ಟಿ.ವಿ ಧಾರಾವಾಹಿಗಳು ಮಹಿಳೆಯರಿಗೆ ಮಾತ್ರ ಎನ್ನುವ ಮಾತು ಅಂದಿಗೂ ಇತ್ತು; ಇಂದಿಗೂ ಇವೆ. ಆದರೆ ಸಾಮಾಜಿಕ ಸಬ್ಜೆಕ್ಟ್ ಹೊಂದಿರುವ ಧಾರಾವಾಹಿಗಳನ್ನು ಗಂಡಸರು ಕೂಡ ಆಸಕ್ತಿಯಿಂದ ನೋಡುವಂತೆ ಮಾಡಿದ ಕೀರ್ತಿ ಜನಪ್ರಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರಿಗೆ ಸಲ್ಲುತ್ತದೆ.
ಕೆಲಸ ಮುಗಿಸಿ ತಡವಾಗಿ ಮನೆಗೆ ಬರುತ್ತಿದ್ದ ಗಂಡಸರೆಲ್ಲ ಬೇಗ ಮನೆ ಸೇರುವಂತೆ ಮಾಡಿದ ಕೀರ್ತಿ ಅವರ ಧಾರಾವಾಹಿಗಳಿಗೆ ಸಲ್ಲುತ್ತದೆ. ಪ್ರಸ್ತುತ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ’ ಕೂಡ ಅಷ್ಟೇ ಜನಪ್ರಿಯತೆಯೊಂದಿಗೆ ಪ್ರಸಾರ ಕಾಣುತ್ತಿದೆ. ಈಗಾಗಲೇ ಒಂದು ವಾರದ ಎಪಿಸೋಡ್ ಚಿತ್ರೀಕರಿಸಿ ಮನೆ ಸೇರಿಕೊಂಡಿರುವ ಸೀತಾರಾಮ್, ಅಭಿಮಾನಿಗಳಲ್ಲಿ ಕೂಡ ಮನೆಯೊಳಗಿದ್ದು ಸೇಫ್ ಆಗುವಂತೆ ನಿನ್ನೆಯೇ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡ ಸಂದೇಶದಲ್ಲಿ ಮನೆಯೊಳಗಿರುವಷ್ಟು ಕಾಲ ವಾತಾವರಣವನ್ನು ಹೇಗೆ ಸದುಪಯೋಗ ಪಡಿಸಬಹುದು ಎನ್ನುವ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಮೊದಲೇ ಮನೆ ಮಂದಿಯ ಪ್ರೀತಿ ಪಡೆದಿರುವ ಸೀತಾರಾಮ್, ವಕೀಲಿ ವೃತ್ತಿ ಬಲ್ಲವರೂ ಆಗಿರುವ ಕಾರಣ ಅವರ ಸಲಹೆಗಳು ಖಂಡಿತವಾಗಿ ನ್ಯಾಯಬದ್ಧವಾಗಿರಬಹುದು ಎನ್ನುವುದು ನಮ್ಮ ಅನಿಸಿಕೆ. ಅದೇ ಕಾರಣಕ್ಕೆ ಟಿ.ಎನ್ ಸೀತಾರಾಮ್ ಅವರು ಹಂಚಿಕೊಂಡ ಸಂದೇಶವನ್ನು ಸಿನಿಕನ್ನಡ. ಕಾಮ್ ಅದೇ ಪ್ರಕಾರವಾಗಿ ನಿಮ್ಮೆದುರು ಇಡುತ್ತಿದೆ.

ಒಂದುದಿನ ಮಾತ್ರವಲ್ಲ… ಪ್ರತಿದಿನ ಸಾಧ್ಯವಾದಷ್ಟು ಮನೆಯಲ್ಲಿ ಇರಿ.
ನಮಗೆ ಹೆಂಡತಿ ಮಕ್ಕಳು ಗೊತ್ತಿರುತ್ತಾರೆ..ಆದರೆ ಆಳದಲ್ಲಿ ಅಪರಿಚಿತ ರಾಗಿರುವ ಸಂಭವ ಇದೆ. ಮನೆಯೊಳಗೆ ಕೆಲಸವಿಲ್ಲದೆ ಕೂತಾಗ ನಮ್ಮ ಅಪರಿಚಿತತೆ ಗೊತ್ತಾಗಿ ಸುಖವಾದ ವಿಷಾದ ನಮ್ಮನ್ನು ಆವರಿಸಬಹುದು.
ಮಾಡುತ್ತಿಲ್ಲದವರು ಮನೆಗೆಲಸ ಮಾಡುವುದನ್ನು ಸ್ವಲ್ಪ ಕಲಿಯಿರಿ. ಆ ಬಗೆಗಿನ ಪಾಪಪ್ರಜ್ಞೆ ಇದ್ದರೆ ಕಡಿಮೆ ಆದೀತು
ಮನೆಕೆಲಸದವರಿಗೆ ಒಂದೆರಡು ದಿನ ರಜೆ ಕೊಡಿ. ಅದರ ಸಂಬಳವನ್ನು ಕೊಡಿ.ಅವರೂ ಕೊರೋನ ಜತೆ ಹೋರಾಡಬೇಕಲ್ಲವೇ
ಒಬ್ಬರೇ ಇದ್ದಾಗ ನಮ್ಮೊಳಗೆ ನಾವು ಆತ್ಮಧ್ಯಾನ ಮಾಡುತ್ತಾ ನಮಗೆ ನಾವು ಸ್ಪಷ್ಟವಾಗುತ್ತಾ ಹೋಗುತ್ತೇವೆ
ಪುಸ್ತಕ ಓದಿ, ಕಾವ್ಯ ಜೋರಾಗಿ ಓದಿ, ಇಷ್ಟದ ಚಿತ್ರ ನೋಡಿ.ಹಗಲು ಊಟದ ಮುಂಚೆ ನಿದ್ದೆ ಮಾಡಿ…ಇವೆಲ್ಲವೂ ಸುಖವನ್ನು ಕೊಟ್ಟು ನಿಮ್ಮ ಆತಂಕ, ಧಾವಂತಗಳನ್ನು ಕಮ್ಮಿ ಮಾಡುತ್ತದೆ
ಹೊರಗೆ ಹೋಗಿ ಈ ಕೊರೋನದ ವಾಹಕರಾಗಬೇಡಿ. ನಮ್ಮ ಆರೋಗ್ಯ ದಷ್ಟೇ ಇತರರ ಆರೋಗ್ಯ ವೂ ಮುಖ್ಯವಲ್ಲವೇ
ಅರ್ಧಗಂಟೆಗೊಮ್ಮೆ ಚೆನ್ನಾಗಿ ಕೈ ತೊಳೆದುಕೊಳ್ಳುತ್ತಿರಿ. ಎಲ್ಲರಿಂದ ಆರು ಅಡಿ ದೂರವಿರಿ.ಕಡಿಮೆ ತಿನ್ನಿ.
ಮನುಷ್ಯನ ನಶ್ವರತೆಯನ್ನು ಎದೆಗೆ ಇಳಿಸಿಕೊಳ್ಳಿ. ನಂತರ ಎಲ್ಲವೂ ನಿರಾತಂಕ
ಹೆಂಡತಿ, ಮಕ್ಕಳು, ಅಪ್ಪ ಅಮ್ಮ ಎಲ್ಲರ ಆತ್ಮದ ಭಾಷೆ ಅರಿಯಿರಿ. ಬದುಕು ಸುಂದರವೆನಿಸಲು ಶುರುವಾಗುತ್ತದೆ.
ದಿನನಿತ್ಯದ ಧಾವಂತದ ಬದುಕಿನಲ್ಲಿ ಇದು ಸಾಧ್ಯವಾಗಲಾರದು
ಕೊರೊನ ಹೊಡೆದೋಡಿಸಲು ಸಾಧ್ಯವಾಷ್ಟು ಮನೆಯಲ್ಲೇ ಇರಿ