ದಿಢೀರ್ ಲಾಕ್ಡೌನ್ ನಿಂದಾಗಿ ಎಲ್ಲ ಕಡೆಯೂ ಸಮಸ್ಯೆಯಾಗಿರುವುದು ಗೊತ್ತೇ ಇದೆ. ಎಂದಿನ ಹಾಗೆ ಸಮಾಜ ಸೇವಕರ ಜತೆಗೆ ಚಲನಚಿತ್ರರಂಗದ ಪ್ರಮುಖರು ಕಷ್ಟದಲ್ಲಿರುವವರಿಗೆ ಅಗತ್ಯದ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ವಿಚಿತ್ರ ಏನೆಂದರೆ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಾರಣವಾಗುವ ನಿರ್ಮಾಪಕರು ಕೂಡ ಪ್ರಸ್ತುತ ಸಂಕಷ್ಟದಲ್ಲಿದ್ದಾರೆ. ಆದರೆ ಅವರ ಕಷ್ಟಗಳನ್ನು ವಿಚಾರಿಸುವವರೇ ಇಲ್ಲವಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮಾತೃ ಸಂಘಟನೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಕರಿಸಬೇಕಾಗಿದೆ ಎನ್ನುವುದು ಹಲವರ ಅಭಿಪ್ರಾಯ. ಅದಕ್ಕಾಗಿ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಭಾ.ಮ ಹರೀಶ್ ಅವರು ಈ ಬಗ್ಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ಅವರಿಗೆ ಮನವಿ ನೀಡಿದ್ದಾರೆ.
ಪ್ರಸ್ತುತ ವಿಚಾರದ ಭಾ.ಮ ಹರೀಶ್ ಅವರು ಈಗಾಗಲೇ ಜಯರಾಜ್ ಅವರೊಂದಿಗೆ ಹಲವು ಬಾರಿ ದೂರವಾಣಿಯೊಂದಿಗೆ ಮಾತನಾಡಿ ಸದಸ್ಯರ ಗಂಭೀರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅವರ ಮನವಿಯಲ್ಲಿನ ಸಾರಾಂಶ ಈ ಕೆಳಕಂಡಂತಿದೆ.
“ದೇಶ ಲಾಕ್ ಡೌನ್ ಆಗಿ ಈಗಾಗಲೇ ಹತ್ತು ದಿನಗಳಾಗಿದ್ದು, ದಿನದಿನಕ್ಕೂ ಮಂಡಳಿಯ ಸದಸ್ಯರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಅವರಿಗೆ ಸರ್ಕಾರ ಸೇರಿದಂತೆ ಸಮಾಜದ ಯಾವುದೇ ಸಂಸ್ಥೆಗಳಿಂದಲೂ ನೆರವು ಲಭಿಸುತ್ತಿಲ್ಲ. ಆದ ಕಾರಣ ಹಲವಾರು ಸದಸ್ಯರುಗಳು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೆರವಿಗಾಗಿ ಆಗ್ರಹಿಸುತ್ತಿದ್ದಾರೆ. ಆದುದರಿಂದ ತಾವುಗಳು ಈ ಕೂಡಲೇ ಪೋಲೀಸ್ ಇಲಾಖೆಯಿಂದ ಅನುಮತಿ ಪಡೆದು, ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದು ಮಂಡಳಿಯ ಕಛೇರಿಗೆ ಹೊಂದಿಕೊಂಡಂತಿರುವ ‘ಗುರುರಾಜ ಕಲ್ಯಾಣ ಮಂಟಪ’ ದಲ್ಲಿ ಸಭೆ ಕರೆದು ಒಬ್ಬರಿಗೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಯಲ್ಲಿ ಭಾಗಿಯಾಗುವಂತೆ ನಿರ್ದೇಶಿಸಿ, ಸಭೆಯಲ್ಲಿ ಈ ತುರ್ತು ಪರಿಸ್ಥಿತಿಯ ವಿಷಯವನ್ನು ಚರ್ಚಿಸಿ, ಸಮಂಜಸ ಹಾಗೂ ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ಸಂಕಷ್ಠದಲ್ಲಿರುವ ಮಂಡಳಿಯ ಸದಸ್ಯರಿಗೆ ನೆರವು ನೀಡಿ, ಅವರ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.”
ಇಂಥದೊಂದು ಮನವಿಗೆ ಸ್ಪಂದಿಸಿರುವ ಜಯರಾಜ್ ಅವರು, ಸಭೆ ಸೇರುವ ಬಗ್ಗೆ ಕಮೀಷನರ್ ಮತ್ತು ಬಿಬಿಎಂಪಿಯ ಅನುಮತಿ ಪಡೆಯಲಿದ್ದು, ಅವರ ಒಪ್ಪಿಗೆ ಸಿಕ್ಕ ತಕ್ಷಣ ಮುಂದಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಭಾ.ಮಾ ಹರೀಶ್ ಹೇಳಿದ್ದಾರೆ.