ಚಿತ್ರ: ಶಿವಾರ್ಜುನ
ತಾರಾಗಣ: ಚಿರಂಜೀವಿ ಸರ್ಜ, ಅಮೃತಾ ಅಯ್ಯಂಗಾರ್
ನಿರ್ದೇಶನ: ಶಿವತೇಜಸ್
ನಿರ್ಮಾಣ: ಮಂಜುಳಾ ಶಿವಾರ್ಜುನ
ಎರಡು ಹಳ್ಳಿಗಳ ನಡುವಿನ ಹೊಡೆದಾಟದಲ್ಲಿ ಊರ ಜಾತ್ರೆ ನಿಲ್ಲುವುದು ಮತ್ತು ಆ ಊರುಗಳನ್ನು ಒಂದು ಮಾಡುವ ನಾಯಕ ಜಾತ್ರೆ ನಡೆಸುವುದು ಇದು ಶಿವಾರ್ಜುನ ಸಿನಿಮಾದ ಒನ್ಲೈನ್ ಸ್ಟೋರಿ. ಈ ಸ್ಟೋರಿ ಇಟ್ಟುಕೊಂಡು ಜಾತ್ರೆ ಲೆಕ್ಕದಲ್ಲಿ ತೆಲುಗು ಚಿತ್ರಗಳು ಬಂದು ಹೋಗಿವೆ. ಕನ್ನಡದಲ್ಲಿ ಅವುಗಳ ರಿಮೇಕು, ಸ್ಫೂರ್ತಿ ಎಂದು ಡಜನ್ ಗಟ್ಟಲೆ ಸಿನಿಮಾಗಳು ಬಂದಿವೆ. ಆದರೆ ‘ಶಿವಾರ್ಜುನ’ ಅವೆಲ್ಲಕ್ಕಿಂತ ವಿಭಿನ್ನ ಎಂದು ಹೇಳಿದರೆ ಸುಳ್ಳಾಗಿಬಿಡುತ್ತದೆ. ಹಾಗಾಗಿ ಸದಾಶಿವನಿಗೆ ಅದೇ ಧ್ಯಾನ ಎನ್ನಬಹುದು!
ರಾಮದುರ್ಗ ಮತ್ತು ರಾಯದುರ್ಗ ಅಕ್ಕಪಕ್ಕದ ಎರಡು ಹಳ್ಳಿಗಳು. ರಾಮದುರ್ಗಕ್ಕೆ ಮುಖ್ಯಸ್ಥನಾದ ರಾಮೇಗೌಡ ಶ್ರೀರಾಮನಂಥವನು. ರಾಯದುರ್ಗದ ರಾಯಪ್ಪ ರಾಂಗ್ ರೂಟಲ್ಲಿರುವವನು. ಎರಡು ಹಳ್ಳಿಗಳ ನಡುವೆ ಕುಸ್ತಿ ಪಂದ್ಯ ನಡೆಸಿ ಗೆದ್ದ ಕಡೆಯವರು ಜಾತ್ರೆ ನಡೆಸುವುದು ಅಲ್ಲಿನ ಪ್ರತೀತಿ. ಆದರೆ ಗೆಲುವಿನ ಬಳಿಕ ನಡೆದ ಘಟನೆಯೊಂದರಲ್ಲಿ ರಾಮೇಗೌಡನ ಕಡೆಯವರು ರಾಯಪ್ಪನ ಮಗನ ಕೊಲೆ ಮಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ರಾಯಪ್ಪ ರಾಮೇಗೌಡನ ವಂಶ ನಿರ್ವಂಶ ಮಾಡುವ ಪಣ ತೊಡುತ್ತಾರೆ. ಆದರೆ ರಾಮೇಗೌಡ ತನ್ನ ಮಗನನ್ನು ಊರಿನಿಂದ ದೂರ ಕಳಿಸುತ್ತಾನೆ. ಆತ ವಾಪಾಸಾಗುತ್ತಾನ? ಎರಡು ಹಳ್ಳಿಗಳ ನಡುವಿನ ಹೊಡೆದಾಟ ಹೇಗೆ ಕೊನೆಯಾಗುತ್ತದೆ ಎನ್ನುವುದು ಚಿತ್ರ ನೋಡಿ ಥಿಯೇಟರ್ ನಲ್ಲಿ ತಿಳಿಯಬೇಕಾದಂಥ ಪ್ರಮುಖ ಅಂಶ.
ವಿಶೇಷ ಏನು ಅಂದರೆ ಈಗ ನಿರೂಪಿಸಿದ ಕತೆಯಲ್ಲಿ ನಾಯಕ ಮತ್ತು ನಾಯಕಿಯ ಪಾತ್ರಗಳಿಲ್ಲ. ಅವರಿಬ್ಬರನ್ನು ಬದಿಗಿಟ್ಟರೂ ಒಂದು ಚಿತ್ರದ ಎಳೆಯನ್ನು ಹೇಳಬಹುದು ಎನ್ನುವುದೇ ಈ ಕತೆಯ ಮೈನಸ್ ಎಂದರೆ ತಪ್ಪಲ್ಲ! ಒಂದೆಳೆಯ ಕತೆಯೊಳಗೆ ಸ್ಟಾರ್ ನಾಯಕನಿಗೆ ಬೇಕಾದ ಕಮರ್ಷಿಯಲ್ ಅಂಶಗಳನ್ನು ತುರುಕಿ ಚಿತ್ರ ಮಾಡಲಾಗಿದೆ. ಹಾಗೆ ತುರುಕಲಾದ ಹಾಡುಗಳು ಮತ್ತು ಫೈಟ್ ಚೆನ್ನಾಗಿಯೇ ಇವೆ ಎನ್ನುವುದು ಪ್ರೇಕ್ಷಕರ ಅದೃಷ್ಟ. ಸಿನಿಮಾದ ಮಧ್ಯಂತರದ ತನಕ ಗತ್ಯಂತರವಿಲ್ಲ ಎನ್ನುವಂತೆ ಚಿತ್ರ ನೋಡಬೇಕಾಗಿದೆ. ಯಾಕೆಂದರೆ ಕತೆಯ ಬದಲು ದ್ವಂದ್ವಾರ್ಥದ ಸಂಭಾಷಣೆಗಳೇ ತುಂಬಿಕೊಂಡಿವೆ. ಸಾಧು ಕೋಕಿಲ, ತರಂಗ ವಿಶ್ವ ಮತ್ತು ಚಿರು ಸರ್ಜ ನಡುವೆ ಅಕ್ಷತಾ ಶ್ರೀನಿವಾಸ್ ಪಾತ್ರ ಮೈಮಾಟ ತೋರಿಸಲು ಸೀಮಿತವಾಗಿದೆ. ಬಹುಶಃ ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕಲು ಇದೇ ಕಾರಣವಾಗಿರಲೂಬಹುದು!
ದ್ವಿತೀಯಾರ್ಧದಲ್ಲಿ ಫ್ಲ್ಯಾಶ್ ಬ್ಯಾಕ್ ವಿಚಾರದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ. ಸಣ್ಣದೊಂದು ತಿರುವು ಕತೆಯನ್ನು ಕುತೂಹಲದತ್ತ ಕೊಂಡೊಯ್ಯುತ್ತದೆ. ಆದರೆ ಹಾಗಂತ ಕ್ಲೈಮ್ಯಾಕ್ಸ್ ಹೊಸದೇನನ್ನೂ ಹೇಳುವುದಿಲ್ಲ.
ರಾಮೇಗೌಡನಾಗಿ ಅವಿನಾಶ್, ರಾಯಪ್ಪನಾಗಿ ರವಿಕಿಶನ್ ನಟಿಸಿದ್ದಾರೆ. ನಾಯಕನಾಗಿ ಚಿರಂಜೀವಿ ಸರ್ಜ ಫೈಟ್ ಸೀನ್ ಗಳಲ್ಲಿ ಗಮನ ಸೆಳೆಯುತ್ತಾರೆ. ಅವರ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಬಜಾರಿ ಹುಡುಗಿಯ ಪಾತ್ರದಲ್ಲಿ ಮ್ಯಾಕ್ಸಿಮಮ್ ನಟನೆ ನೀಡಿದ್ದಾರೆ! ತಾರಾ ಸರ್ಕಾರಿ ಅಧಿಕಾರಿಯಾಗಿ ತಮ್ಮ ಪಾತ್ರದ ಘನತೆ ಉಳಿಸಿದ್ದಾರೆ. ಮಗ ಕೃಷ್ಣನನ್ನು ಕೂಡ ಒಳ್ಳೆಯ ನಟನಾಗಿ ಬೆಳೆಸಿದ್ದಾರೆ. ಮೊದಲ ಬಾರಿ ಬೆಳ್ಳಿ ಪರದೆಗೆ ಕಾಲಿಟ್ಟಿರುವ ಹುಡುಗ ಎನ್ನುವ ಲಕ್ಷಣಗಳಿರದೆ ಪಾತ್ರವಾಗುವ ಹುಡುಗನ ಪ್ರಯತ್ನ ಪ್ರಶಂಸಾರ್ಹ. ರವಿಚಂದ್ರನ್ ಗೆಟಪ್ ನಲ್ಲಿ ಬರುವ ಶಿವರಾಜ್ ಕೆ ಆರ್ ಪೇಟೆ ಎಳ್ಳುಂಡೆ ಪಾತ್ರದ ಮೂಲಕ ನಗಿಸುತ್ತಾರೆ. ಕಿಶೋರ್, ದಿನೇಶ್ ಮಂಗಳೂರು ಮೊದಲಾದವರು ಉಳಿದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಚಿತ್ರಕತೆ ಉದ್ದಕ್ಕೆ ಸಾಗುತ್ತದೆ. ನಿರ್ದೇಶಕರಾಗಿ ‘ಮಳೆ’ಯಂಥ ಸಿನಿಮಾ ನೀಡಿದ್ದ ಶಿವ ತೇಜಸ್ ಅವರ ಪಾಲಿಗೆ ಇದೊಂದು ಹಿನ್ನಡೆ ಎಂದೇ ಹೇಳಬಹುದು. ಆದರೆ ದ್ವಂದ್ವಾರ್ಥದ ಸಂಭಾಷಣೆಗಳನ್ನು ಎಂಜಾಯ್ ಮಾಡಬಹುದು ಅಥವಾ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮನೋಭಾವದವರು ಖಂಡಿತವಾಗಿ ನೋಡಬಹುದಾದ ಸಿನಿಮಾ ಇದು.