ಡಾ.ರಾಜ್ ಕುಮಾರ್ ಅವರ ಮೇಲೆ ಕನ್ನಡ ಸಿನಿಮಾ ರಸಿಕರು ಇಟ್ಟಂಥ ಪ್ರೀತಿ ಅವರ ಕುಟುಂಬದ ಮೇಲೆಯೂ ಇದೆ. ಆದರೆ ಅಭಿಮಾನಿಗಳ ಅಂಥ ಪ್ರೀತಿಯನ್ನು ಉಳಿಸಿಕೊಂಡು ಹೋಗುವಂಥ ಕಲಾ ಕುಟುಂಬವೇ ಅವರದ್ದು ಎನ್ನುವುದು ಈಗಾಗಲೇ ಸಾಬೀತಾಗಿದೆ. 19 ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವಂಥ ಭಾರತದ ಏಕೈಕ ಸಿನಿಮಾ ಕುಟುಂಬ ಎನ್ನುವ ಹೆಸರಿನ ಜತೆಯಲ್ಲೇ ಕನ್ನಡದ ದೊಡ್ಡ ಸ್ಟಾರ್ ಇಮೇಜ್ ಹೊಂದಿರುವ ಇಬ್ಬರು ನಾಯಕರನ್ನು ಕೂಡ ಈ ಕುಟುಂಬ ಚಿತ್ರರಂಗಕ್ಕೆ ನೀಡಿದೆ. ನಿಮಗೆಲ್ಲ ಗೊತ್ತಿರುವಂತೆ ಆ ಇಬ್ಬರು ಬೇರೆ ಯಾರೂ ಅಲ್ಲ ಕರುನಾಡ ಚಕ್ರವರ್ತಿ ಬಿರುದಾಂಕಿತ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪರದೆಯ ಮೇಲೆ ಈ ಜೋಡಿಗಳ ಸಂಗಮವಾಗಿಲ್ಲವಾದರೂ, ಸಿನಿಮಾ ಕಾರ್ಯಕ್ರಮಗಳಲ್ಲಿ ಪದೇ ಪದೆ ಭೇಟಿಯಾಗುವುದನ್ನು ಕಂಡು ಸಂಭ್ರಮಿಸುವ ಅಭಿಮಾನಿಗಳಿದ್ದಾರೆ. ಈಗ ಅಂಥದೇ ಒಂದು ಘಟನೆ, ಇಂದು ಶಿವರಾಜ್ ಕುಮಾರ್ ಅವರ ಮನೆಯ ಸಮೀಪ ನಡೆದಿದೆ.
ಶಿವರಾಜ್ ಕುಮಾರ್ ಅವರ ಸರಳತೆಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅದೇ ರೀತಿ ಅವರ ಮತ್ತೊಂದು ಗುಣ ಕೂಡ ಗಮನಾರ್ಹ. ಏನಾದರೂ ಅನಿಸಿದಾಗ ತಕ್ಷಣ ಹೇಳಿಬಿಡುವುದು, ಮತ್ತು ನಾನು ಒಂದು ಕೈ ನೋಡಿ ಬಿಡುತ್ತೇನೆ ಎಂದು ಪ್ರಯತ್ನಿಸುವುದು ನಡೆಯುತ್ತಾ ಇರುತ್ತದೆ. ಅಂದಹಾಗೆ ಇಂದು ನಾಗವಾರದ ಶಿವಣ್ಣನ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುನೀತ್ ರಾಜ್ ಕುಮಾರ್ ಕೂಡ ಆಗಮಿಸಿದ್ದರು. ನವ ನಟ ಧಿರೇನ್ ರಾಮ್ ಕುಮಾರ್ ಮತ್ತು ಫ್ಯಾಮಿಲಿ ಫ್ರೆಂಡ್ಸ್ ಕೂಡ ಬಂದಿದ್ದರು. ಹೊರಡುವ ಮುನ್ನ ಶಿವಣ್ಣನಿಗೆ ಅದೇನು ಅನಿಸಿತೋ ಗೊತ್ತಿಲ್ಲ. ನಾನೇ ಒಮ್ಮೆ ಓಡಿಸ್ತೀನಿ ಎಂದರು! ಪುನೀತ್ ಅವರದ್ದು ಲಂಬೋರ್ಗಿನಿ ಉರುಸ್ ಕಾರು. ಕಳೆದ ವರ್ಷ ಅವರು ಕೊಂಡಿರುವಂಥ ಕಾರು. ಪುನೀತ್ ಕೈಗಳಿಂದ ಶಿವಣ್ಣ ಡ್ರೈವಿಂಗ್ ಸೀಟಲ್ಲಿ ಕುಳಿತುಕೊಳ್ಳುತ್ತಿರಬೇಕಾದರೆ, ಪುನೀತ್ ಮತ್ತೊಂದು ಬಾಗಿಲು ತೆರೆದು ಅವರ ಪಕ್ಕದಲ್ಲೇ ಕುಳಿತುಕೊಂಡರು. ಅದೊಂದು ಫ್ಯಾಮಿಲಿ ಗೆಟ್ ಟುಗೆದರ್ ಹಾಗೆ ಇದ್ದ ಕಾರಣ ಅಲ್ಲಿ ರಾಮ್ ಕುಮಾರ್ ಅವರ ಪುತ್ರ ಧಿರೇನ್ ಕೂಡ ಇದ್ದರು. ಅವರು ತಮ್ಮ ಸ್ನೇಹಿತ ಪ್ರಸನ್ನನ ಜತೆಗೆ ಹಿಂದೆ ಕುಳಿತುಕೊಂಡರು. ತಾವು ಇಂಥ ಕಾರನ್ನು ಚಾಲನೆ ಮಾಡುತ್ತಿರುವುದು ಹೊಸದೆನ್ನುವುದನ್ನು ತಮ್ಮನೆದರು ಅಡಗಿಸಿಕೊಳ್ಳದೇ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ ಒಂದು ಸುತ್ತು ಕಾರನ್ನು ಓಡಿಸಿದ್ದಾರೆ. ಅಣ್ಣನ ಜತೆಗಿನ ಈ ಪಯಣವನ್ನು ಪುನೀತ್ ಸೆಲ್ಫೀ ಮೂಲಕ ದಾಖಲಿಸಿಕೊಂಡಿದ್ದಾರೆ. ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದ ಧಿರೇನ್ ತಮ್ಮ ಕ್ಯಾಮೆರಾದಲ್ಲಿ ಒಂದಷ್ಟು ಫೊಟೊಗಳನ್ನು ತೆಗೆದುಕೊಂಡಿದ್ದಾರೆ. ಅವರು ಚಿತ್ರೀಕರಿಸಿದ ಕೆಲವೇ ಸೆಕೆಂಡುಗಳ ವಿಡಿಯೋ ನಮ್ಮ Positive Picture ಯೂ ಟ್ಯೂಬ್ ನಲ್ಲಿ ಲಭ್ಯವಿದೆ.
ಅಂದಹಾಗೆ ಧಿರೇನ್ ರಾಮ್ ಕುಮಾರ್ ಅವರ ನಟನೆಯ `ಶಿವ143’ ಸಿನಿಮಾ ಬಹುತೇಕ ಚಿತ್ರೀಕರಣ ಪೂರ್ತಿಯಾಗಿದ್ದು ಒಂದು ಹಾಡು ಮಾತ್ರ ಬಾಕಿ ಉಳಿದಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಗೊಳಿಸುವುದಾಗಿ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಿವರಾಜ್ ಕುಮಾರ್ ಅವರು ಇಂದು ಶಬರಿಮಲೆಗೆ ಹೊರಡಬೇಕಿತ್ತು. ಆದರೆ ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಆದೇಶದ ಪ್ರಕಾರ ಯಾತ್ರೆ, ಜನಜಂಗುಳಿಯಿಂದ ದೂರವಿರಲು ಶಿವಣ್ಣನ ತಂಡ ನಿರ್ಧರಿಸಿದೆ. ಆದರೆ ಈಗಾಗಲೇ ವ್ರತಾಚಾರಣೆಯಲ್ಲಿದ್ದ ಕಾರಣ ಪೂಜೆ ನಡೆಸಿ ಮಾಲೆ ಧರಿಸಿದಂಥ ಜಾಲಹಳ್ಳಿಯ ಅಯ್ಯಪ್ಪ ಕ್ಷೇತ್ರಕ್ಕೆ ತೆರಳಿ ವ್ರತ ಸಮಾಪ್ತಿ ಮಾಡಿದ್ದಾರೆ.
ಕುಕ್ಕೆಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್..!
ಇನ್ನು ಒಂದು ಕೈ ನೋಡೇ ಬಿಡೋಣ ಎಂದುಕೊಳ್ಳುವ ಶಿವರಾಜ್ ಕುಮಾರ್ ಅವರ ವರ್ತನೆಗೆ ಇನ್ನೊಂದೆರಡು ಉದಾಹರಣೆಗಳನ್ನು ನೆನಪಿಸಿಕೊಳ್ಳಲೇಬೇಕು. ಅಂಥ ಘಟನೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಈ ಹಿಂದೆ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾಗ, ಸಮೀಪದ ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಪುಟ್ಟ ಮಕ್ಕಳಿಂದ ಬ್ಯಾಟು ಪಡೆದುಕೊಂಡು ಒಂದಷ್ಟು ಹೊತ್ತು ಕ್ರಿಕೆಟ್ ಆಡಿದ್ದರು. ಸಾಮಾನ್ಯವಾಗಿ ಸೆಲೆಬ್ರೆಟಿ ಎನಿಸಿಕೊಂಡವರು ಕ್ರಿಕೆಟ್ ಉದ್ಘಾಟನೆಗೆ ಬಂದರೂ ನಾಟಕೀಯವಾಗಿ ಬ್ಯಾಟು ಹಿಡಿದು ಮರಳುವುದನ್ನು ಕಾಣುತ್ತೇವೆ. ಅಲ್ಲದೆ ಕೆಲ ನಟರು ಮಾಧ್ಯಮಗಳ ಕ್ಯಾಮೆರಾ ಇದ್ದಾಗ ಅಭಿಮಾನಿಗಳೆದುರು ಬೆರೆತಂತೆ ಬಿಲ್ಡಪ್ ನೀಡುವುದೂ ಇದೆ! ಆದರೆ ಶಿವಣ್ಣನೊಳಗೆ ಕ್ರಿಕೆಟ್ ಪ್ರೇಮದಷ್ಟೇ ಸರಳತೆ ಕೂಡ ಎಷ್ಟು ಹಾಸು ಹೊಕ್ಕಾಗಿದೆ ಎಂದರೆ ಮಕ್ಕಳ ಜತೆಗೆ ಸಾಕಷ್ಟು ಹೊತ್ತು ಓಡಾಡುತ್ತಾ ಕಾಲ ಕಳೆದಿದ್ದರು. ಕ್ರಮೇಣ ಅಲ್ಲಿ ಹೆಚ್ಚು ಹೆಚ್ಚು ಜನ ಸೇರುತ್ತಿದ್ದಾರೆ ಎನ್ನುವುದನ್ನು ಮನಗಂಡು ಜಾಗ ಖಾಲಿ ಮಾಡಿದ್ದರು. ಕರಾವಳಿಯ ಮಂದಿಗೆ ಈಗಲೂ ರಾಜ್ ಕುಮಾರ್ ಕುಟುಂಬದ ನೈಜವಾದ ಒಳ್ಳೆಯತನಗಳ ಪರಿಚಯವಿಲ್ಲ. ಆದರೆ ಶಿವಣ್ಣನ ಸರಳತೆಯನ್ನು ಕಣ್ಣಾರೆ ಕಂಡವರು ಇಂದಿಗೂ ಆ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿರುತ್ತಾರೆ.
ಮಾಧ್ಯಮದ ಮಂದಿಗೂ ಶಿವಣ್ಣನೆಂದರೆ ಅಭಿಮಾನ..!
ಶಿವರಾಜ್ ಕುಮಾರ್ ಅವರ ಇಂಥ ಗುಣಗಳಿಂದಾಗಿಯೇ ಮಾಧ್ಯಮ ಕ್ಷೇತ್ರದ ಹಲವರಿಗೆ `ಶಿವಣ್ಣನೆಂಬ’ ಪ್ರೀತಿ. ಅದಕ್ಕೊಂದು ಅಪ್ಪಟ ಉದಾಹರಣೆ ಪಬ್ಲಿಕ್ ಟಿ.ವಿ ಸಿನಿಮಾ ವರದಿಗಾರ, ಕಾರ್ಯಕ್ರಮ ನಿರೂಪಕ ಹರೀಶ್ ಸೀನಪ್ಪ. ತಮ್ಮನ್ನು ಶಿವರಾಜ್ ಕುಮಾರ್ ಅವರ ಅಭಿಮಾನಿ ಎಂದು ಕರೆಸಿಕೊಳ್ಳುವುದರಲ್ಲಿ ಹೆಮ್ಮೆ ಕಾಣುವ ಹರೀಶ್ ತಾವು ಬಹಳ ಆಸೆಯಿಂದ ಕೊಂಡುಕೊಂಡ ಯಾವುದೇ ಹೊಸ ವಸ್ತುಗಳನ್ನು ಕೊಂಡೊಯ್ದು ಒಮ್ಮೆ ಶಿವಣ್ಣನಿಗೆ ತೋರಿಸುವುದರಲ್ಲಿ ತೃಪ್ತಿ ಕಾಣುವವರು. ಹಾಗೆ ಅವರು ರಾಯಲ್ ಎನ್ಫೀಲ್ಡ್ ತೆಗೆದುಕೊಂಡಾಗಲೂ ಅದನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಶಿವಣ್ಣನಿಗೆ ತೋರಿಸಿದ್ದಾರೆ. ಅವರು ಹರೀಶ್ ಆಸೆಯಂತೆ ಅದರಲ್ಲಿ ಒಂದು ರೌಂಡ್ ಹೊಡೆದಿದ್ದಾರೆ. ಮಾತ್ರವಲ್ಲ, ಹರೀಶ್ ಅವರನ್ನೂ ಜತೆಗೆ ಕೂರಿಸಿ ಮತ್ತೊಂದು ಸುತ್ತು ಹಾಕಿದ್ದಾರೆ. ಒಟ್ಟಿನಲ್ಲಿ ತಮ್ಮ ಆಸೆಯನ್ನು ನಿಷ್ಕಲ್ಮಶವಾಗಿ ತೋರ್ಪಡಿಸುವುದರ ಜತೆಗೆ ಮತ್ತೊಬ್ಬರ ಆಕಾಂಕ್ಷೆಯನ್ನು ಅರಿತು ಪೊರೆಯುವ ಶಿವರಾಜ್ ಕುಮಾರ್ ತಾರೆಯರ ನಡುವೆ ಎಂದಿಗೂ ಅಚ್ಚರಿಯಾಗಿಯೇ ಗುರುತಿಸಲ್ಪಡುತ್ತಾರೆ.