
ಮಾಧ್ಯಮ ಕ್ಷೇತ್ರದಲ್ಲಿ ಇಂದಿಗೂ ಒಬ್ಬ ರಾಜನಿದ್ದರೆ ಅದು ರವಿ ಬೆಳಗೆರೆ ಮಾತ್ರ. ವಿಡಿಯೋ ಜರ್ನಲಿಸಂ ಬಂದ ಮೇಲೆ ಪರದೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳನ್ನು ಪಡೆದವರು ಎಷ್ಟು ಬೇಕಾದರೂ ಇರಬಹುದು. ಆದರೆ ಬರೇ ಕಪ್ಪು ಬಿಳುಪು ಅಕ್ಷರಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಮಾಧ್ಯಮ ಮಾಂತ್ರಿಕ ಇದ್ದರೆ ಅದು ರವಿ ಬೆಳಗೆರೆ ಮಾತ್ರ. ಅದು ಅವರ ಬರವಣಿಗೆಗೆ ಸಿದ್ಧಿಸಿರುವ ಶಕ್ತಿ. ಇಂದು ಬರವಣಿಗೆ ಮಾತ್ರವಲ್ಲ, ಟಿ.ವಿ, ಸಿನಿಮಾ, ಸ್ವಂತ ಶಾಲೆ, ತನಿಖಾ ವರದಿಗಳ ಮೂಲಕ ಜನಪ್ರಿಯತೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. ಇವತ್ತು ಅವರ ಜನ್ಮದಿನ. ಆದರೆ ಅದನ್ನು ಆಚರಿಸದಿರೋಣ ಎಂದಿದ್ದಾರೆ. ಅದಕ್ಕೆ ಕಾರಣವೇನು ಗೊತ್ತೇ?
ಸಾಮಾನ್ಯವಾಗಿ ಮಾರ್ಚ್ 15 ಬಂತೆಂದರೆ ರವಿ ಬೆಳಗೆರೆಯವರ ಅಭಿಮಾನಿಗಳು ಚುರುಕಾಗುತ್ತಾರೆ. ರಾಜ್ಯದ ವಿವಿಧೆಡೆಗಳಿಂದ ಬಂದು ಪದ್ಮನಾಭ ನಗರದ ಕಚೇರಿಯ ಮುಂದೆ ಸೇರುತ್ತಾರೆ. ರವಿಯವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡದಲ್ಲಿಯೂ ಅಭಿಮಾನಿಗಳಿದ್ದಾರೆ. ಅವರೆಲ್ಲ ಬಂದು ಆಟೋಗ್ರಾಫ್, ಫೊಟೋಗ್ರಾಫ್ ಪಡೆದುಕೊಳ್ಳುವುದು ಇದ್ದಿದ್ದೇ. ಇತ್ತೀಚೆಗಂತೂ ಅವರ ಕೈಯ್ಯನ್ನು ತಮ್ಮ ಹೆಗಲ ಮೇಲೆ ಹಾಕಿಸಿಕೊಂಡು ಒಂದು ಸೆಲ್ಫೀ ಕ್ಲಿಕ್ಕಿಸಿ, ಕೆನ್ನೆಗೊಂದು ಮುತ್ತು ಕೊಟ್ಟರೇನೇ ಸಾರ್ಥಕ ಎಂದುಕೊಳ್ಳುವವರು ಅಧಿಕವಾಗಿದ್ದಾರೆ. ರವಿ ಬೆಳಗೆರೆಯವರಿಗೆ ಇದು 62ನೇ ಜನ್ಮದಿನ. ಜಗತ್ತನ್ನು ತಲ್ಲಣಗೊಳಿಸುವ ಹಾಗೆ ಸುದ್ದಿ ಮಾಡುತ್ತಿರುವ ಕರೊನ ವೈರಸ್ ಕಣ್ಣು 60 ದಾಟಿದವರನ್ನೇ ಹುಡುಕುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಬಂದವರನ್ನು ಮುಟ್ಟದೇ ದೂರದಿಂದ ಕಳಿಸಿಕೊಟ್ಟು ಅವಮಾನಿಸಲು ಬೆಳಗೆರೆಯವರ ಮನಸೂ ಕೇಳುತ್ತಿಲ್ಲ. ಹಾಗಾಗಿ ಈ ಬಾರಿ ದಯವಿಟ್ಟು ಯಾರೂ ಕಚೇರಿಯತ್ತ ಬರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ ರವಿ ಬೆಳಗೆರೆ.
ಸದ್ಯದಲ್ಲೇ ಭೇಟಿಯ ವ್ಯವಸ್ಥೆ

ಬಹುಶಃ ಕಾರ್ಯನಿರತ ಪತ್ರಕರ್ತರಾಗಿದ್ದುಕೊಂಡು ರವಿ ಬೆಳಗೆರೆಯಷ್ಟು ಪುಸ್ತಕ ಬರೆದವರು ಇನ್ನೊಬ್ಬರಿಲ್ಲ ಎನ್ನಬಹುದು. ಇದುವರೆಗೆ 90ರಷ್ಟು ಪುಸ್ತಕಗಳನ್ನು ರಚಿಸಿರುವ ಬೆಳಗೆರೆ ಇನ್ನೂ ಹತ್ತು ಪುಸ್ತಕಗಳನ್ನು ರಚಿಸಿ ಸೆಂಚುರಿ ಮಾಡುವ ಗುರಿ ಹೊಂದಿದ್ದಾರೆ. ಹಾಗಾಗಿ ಅವರ ಪುಸ್ತಕ ಬಿಡುಗಡೆ ಸಮಾರಂಭಗಳೆಂದರೆ ಅಭಿಮಾನಿಗಳಿಗೆ ಆಕರ್ಷಣೆ. ಎಲ್ಲವೂ ಸರಿಯಾಗಿದ್ದರೆ ಇಂದು ಜನ್ಮದಿನದ ಪ್ರಯುಕ್ತ ಅವರು ಹೊಸ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಅವುಗಳ ಬಿಡುಗಡೆಯನ್ನು ಮುಂದೆ ಹಾಕುತ್ತಿರುವುದಾಗಿ ಕಳೆದ ವಾರವಷ್ಟೇ `ಹಾಯ್’ನಲ್ಲಿ ಬರೆದುಕೊಂಡಿದ್ದರು. ಈಗ ಅಭಿಮಾನಿಗಳ ಭೇಟಿಯನ್ನು ಕೂಡ ಅಂದೇ ಏರ್ಪಾಟು ಮಾಡೋಣ ಎಂದು ತೀರ್ಮಾನಿಸಿದ್ದಾರೆ ಬೆಳಗೆರೆ. ಈ ವಿಚಾರವನ್ನು ಅವರು ವಿಡಿಯೋ ಮೂಲಕ ಹೊರಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಪ್ರಪಂಚ ತೋರಿಸಿದ ತಾಯಿಗೆ, ನಿರಂತರವಾಗಿ ಕಾಡಿದ ಹಸಿವಿಗೆ, ಗುರುವಿನಂತಿರುವ ಪುಸ್ತಕಗಳಿಗೆ, ದಕ್ಕಿರುವ ಬರವಣಿಗೆ ಎನ್ನುವ ಸಿದ್ಧಿಗೆ, ಪತ್ರಿಕೋದ್ಯಮ ಎನ್ನುವ ಗುರುವಿಗೆ, ಓದುಗ ಬಾಂಧವರಿಗೆ, ಬರೆಯಲು ಸಲಹೆ ನೀಡಿ ತಿದ್ದಿದವರಿಗೆ, ಭಿನ್ನಾಭಿಪ್ರಾಯಗಳೊಂದಿಗೆ ಓದುವ ಓದುಗರಿಗೆ, ತಮ್ಮನ್ನು ನಂಬುವ ಮೂಲಕ ಕಳ್ಳನಾಗಲು ಬಿಡದವರಿಗೆ, ಇಬ್ಬರು ಬಾಳ ಸಂಗಾತಿಯರಿಗೆ, ಮತ್ತು ನಾಲ್ಕು ಮಕ್ಕಳು ನಾಲ್ವರು ಮೊಮ್ಮಕ್ಕಳಿಗೆ ಹಾಗೂ ಹುಟ್ಟುತ್ತಾ ಅಣ್ತಮ್ಮ ಅಕ್ಕತಂಗಿಯರನ್ನು ಪಡೆದಯದ ತನಗೆ ಇಂದು ಸಹೋದರ, ಸಹೋದರರಾಗಿರುವ ರಾಜ್ಯದ ಅಷ್ಟೂ ಜನತೆಗೆ ಕೃತಜ್ಞತೆಗಳನ್ನು ಸೂಚಿಸಿದ್ದಾರೆ.
