‘ಕನ್ನಡತಿ’ ಕನ್ನಡದ ಜನಪ್ರಿಯ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದರ ಪ್ರಮುಖ ಆಕರ್ಷಣೆ ಪುಟ್ಟಗೌರಿ ಖ್ಯಾತಿಯ ನಟಿ ರಂಜನಿ ರಾಘವನ್. ಆದರೆ ರಂಜನಿಗಾಗಿ ಧಾರಾವಾಹಿ ನೋಡಲು ಶುರು ಮಾಡಿದವರಿಗೆ
ಕನ್ನಡತಿ’ ಇಷ್ಟವಾಗಲು ಹಲವು ಕಾರಣಗಳಿದ್ದವು. ಅವೆಲ್ಲವುಗಳಿಗೆ ಪ್ರಮುಖ ಸೂತ್ರಧಾರಿಯಾಗಿ ನಿರ್ದೇಶಕ ಯಶವಂತ್ ಇದ್ದರು. ಇಂದು ಈ ವಿಚಾರ ನೆನಪಿಸಲು ಪ್ರಮುಖ ಕಾರಣವೊಂದಿದೆ. ಇವತ್ತು ನಿರ್ದೇಶಕ ಯಶವಂತ್ ಮತ್ತು ನಾಯಕಿ ರಂಜನಿ ರಾಘವನ್ ಇಬ್ಬರಿಗೂ ಜನ್ಮದಿನ.
ಸಿನಿಮಾ, ಸೀರಿಯಲ್ ಚಿತ್ರೀಕರಣದಲ್ಲಿರುವಾಗ ತಂಡದವರ ಜನ್ಮದಿನ ಇದ್ದರೆ ಅದಕ್ಕೆ ಅದೃಷ್ಟ ಬೇಕು. ಸಾಮಾನ್ಯವಾಗಿ ತಂಡದಲ್ಲಿನ ಲೈಟ್ ಬಾಯ್ ಜನ್ಮದಿನವಾದರೂ ಅದು ಯಾರಿಂದಲಾದರೂ ಹೊರಗೆ ಬಂದು ಬಿಡುತ್ತದೆ. ಸಾಮಾನ್ಯವಾಗಿ ನಿರ್ದೇಶಕರು ಎಷ್ಟೇ ಶಿಸ್ತಿನವರಾದರೂ ಮಧ್ಯಾಹ್ನದ ಬ್ರೇಕ್ ಸಮಯದಲ್ಲೊಂದಷ್ಟು ಕಾಲ ಜನ್ಮದಿನಾಚರಣೆಗೆ ಮೀಸಲಿಟ್ಟು ಬರ್ತ್ ಡೇ ಬಾಯ್ ಜತೆ ಸಂಭ್ರಮಿಸುತ್ತಾರೆ. ಅಂಥದ್ದರಲ್ಲಿ ನಿರ್ದೇಶಕ ಮತ್ತು ನಾಯಕಿ ಇಬ್ಬರೂ ಒಂದೇ ದಿನ ಬರ್ತ್ ಡೇ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಇಂದೇನಾದರೂ ಶೂಟಿಂಗ್ ಇದ್ದಿದ್ದರೆ ಅದು ಹಬ್ಬವೇ ಆಗುತ್ತಿತ್ತು. ಅದರಲ್ಲಿ ಸಂದೇಹವೇ ಇಲ್ಲ.
ರಂಜನಿ ರಾಘವನ್ ಅವರು ಕೆಳದಿ ಚೆನ್ನಮ್ಮ’ ಧಾರಾವಾಹಿಯಲ್ಲಿ ಯುವರಾಣಿಯ ಪಾತ್ರವೊಂದರ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು.
ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಕಿರುತೆರೆಯ ಯುವರಾಣಿಯಾಗಿ ಮೆರೆದರು. ಪ್ರಸ್ತುತ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿರುವ ಚಿತ್ರ ಟಕ್ಕರ್’ಗೆ ನಾಯಕಿಯಾಗಿ ಎಂಟ್ರಿ ನೀಡಲು ಕೂಡ ಸಿದ್ಧರಾಗಿದ್ದಾರೆ. ಇದರ ನಡುವೆ ಕಿರುತೆರೆಯಲ್ಲಿ ಟಿ.ಆರ್.ಪಿ ವಿಚಾರದಲ್ಲಿ ಮುಂಪಂಕ್ತಿಯಲ್ಲಿರುವ ಧಾರಾವಾಹಿ ಕನ್ನಡತಿಯಲ್ಲಿ ರಂಜನಿಯದ್ದು ಕನ್ನಡತಿ ಭುವನೇಶ್ವರಿಯ ಪಾತ್ರ. ಕನ್ನಡದ ಶಿಕ್ಷಕಿ. ಸದಾ ಕನ್ನಡದ ಪರ ಮಾತನಾಡುವವಳು; ಇರುವವಳು.
ಕೊರೊನಾ’ ವೈರಸ್ ಭೀತಿಯ ಕಾರಣ ದೇಶವೇ ಲಾಕ್ಡೌನ್ ಆಗಿರುವಾಗ ರಂಜನಿಯ ಜನ್ಮದಿನ ಹೇಗಿರಬಹುದು? ಅವರು ಆಚರಿಸಿದ್ದಾರ? ಎನ್ನುವ ಸಂದೇಹವನ್ನು ಅವರ ಮುಂದೆ ಇಟ್ಟಾಗ ತಮಗೆ ತಂಗಿ ಸರ್ಪ್ರೈಸ್ ನೀಡಿದ ವಿಚಾರವನ್ನು `ಸಿನಿಕನ್ನಡ’ಕ್ಕೆ ತಿಳಿಸಿದ್ದಾರೆ ರಂಜನಿ. ಸಹೋದರಿ ಸೌದಾಮಿನಿ ತಮ್ಮ ಮಿಂಚಿನಂಥ ಯೋಚನೆಯ ಮೂಲಕ ಖುದ್ದಾಗಿ ಕೇಕ್ ತಯಾರಿಸಿ ಅಕ್ಕನಿಗೆ ಜನ್ಮದಿನದ ಶುಭ ಕೋರಿದ್ದಾರೆ. ಇದು ನಿಜಕ್ಕೂ ಖುಷಿ ತಂದ ಉಡುಗೊರೆ ಎನ್ನುತ್ತಾರೆ ರಂಜನಿ ರಾಘವನ್.
ಮಿಲನ ಚಿತ್ರದ ನಿರ್ದೇಶಕ ಪ್ರಕಾಶ್ ನಿರ್ಮಾಣದ ಈ ಧಾರಾವಾಹಿಯ ನಿರ್ದೇಶಕ ಯಶವಂತ್. ಅವರು ಈ ಹಿಂದೆ ಟಿ.ಎನ್ ಸೀತಾರಾಮ್ ಅವರ ಗರಡಿಯಲ್ಲಿದ್ದವರು. ‘ಮುಕ್ತ ಮುಕ್ತ’ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಜತೆಯಾದ ಯಶವಂತ ‘ಮಹಾಪರ್ವ’ದ ಹೊತ್ತಿಗೆ ಎಪಿಸೋಡ್ ಡೈರೆಕ್ಷನ್ ಮಾಡುವಷ್ಟು ಬೆಳೆದು ನಿಂತಿದ್ದರು. ಜತೆಗೆ ಲಾಯರ್ ಸಿಎಸ್ ಪಿ ಸಹಾಯಕ ಪಾಂಡು ಪಾಟೀಲನಾಗಿ ಯಶವಂತ್ ನಟನೆ ಎಲ್ಲರ ನೆನಪಲ್ಲಿ ಉಳಿಯಿತು. ಯಶವಂತ ದೇವತೆ’,
ದೇವಯಾನಿ’, ಗಂಗಾ’,
ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಗಳನ್ನು ನಿರ್ದೇಶಿಸಿದ ಬಳಿಕ ಪ್ರಸ್ತುತ `ಕನ್ನಡತಿ’ಯ ಕ್ಯಾಪ್ಟನ್ ಹೆಸರಾಗಿದ್ದಾರೆ. ಇದರೊಂದಿಗೆ ‘ಅನಂತು ವರ್ಸಸ್ ನುಸ್ರತ್’ ಮತ್ತು ‘ಹಿಂಗ್ಯಾಕೆ’ ಸಿನಿಮಾಗಳಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಲಿತು ತೆರಳಿದ ಬಳಿಕ ಗುರು ಶಿಷ್ಯ ಸಂಬಂಧಗಳೇ ಮರೆಯಾಗುತ್ತವೆ. ಆದರೆ ಕನ್ನಡತಿಯಲ್ಲಿ ಕನ್ನಡದ ಕಾವ್ಯಗಳ ಸದ್ಬಳಕೆ ಮಾಡಿರುವುದಕ್ಕೆ ಗುರುಗಳಾದ ಸೀತಾರಾಮ್ ಅವರು ಯಶವಂತ್ ಅವರನ್ನು ಫೇಸ್ಬುಕ್ ಮೂಲಕ ಪ್ರಶಂಸಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಪರಮೇಶ್ವರ್ ಶುಭ ಹಾರೈಕೆ
‘ಕನ್ನಡತಿ’ ಧಾರಾವಾಹಿಗೆ ಕತೆ ಬರೆದಿರುವ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರಲ್ಲಿ ಕನ್ನಡತಿ ಮತ್ತು ಅದರ ಸಂಭ್ರಮದ ಬಗ್ಗೆ ಮಾತನಾಡಿದಾಗ ಅವರು ಹೇಳಿದ್ದು ಇಷ್ಟೇ. “ಬಹುತೇಕ ಕತೆಗಳು ನನ್ನದೇ ಇರುತ್ತವೆ. ಪ್ರತಿ ಧಾರಾವಾಹಿಯ ಕತೆಗಳಲ್ಲಿ ಇನ್ವಾಲ್ವ್ ಆಗುತ್ತಿರುತ್ತೇನೆ. ಆದರೆ `ಕನ್ನಡತಿ’ಗೆ ಸಂಬಂಧಿಸಿದಂತೆ ಪೂರ್ತಿ ಪರಿಕಲ್ಪನೆ ನನ್ನದೇ ಆಗಿರುವ ಕಾರಣ ನನ್ನ ಹೆಸರು ಹಾಕಿದ್ದಾರೆ. ಹಾಗೆ ನೋಡಿದರೆ ಎಷ್ಟೋ ಕತೆಗಳು ನನ್ನದೇ ಎನ್ನಬಹುದು. ನನ್ನ ಹೆಸರು ಹಾಕುವುದು ಬಿಡುವುದು ಅವರವರ ಇಷ್ಟ. ಇಲ್ಲಿ ಬಳಸಿಕೊಂಡಿದ್ದಾರೆ. ಧಾರಾವಾಹಿಯ ಬಗ್ಗೆ ನನ್ನ ಅಭಿಪ್ರಾಯವೇನೂ ಬೇಕಾಗಿಲ್ಲ. ಜನ ಮೆಚ್ಚಿಕೊಂಡಿದ್ದಾರೆ; ಅದೇ ಸಂತೋಷ. ನಿರ್ದೇಶಕ ಮತ್ತು ನಾಯಕಿ ಇಬ್ಬರಿಗೂ ಶುಭಾಶಯಗಳು” ಎಂದರು.