿದ್ದರೂ ಸಹ, ದಕ್ಷಿಣ ಕನ್ನಡ ಜಿಲ್ಲೆಯು ದೇಶದಲ್ಲೇ ನಂಬರ್ ಒನ್ ಎನಿಸುತ್ತದೆ. ಅದರ ಹೆಮ್ಮೆ ನನಗೂ ಇದೆ. ಯಾಕೆಂದರೆ ನಮ್ಮ ಬಂಟ್ವಾಳದವರು. ಮಂಗಳೂರಿನಿಂದ ಉಳ್ಳಾಲದ ಕಡೆಗೆ ಹೋಗುವಾಗ ಸಿಗುವ ನೇತ್ರಾವತಿ ನದಿ ಮತ್ತು ಅದಕ್ಕೆ ಕಟ್ಟಲಾಗಿರುವ ಸಂಕ, ಎತ್ತ ನೋಡಿದರೂ ಕಾಣಿಸುವ ಹಸಿರು.. ಇವೆಲ್ಲ ಕಣ್ತುಂಬಿಕೊಂಡಾಗ ಮನಸಿಗೆ ಉಂಟಾಗುವ ಆಹ್ಲಾದತೆ, ಮಂಗಳೂರು ಹಿಂದೆ, ಇಂದು ಮಾತ್ರವಲ್ಲ ಮುಂದೆಯೂ ನನಗೆ ಬಹಳ ಪ್ರಿಯ.
ಇದೇ ಮೊದಲ ತುಳು ಸಿನಿಮಾ!
ನಾನು ಕನ್ನಡ ಸೇರಿದಂತೆ ಹೊರ ರಾಜ್ಯಗಳ ಚಿತ್ರಗಳಲ್ಲಿ ಕೂಡ ನಟಿಸಿದ್ದೇನೆ. ಆದರೆ ನಮ್ಮ ಕರ್ನಾಟಕದಲ್ಲೇ ಮೂರು ಭಾಷೆಗಳಿಗೆ ಅವುಗಳದ್ದೇ ಆದ ಸ್ಥಾನ ಮಾನವಿದೆ. ಅವುಗಳನ್ನು ತುಳು, ಕೊಂಕಣಿ ಮತ್ತು ಕೊಡವ ಎಂದು ಗುರುತಿಸುತ್ತೇವೆ. ಇವುಗಳಲ್ಲಿ ಕೊಂಕಣಿ ನನ್ನ ಮಾತೃಭಾಷೆ. ಅದರಲ್ಲಿ ಕೂಡ ಸಿನಿಮಾಗಳು ಬರುತ್ತಿವೆ. ಆದರೆ ನನಗೆ ತುಳು ಚಿತ್ರದಲ್ಲಿ ಮಾತ್ರ ನಟಿಸಲೇಬೇಕು ಎನ್ನುವ ಆಕಾಂಕ್ಷೆ ಇತ್ತು. ಯಾಕೆಂದರೆ ಇಂದು ತುಳು ಚಿತ್ರರಂಗ ಇಂದು ಸ್ಥಳೀಯರ ಪ್ರೀತಿ, ಪ್ರಯತ್ನಗಳಿಂದ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಸಾಕಷ್ಟು ಸಿನಿಮಾಗಳು ಬರುತ್ತಿವೆ. ತುಳು ಚಿತ್ರಗಳನ್ನು ತುಳು ಮಾತೃಭಾಷೆಯವರು ಮಾತ್ರವಲ್ಲ, ದಕ್ಷಿಣ ಕನ್ನಡದಲ್ಲಿನ ಕೊಂಕಣಿ ಮಾತನಾಡುವವರು ಸೇರಿದಂತೆ ಎಲ್ಲ ಭಾಷಿಕರೂ ನೋಡಿ ಆನಂದಿಸುತ್ತಾರೆ. ನನಗೆ ಕೂಡ ಈ ಹಿಂದೆಯೇ ತುಳುವಿನಿಂದ ಒಂದೆರಡು ಅವಕಾಶಗಳು ಬಂದಿದ್ದವು. ಆದರೆ ಆ ಚಿತ್ರಕತೆ ಮತ್ತು ಪಾತ್ರಗಳು ನನಗೆ ಹಿಡಿಸಿರಲಿಲ್ಲ. ಆದರೆ ಹರೀಶ್ ಮತ್ತು ಶರ್ಮಿಳಾ ಶೇರಿಗಾರ್ ಅವರ ಪರಿಚಯವಾದ ಬಳಿಕ, ಅವರ ನಿರ್ಮಾಣದ ‘ಮಾರ್ಚ್ 22’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮತ್ತು ‘ಯಾನ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದೆ. ಅವರು ತುಳು ಚಿತ್ರಗಳಲ್ಲಿ ನಟಿಸುತ್ತೀರ ಎಂದು ಕೇಳಿದಾಗ ತುಂಬ ಖುಷಿಯಿಂದ ಒಪ್ಪಿಕೊಂಡು ಒಂದು ವಿಶೇಷವಾದ ಪಾತ್ರವನ್ನು ಮಾಡಿದ್ದೇನೆ ಎಂದು ತಮ್ಮ ನೆನಪು, ಖುಷಿಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಅವರು ನಟಿಸಿರುವ ತುಳು ಚಿತ್ರದ ಹೆಸರು ‘ಇಂಗ್ಲಿಷ್ ಎಂಕ್ ಬರ್ಪುಜಿ ಬ್ರೊ’ ಎಂದು. ಅಂದರೆ ಇಂಗ್ಲಿಷ್ ನನಗೆ ಬರಲ್ಲ ಬ್ರೋ ಎಂದು ಅರ್ಥ!
ತುಳು ಕಲ್ಪುವೆ ಬ್ರೋ..!
ಅನಂತನಾಗ್ ಅವರು ಬಾಲ್ಯದಲ್ಲಿ ಉಡುಪಿಯಲ್ಲಿದ್ದ ಕಾರಣ ತುಳು ಮಾತನಾಡಲು ಕಲಿತಿದ್ದರಂತೆ. ಅದು ಒಂದು ಮತ್ತು ಎರಡನೇ ತರಗತಿಯಲ್ಲಿದ್ದಾಗ ಆದರೆ ಮುಂದೆ ಮುಂಬೈಗೆ ಹೋಗುತ್ತಿದ್ದಂತೆ ಅದರ ಅಭ್ಯಾಸವೇ ತಪ್ಪಿ ಹೋಯಿತು. ಯಾರೂ ತುಳು ಮಾತನಾಡುವವರು ಸಿಕ್ಕಿರಲಿಲ್ಲ. ಆದರೆ ಈಗ ಮತ್ತೆ ಕಲಿಯುತ್ತಿದ್ದೇನೆ. ಯಾಕೆಂದರೆ ನನ್ನ ಮಗಳು ಅದಿತಿ ಮಂಗಳೂರು ಸಮೀಪದ ವಿಟ್ಲದ ವಿವೇಕ್ ಶೆಟ್ಟಿಯನ್ನು ವಿವಾಹವಾಗಿದ್ದಾಳೆ. ಆತ ತುಳುವ. ಈಗ ಬೆಂಗಳೂರಲ್ಲಿದ್ದಾರೆ. ಆದರೂ ತುಳು ಮಾತನಾಡುತ್ತಾರೆ. ಈಗ ನನಗೆ ಸ್ವಲ್ಪ ಸ್ವಲ್ಪ ರಿಫ್ರೆಷರ್ ಕೋರ್ಸ್ ಆಗ್ತಿದೆ. ಹಾಗಾಗಿ ಈ ಚಿತ್ರ ‘ಇಂಗ್ಲಿಷ್ ಬರ್ಪುಜಿ ಬ್ರೋ’ ಆದರೂ ನನ್ನ ಪಾಲಿಗೆ ತುಳು ಬರ್ಪುಜಿ ಬ್ರೊ ಆಗಿತ್ತು. ಆದರೆ ಈ ಸಿನಿಮಾ ಚೆನ್ನಾಗಿ ಹೋದರೆ ಸದ್ಯದಲ್ಲೇ ಮತ್ತೊಂದು ತುಳು ಚಿತ್ರ ನಿರ್ಮಿಸುವುದಾಗಿ ಹರೀಶ್ ಶೇರಿಗಾರ್ ಅವರು ಹೇಳಿದ್ದಾರೆ. ಅದರಲ್ಲಿ ನನಗೂ ಒಂದು ದೊಡ್ಡ ಪಾತ್ರ ಕೊಡುತ್ತಾರೆನ್ನುವ ಭರವಸೆ ಇದೆ. ಆಗ ತಕ್ಕಮಟ್ಟಿಗೆ ತುಳು ಕಲಿಯುವ ನಂಬಿಕೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ ಅನಂತನಾಗ್.
ಇಂದು ಚಂದನವನದಲ್ಲಿ ಕುಡ್ಲ ಇದೆ!
ಪ್ರಸ್ತುತ ದಿನಗಳಲ್ಲಿ ಮಂಗಳೂರಿನ ಮಂದಿ ಕನ್ನಡ ಚಿತ್ರರಂಗದಲ್ಲಿ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
‘ರಂಗಿ ತರಂಗ’ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಬಂದು ಹೊಸಬರು ಕೂಡ ಇಂಥ ಚಿತ್ರವನ್ನು ನೀಡಬಲ್ಲರು ಎಂದು ತೋರಿಸಿಕೊಟ್ಟ ಅನೂಪ್ ಭಂಡಾರಿ- ನಿರೂಪ್ ಭಂಡಾರಿ ಜೋಡಿ, ಸಿಂಪಲ್ಲಾಗಿ ಬಂದು ಇಂದು ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ರಕ್ಷಿತ್ ಶೆಟ್ಟಿ ಹಾಗೂ ನಾಯಕಿಯರಾಗಿ ಮೆರೆದಿರುವ ವಿನಯಾ ಪ್ರಸಾದ್, ರಾಧಿಕಾ ಕುಮಾರಸ್ವಾಮಿ ಮತ್ತು ರಾಧಿಕಾ ಚೇತನ್ , ನೀತು ಶೆಟ್ಟಿ, ಐಶಾನಿ ಶೆಟ್ಟಿ, ಯಜ್ಞಾ ಶೆಟ್ಟಿ ಮೊದಲಾದ ನಟಿಯರು, ಸಂಗೀತ ನಿರ್ದೇಶಕರಾದ ವಿ ಮನೋಹರ್, ಗುರುಕಿರಣ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನಟ ನಿರ್ದೇಶಕರಾದ ಶಿವಧ್ವಜ್, ರಾಜ್ ಬಿ ಶೆಟ್ಟಿ, ಪ್ರೀತಮ್ ಶೆಟ್ಟಿ, ಪ್ರಶಸ್ತಿ ವಿಜೇತ ನಿರ್ಮಾಪಕರಾದ ಅವಿನಾಶ್ ಶೆಟ್ಟಿ.. ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ಇವರೆಲ್ಲರದ್ದು ಒಂದು ತೂಕವಾದರೆ ಶಂಕರನಾಗ್ ಪಕ್ಕಾ ಮಂಗಳೂರಿನವರು, ಅವರ ತಾಯಿ ಮಂಗಳೂರು ಸಮೀಪದ ಬಂಟ್ವಾಳದವರು ಎನ್ನುವ ಸತ್ಯ ಹಾಗೂ ಬಾಲ್ಯದಲ್ಲಿ ತುಳು ಮಾತನಾಡುತ್ತಿದ್ದರು ಎನ್ನುವ ವಿಚಾರಗಳು ತರುವಷ್ಟು ಹೆಮ್ಮೆ ಮಂಗಳೂರಿಗರ ಪಾಲಿಗೆ ಮತ್ತೊಂದು ಇಲ್ಲ ಎಂದೇ ಹೇಳಬಹುದು.
ಚಿತ್ರಗಳು: ಅನಂತನಾಗ್ ಅವರ ‘ನನ್ನ ತಮ್ಮ ಶಂಕರ’ ಪುಸ್ತಕದಿಂದ