
ಕೊರೊನ ವೈರಸ್ ಹರಡುವ ಭಯದಿಂದಾಗಿ ದೇಶಕ್ಕೆ ದೇಶವೇ ಲಾಕ್ಡೌನ್ ಆಗುವ ಪರಿಸ್ಥಿತಿ ಉಂಟಾಗಿದೆ. ದಿನ ನಿತ್ಯದ ದಿನಸಿ ವ್ಯಾಪಾರ ಬಿಟ್ಟು ಯಾವುದೇ ವಹಿವಾಟುಗಳು ನಡೆಯುತ್ತಿಲ್ಲ. ಹಾಗಾಗಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುವವರ ಪರಿಸ್ಥಿತಿ ಕೇಳುವವರಿಲ್ಲ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೂಡ ಪರಿಸ್ಥಿತಿ ವಿಭಿನ್ನವೇನಲ್ಲ. ದೇಶದಲ್ಲೇ ಅತಿಹೆಚ್ಚು ಚಿತ್ರಗಳನ್ನು ತೆರೆಗೆ ತರುತ್ತಿದ್ದ ಕನ್ನಡ ಚಿತ್ರೋದ್ಯಮ ಕನ್ನಡ ಚಿತ್ರರಂಗದಲ್ಲಿ ಕಳೆದ ಎರಡು ವಾರಗಳಿಂದ ಯಾವುದೇ ಸಿನಿಮಾ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಬಗ್ಗೆ ತಾರೆಯರ ಜತೆಗೆ ಮಾತನಾಡಿದಾಗ ಅವರೆಲ್ಲ ಮೊದಲು ಆತಂಕ ವ್ಯಕ್ತಪಡಿಸಿದ್ದು ದಿನಗೂಲಿ ಕಾರ್ಮಿಕರ ಬದುಕಿನ ಬಗ್ಗೆಯೇ. ಇದೀಗ ಅವರ ಕಡೆಗೆ ಸಹಾಯಹಸ್ತ ಚಾಚುವ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮಾದರಿಯಾಗಿದ್ದಾರೆ.
ನಿನ್ನೆ ನಡೆದ `ಜನತಾ ಕರ್ಫ್ಯೂ’ ಬಳಿಕ ಮಾಧ್ಯಮಗಳಿಗೆ ವಿಡಿಯೋ ಮೂಲಕ ಸಂದೇಶವೊಂದನ್ನು ಕಳಿಸಿರುವ ಸಂಚಾರಿ ವಿಜಯ್, ತಾವು ವಾಸವಾಗಿರುವ ಬಡಾವಣೆಯಲ್ಲಿರುವ ಐದಾರು ದಿನಗೂಲಿ ಕುಟುಂಬಗಳಿಗೆ ಸಹಾಯಹಸ್ತ ನೀಡುವುದಾಗಿ ತಿಳಿಸಿದ್ದಾರೆ. ಒಂದು ತಿಂಗಳಿಗೆ ಬೇಕಾಗುವಂಥ ಅಕ್ಕಿ, ಬೇಳೆ, ಎಣ್ಣೆ, ಹಿಟ್ಟು, ರವೆ, ಸಕ್ಕರೆ ಮೊದಲಾದವುಗಳಿಗೆ ಬೇಕಾಗುವ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಸ್ವಂತ ದುಡ್ಡಿನ ಮೂಲಕ ಅವರು ಈ ಸೇವೆಗೆ ಮುಂದಾಗಿದ್ದು, ಇದು ಇತರರಿಗೆ ಸ್ಫೂರ್ತಿಯಾಗಬಹುದೆನ್ನುವ ಭರವಸೆ ಹೊಂದಿದ್ದಾರೆ.
ಸಂಚಾರಿ ವಿಜಯ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಮಂದಿ ಇಂಥದೇ ಸಹಾಯವನ್ನು ದಿನಗೂಲಿ ಕಾರ್ಮಿಕರ ಕಡೆಗೆ ತೋರಿಸುವ ನಿರೀಕ್ಷೆ ಮೂಡಿದೆ. ವಿಜಯ್ ಅವರು ಈ ಹಿಂದೆ ಕೊಡಗು ದುರಂತದ ಸಂದರ್ಭದಲ್ಲಿಯೂ ತಮ್ಮ ಕಾರಿನ ತುಂಬ ದೈನಂದಿನ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಲ್ಲದೆ, ಅಲ್ಲಿ ಪತ್ರಕರ್ತ, ಸಮಾಜ ಸೇವಕ ಚಂದ್ರಚೂಡ್ ನೇತೃತ್ವದ `ಪೀಪಲ್ ಫಾರ್ ಪೀಪಲ್’ ತಂಡದ ಜತೆ ಸೇರಿಕೊಂಡು ಪ್ರವಾಹ ಪೀಡಿತರನ್ನು ಸುಧಾರಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.