ಇವರು ಇಂದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಸ್ಥಾನದಲ್ಲಿರುವ ವ್ಯಕ್ತಿ. ಆದರೆ ಗಾಯಕರಾಗಿ ಅಲ್ಲ. ನಾಯಕರಾಗಿಯೂ ಅಲ್ಲ. ಹಾಗಾದರೆ ಹೇಗೆ ಎನ್ನುವ ಸಂದೇಹವೇ? ನಿರ್ದೇಶಕರಾಗಿ! ಹೌದು ಈ ನಿರ್ದೇಶಕ ಯಾರು ಎನ್ನುವುದು ನಿಮಗೆ ಇನ್ನೂ ಅರಿವಾಗದಿದ್ದರೆ ಈ ಸುದ್ದಿಯ ತಳಭಾಗದಲ್ಲಿರುವ ಅವರ ಇತ್ತೀಚೆಗಿನ ಫೊಟೊ ನೋಡಿ!
‘ಕಾಡಿನ ಬೆಂಕಿ’ ಸಿನಿಮಾದ ಚಿತ್ರಕತೆ ಸಂಭಾಷಣೆ ಮತ್ತು ಗೀತರಚನೆ ಮಾಡುವ ಮೂಲಕ 1986ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು ಇವರು. ನಿರ್ದೇಶಿಸಿದ ಪ್ರಥಮ ಚಿತ್ರ 1992ರಲ್ಲಿ ತೆರೆಕಂಡ ‘ಉಂಡೂ ಹೋದ ಕೊಂಡೂ ಹೋದ’ ಆಗಿತ್ತು. ಚಿತ್ರದಲ್ಲಿ ಅನಂತನಾಗ್ ನಾಯಕರಾಗಿದ್ದರು. ಅದೊಂದು ಯಶಸ್ವಿ ಚಿತ್ರವೂ ಆಗಿತ್ತು.
ಅಲ್ಲಿಂದ ಇಲ್ಲಿಯತನಕ 20ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿ ಕನ್ನಡದ ಯಶಸ್ವಿ ಹಿರಿಯ ನಿರ್ದೇಶಕರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಬಹುಮುಖ ಪ್ರತಿಭೆ!
ಪತ್ರಕರ್ತ, ಅಂಕಣಕಾರ, ನಟ, ನಿರ್ದೇಶಕ, ನಿರ್ಮಾಪಕ, ಕತೆಗಾರ, ಚಿತ್ರಕತೆಗಾರ, ಗೀತರಚನೆಕಾರ ಹೀಗೆ ಸಿನಿಮಾದ ಬಹುತೇಕ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿ ಯಶಸ್ಸು ಕಂಡಿರುವ ಇವರು ಗಾಯಕ ಎನ್ನುವುದು ಅಷ್ಟಾಗಿ ಹೈಲೈಟಾದ ವಿಚಾರ ಆಗಿರಲಿಲ್ಲ. ನಿರ್ದೇಶನದಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರದ ಹೆಸರು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’. ಬಹುಶಃ ಈಗ ನಿಮಗೆ ಯಾರು ಎಂದು ಗೊತ್ತಾಗಿರಬಹುದು. ಹೌದು; ನಿಮ್ಮ ಅನಿಸಿಕೆ ನಿಜ. ಇವರು ನಾಗತಿಹಳ್ಳಿ ಚಂದ್ರಶೇಖರ್. ಅವರು ಈ ಫೊಟೊ ಹಂಚಿಕೊಳ್ಳುವ ಜತೆಗೆ ಬರೆದುಕೊಂಡಂಥ ವಾಕ್ಯವೊಂದು ಹೀಗಿದೆ. “ಇದು ನನ್ನ ದಶಾವತಾರಗಳಲ್ಲೊಂದು. ಅಂದ ಕಾಲತ್ತಿಲೆ ಹೊಟ್ಟೆಪಾಡಿಗೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದೆ. ಮುಂಡೇದಿಕ್ಕೆ ಬೆಲ್ ಬಾಟಮ್ ಬೇರೆ ಕೇಡು!”