
ನಾಗರಹಾವು ಎನ್ನುವ ಒಂದು ಚಿತ್ರ ಕನ್ನಡದಲ್ಲಿ ಮೂಡಿಸಿರುವ ಪ್ರಭಾವ ಎಷ್ಟು ದೊಡ್ಡಮಟ್ಟದ್ದು ಎಂದರೆ ಇಂದಿಗೂ ಅದರ ಬುಸುಗುಡುವಿಕೆ ನಿರಂತರವಾಗಿ ಮುಂದುವರಿದಿದೆ. ಅದಕ್ಕೊಂದು ಹೊಚ್ಚ ಹೊಸ ಉದಾಹರಣೆ ‘ರಾಮಾಚಾರಿ 2.0’ ಎನ್ನುವ ಚಿತ್ರ. ಸಿನಿಮಾದ ಪ್ರಥಮ ನೋಟವನ್ನು ಇಂದು ಅನಾವರಣ ಮಾಡಲಾಯಿತು.
ಇದು ರಾಮಾಚಾರಿ ಅಪ್ಡೇಟೆಡ್ ವರ್ಷನ್!
ಪುಟ್ಟಣ್ಣನವರ ‘ನಾಗರಹಾವು’ ಚಿತ್ರದಲ್ಲಿ ನಾಯಕನ ಹೆಸರು ರಾಮಾಚಾರಿ. ಆ ಪಾತ್ರದ ಮೂಲಕ ವಿಷ್ಣುವರ್ಧನ್ ಅವರನ್ನು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ. ಹಾಗಾಗಿಯೇ ಚಿತ್ರಕ್ಕೆ ವಿಷ್ಣುವರ್ಧನ್ ಆಶೀರ್ವಾದಗಳೊಂದಿಗೆ ಎನ್ನುವ ಮೇಲೊಕ್ಕಣೆಯೂ ಇದೆ. ನಾಗರಹಾವು ಚಿತ್ರದ ನಾಯಕನ ಪಾತ್ರಕ್ಕೂ ಈ ಚಿತ್ರದಲ್ಲಿನ ನಾಯಕನ ಪಾತ್ರಕ್ಕೂ ತುಂಬ ಹೋಲಿಕೆ ಇದೆ. ಅದು ಹೆಸರೊಂದೇ ಅಲ್ಲ. ಇಲ್ಲಿನ ರಾಮಾಚಾರಿ ಕೂಡ ಒಬ್ಬ ಅಗ್ರೆಸಿವ್ ವಿದ್ಯಾರ್ಥಿ. ಗುರುಭಕ್ತಿ ಹೊಂದಿರುವವನು. ಮಾತ್ರವಲ್ಲ ಬುದ್ಧಿವಂತಿಕೆಯಲ್ಲಿಯೂ ಸಾಕಷ್ಟು ಮುಂದುವರಿದವನು. ಆದರೆ ಅಕಾಡೆಮಿಕ್ ಆಗಿ ಬುದ್ಧಿವಂತ ಅಲ್ಲ. ಒಟ್ಟಿನಲ್ಲಿ ಹೊಸ ಕಾಲಘಟ್ಟದ ರಾಮಾಚಾರಿಯಾದ ಕಾರಣ ವರ್ಷನ್ 2.0 ಎಂದು ಸೇರಿಸಲಾಗಿದೆ ಎನ್ನುವುದು ನಿರ್ದೇಶಕ ತೇಜ್ ಸಮರ್ಥನೆ.
ಹಾವಿನ ಹಠ ಹನ್ನೆರಡು ವರ್ಷ..!

“ನನಗೆ ಚಿತ್ರೋದ್ಯಮದಲ್ಲಿ ಒಂದು ರೆಕಗ್ನಿಷನ್ ಸಿಗಲು 12 ವರ್ಷಗಳಾಯಿತು. ತಮಿಳಲ್ಲಿ ಸಿನಿಮಾ ಮಾಡಿಕೊಂಡು ಬಂದೆ. ಇದೀಗ ‘ರಿವೈಂಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆತ್ಮ ವಿಶ್ವಾಸದೊಂದಿಗೆ ಪರಿಶ್ರಮ ಮುಂದುವರಿಸಿದರೆ ಖಂಡಿತವಾಗಿ ಒಂದಲ್ಲ ಒಂದು ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ನಾನು ಉದಾಹರಣೆ ಎಂದು ತೇಜ್ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಪ್ರವೀಣ್ ನಾಯಕ್ ಅವರು ನನ್ನ ಪಾಲಿನ ಪುಟ್ಟಣ್ಣ ಕಣಗಾಲ್. ಯಾಕೆಂದರೆ ಅವರೇ ನನ್ನನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದವರು. ಓಂ ಎನ್ನುವಂಥ ಚಿತ್ರದ ಮೊದಲ ಹೆಜ್ಜೆಗೆ ಪೋಸ್ಟರ್ ಮೂಲಕ ಓಂಕಾರ ಹಾಕಿದ್ದು, ಪ್ರವೀಣ್ ನಾಯಕ್ ಅವರೇ. ಹಾಗಾಗಿ ನನ್ನ ಚಿತ್ರದ ಫಸ್ಟ್ ಲುಕ್ ಫೊಟೋಶೂಟ್ ಮಾಡಲಿಕ್ಕೂ ಅವರಲ್ಲೇ ವಿನಂತಿಸಿದೆ ಎಂದರು.
ಒಂದು ಘಟನೆಗೆ ಸಾಕ್ಷಿಯಾಗುವ ಫೊಟೋಗಳನ್ನು ತೆಗೆಯುವಾಗ ಛಾಯಾಗ್ರಾಹಕ ಫೊಟೊ ಹಿಡಿಯಬೇಕಿರುವುದು ಮುಖವನ್ನಲ್ಲ, ಕಲಾವಿದನ ಪರ್ಸನಾಲಿಟಿ ಕ್ಯಾಪ್ಚರ್ ಮಾಡೋದು ಮುಖ್ಯ ಎಂದು ಮಾತು ಆರಂಭಿಸಿದ ಪ್ರವೀಣ್ ನಾಯಕ್ ಅದೇ ಕ್ರಮವನ್ನೇ ತಾವು ಇಲ್ಲಿಯೂ ಅನುಸರಿಸಿರುವುದಾಗಿ ಹೇಳಿದರು. ಈ ಹಿಂದೆ ‘ಓಂ’ ಚಿತ್ರದ ವೇಳೆ ಶಿವಣ್ಣನ ಫೊಟೋ ತೆಗೆದಿರುವುದನ್ನು ನೆನಪಿಸಿಕೊಂಡ ಪ್ರವೀಣ್ ಕಾಲ ಬದಲಾಗುತ್ತಾ ಫೊಟೋಗ್ರಾಫಿಕ್ ಶೈಲಿಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.

ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಂದೀಪ್ ಮಲಾನಿ, “ನಾನು 1991ರಲ್ಲಿ ತುಳು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದೆ. ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಪ್ರವೀಣ್ ನಾಯಕ್ ಅವರು. ಅವರ ‘ಮೀಸೆ ಚಿಗುರಿದಾಗ’ ಚಿತ್ರದಲ್ಲಿ ತೇಜ್ ಅವರ ಪರಿಚಯವಾಗಿತ್ತು. ಈಗ ತೇಜ್ ಅವರ ಗಡ್ಡವೂ ಚಿಗುರಿದೆ. ಈ ಚಿತ್ರದಲ್ಲಿ ನಾನು ಕೂಡ ಒಂದು ಪಾತ್ರ ಮಾಡುತ್ತಿದ್ದೇನೆ. ಇತರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ’ ಎಂದರು. ಚಿತ್ರವನ್ನು ‘ಮೇಘನಾಕ್ರಿಯೇಶನ್ಸ್’ ಸಹಯೋಗದೊಂದಿಗೆ ‘ಪನೊರಾಮಿಕ್ ಸ್ಟುಡಿಯೋ’ ಮೂಲಕ ನಿರ್ಮಿಸಲಾಗುತ್ತಿದೆ.

