
ಸಿನಿಮಾರಂಗವೇ ಹಾಗೆ. ಅಲ್ಲಿನ ಸ್ಟಾರ್ ಗಳೆಲ್ಲ ನಿಜ ಜೀವನದ ನಾಯಕರೇನಲ್ಲ. ಅದೇ ವೇಳೆ ಖಳನಾಯಕರು ನಾಯಕರಾಗಿದ್ದೂ ಇದೆ. ಆದರೂ ಅವರದು ಬಣ್ಣದ ಬದುಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನಮ್ಮೊಡನಿದ್ದೂ ಬಣ್ಣದ ಮಾತನಾಡುವವರು ಸಮಾಜದ ಆಪತ್ತು. ಅಂಥ ಆಪತ್ಕಾರಿಗೆ ಚಮತ್ಕಾರದ ಉತ್ತರ ನೀಡುವ ಕೆಲಸವನ್ನು ಇಂದು ನಟ ಡಾಲಿ ಧನಂಜಯ ಮಾಡಿದ್ದಾರೆ!

ನಟ ಧನಂಜಯ್ ಹಾಗೆಲ್ಲ ಯಾರದೋ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವವರೇ ಅಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಕುಳಿತುಕೊಳ್ಳುವ ಜಾಯಮಾನ. ಹಾಗಾಗಿಯೇ ಚಿತ್ರರಂಗಕ್ಕೆ ಬಂದು ದಶಕವಾದರೂ ಕಾಂಟ್ರೊವರ್ಸಿಗಳಿಂದ ಸದಾ ದೂರ. ಆದರೆ ಸಮಾಜದಲ್ಲಿ ಗುರುತಿಸಿಕೊಂಡವರು ಕನಿಷ್ಠ ಮಾನವೀಯ ಮೌಲ್ಯಗಳನ್ನು ಕೂಡ ಮರೆತು ಮಾತನಾಡುವಾಗ ಸುಮ್ಮನಿರಲಾರೆ ಎನ್ನುವುದನ್ನು ತಮ್ಮ ಟ್ವೀಟ್ ಮೂಲಕ ತೋರಿಸಿಕೊಟ್ಟಿದ್ದಾರೆ. ಅದು ಶುರುವಾಗಿದ್ದು ಮೋದಿ ಅಭಿಮಾನಿ ಭಾಷಣಕಾರನೆಂದು ಗುರುತಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆಯ ಟ್ವೀಟ್ ಮೂಲಕ. ತನ್ನ ಮಾತಿನ ಮೂಲಕ ಯುವ ಸಮೂಹವನ್ನು ಕೆರಳಿಸಬಲ್ಲ ಕಲೆಗಾರ ಚಕ್ರವರ್ತಿ ಸೂಲಿಬೆಲೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಥ ವ್ಯಕ್ತಿ ‘ಕೊರೊನಾ ವೈರಸ್’ ನಿಂದ ಜಗತ್ತು ಆತಂಕಕ್ಕೊಳಗಾದ ಇಂಥ ಪರಿಸ್ಥಿತಿಯಲ್ಲಿ ಕ್ರೈಸ್ತ ಧರ್ಮೀಯರ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಿರುವುದು ವ್ಯಾಪಕ ವಿರೋಧಕ್ಕೆ ಒಳಗಾಗಿದೆ.

ಚಕ್ರವರ್ತಿ ಸೂಲಿಬೆಲೆ ಹಾಕಿರುವ ಫೊಟೋದಲ್ಲಿ ಇಟಲಿಯಲ್ಲಿ ಕೊರೊನಾಗೆ ತುತ್ತಾದ ಎಂಬತ್ತಕ್ಕಿಂತ ಅಧಿಕ ವಯೋಮಾನದ ಮಂದಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಎನ್ನುವ ಸುದ್ದಿ ಇದೆ. ವೃದ್ಧ ರೋಗಿಯೊಬ್ಬರು ಚಿಕಿತ್ಸೆ ಪಡೆಯುತ್ತಿರುವ ಚಿತ್ರವೂ ಇದೆ. ಆದರೆ ಆ ನೋವಿನ ಮೇಲೆ ಬರೆ ಎಳೆದು ಖುಷಿ ಪಡುವಂತೆ ಸೂಲಿಬೆಲೆಯು “ಜೀಸಸ್ ಎಲ್ಲರನ್ನೂ ಪ್ರೀತಿಸುತ್ತಾನೆ” ಎನ್ನುವ ತಲೆ ಬರಹವನ್ನು ಕೊಟ್ಟಿರುವುದು ಎಲ್ಲರ ಗಮನ ಸೆಳೆದಿದೆ. ಡಾಲಿ ಧನಂಜಯ್ ಅವರು ಈ ಟ್ವೀಟನ್ನು ಶೇರ್ ಮಾಡಿಕೊಂಡು “ಏನಾದರೂ ಆಗು ಮೊದಲು ಮಾನವನಾಗು” ಎಂದು ಸೂಲಿಬೆಲೆಗೆ ಪ್ರತಿಕ್ರಿಯಿಸಿದ್ದಾರೆ. ಧನಂಜಯ್ ಅವರ ಈ ಪ್ರತಿಕ್ರಿಯೆಗೆ ಸಾಕಷ್ಟು ಲೈಕ್ ಗಳ ಸುರಿಮಳೆಯಾಗುತ್ತಿದೆ. ಡಾಲಿ ನೀಡಿರುವ ಬಟ್ಟೆ ಸುತ್ತಿದ ಕಲ್ಲಿನೇಟನ್ನು ಅರ್ಥ ಮಾಡಿಕೊಂಡವರೆಲ್ಲರೂ ಅದರ ಸ್ಕ್ರೀನ್ ಶಾಟ್ ತೆಗೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಲಿ ಧ್ವನಿಯೆತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸೂಲಿಬೆಲೆಯ ಈ ಟ್ವೀಟ್ ಕೆಳಗೆ ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಕೂಡ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವ ಸ್ವಾಮಿ ವಿವೇಕಾನಂದರ ಹೆಸರು ಹೇಳಿ ಭಾಷಣ ಮಾಡುವ ಯೋಗ್ಯತೆ ನಿನಗಿಲ್ಲ ಎನ್ನುವುದನ್ನು ಬಹಳ ಮಂದಿ ಅಲ್ಲಿ ಸಾರಿ ಹೇಳಿದ್ದಾರೆ. ಕೊನೆಗೆ ಪ್ರತಿಕ್ರಿಯೆಗಳನ್ನು ತಾಳಲಾಗದೆ “ಜೀಸಸ್ ಎಂಬತ್ತು ವರ್ಷ ದಾಟಿದವರನ್ನು ಕೂಡ ಪ್ರೀತಿಸುವಂತಾಗಲಿ” ಎಂದು ಹೇಳುವುದೇ ತಾನು ಕಂಡ ಅರ್ಥವಾಗಿತ್ತು ಎಂದು ತಿಪ್ಪೆ ಸಾರಿಸುವಂತೆ ಮತ್ತೊಂದು ಟ್ವೀಟ್ ಕೂಡ ಚಕ್ರವರ್ತಿ ಸೂಲಿಬೆಲೆ ಕಡೆಯಿಂದ ಹೊರಬಿದ್ದಿದೆ !

ಡಾಲಿ ಧನಂಜಯ್ ಅವರ ಬಗ್ಗೆ ಹೇಳುವುದಾದರೆ ಅವರು ಸಾಮಾಜಿಕ ಕಳಕಳಿ ಹೊಂದಿದವರು. ಕಳೆದ ವರ್ಷ ಕೊಡಗಿನ ಜನತೆಗೆ ಅಪಾಯವಾದಾಗ ಸಹಾಯಹಸ್ತ ಚಾಚಿದ ‘ಪೀಪಲ್ ಫಾರ್ ಪೀಪಲ್’ ತಂಡದ ಜತೆಗೆ ಗುರುತಿಸಿಕೊಂಡವರು. ಆದರೆ ಅವರ ಹೆಸರಿನ ಜತೆಗಿನ ಬಿರುದೇ ಸೂಚಿಸುವಂತೆ ಅವರು ಜನಪ್ರಿಯರಾಗಿದ್ದೇ ಟಗರು ಚಿತ್ರದ ‘ಡಾಲಿ’ ಪಾತ್ರದ ಮೂಲಕ. ಅದಕ್ಕೂ ಮೊದಲು ನಾಯಕನಾಗಿದ್ದರೂ, ಅಲ್ಲಮನ ಪಾತ್ರದಲ್ಲಿದ್ದರೂ ಜನ ಮನ ಗೆದ್ದಿದ್ದು ಕಡಿಮೆಯೇ. ಆದರೆ ಅವರು ಡಾಲಿಯಾಗಿ ಕಾಣಿಸಿಕೊಳ್ಳುವ ಜತೆಗೆ ಖಳ ಛಾಯೆಯಲ್ಲಿ ಬೆಳೆದು ನಿಂತರು. ಇತ್ತೀಚೆಗೆ ತೆರೆಕಂಡ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಾಯಕನಾದರೂ ಅದೊಂದು ರೌಡಿಯ ಪಾತ್ರವಾಗಿತ್ತು. ಆದರೆ ಧರ್ಮದ ಹೆಸರಿನಲ್ಲಿ ರೌಡಿಗಳನ್ನು ಸೃಷ್ಟಿಸುವ ಸಾಮಾಜಿಕ ಕ್ರಿಮಿಗಳಿಗಿಂತ ತಾನು ಎಷ್ಟೊಂದು ಉತ್ತಮ ಎನ್ನುವುದನ್ನು ಧನಂಜಯ್ ಅವರು ಒಂದೇ ಒಂದು ಸಾಲಿನ ಟ್ವೀಟ್ ಮೂಲಕ ಸಾಬೀತು ಮಾಡಿದ್ದಾರೆ.

