ಉಪ್ಪಿ ಹೇಳಿದ ದೀಪ ಯಾವುದು..?!

ಪ್ರಧಾನ ಮಂತ್ರಿಗಳ ಕರೆಯಂತೆ ಭಾನುವಾರ ದೇಶದೆಲ್ಲೆಡೆ ದೀಪಾವಳಿಯಾಗಿದೆ. ಮುಂದಿನ ದಿನಗಳಲ್ಲಿ ಜನರು ಇನ್ನಷ್ಟು ಸಂಭ್ರಮಿಸುವ ಸಂದರ್ಭ ಸೃಷ್ಟಿಸಲಿ ಎನ್ನುವುದು ನಮ್ಮ ಹಾರೈಕೆಯೂ ಹೌದು. ಆದರೆ ಇದರ ನಡುವೆ ಪ್ರಧಾನಿಯವರ ದೀಪ ಬೆಳಗಿಸುವ ಕರೆಯನ್ನು ವಿರೋಧಿಸಿದವರೂ ಇದ್ದರು. ಅದಕ್ಕೆ ಕಾರಣ ಪ್ರಸ್ತುತ ಸಂದರ್ಭದಲ್ಲಿ ಭಾರತದ ಪ್ರಧಾನಿ ಪ್ರಜೆಗಳೆದುರು ಮನವಿ ಮಾಡಬೇಕಾದಂಥ ವಿಚಾರವಾಗಿರಲಿಲ್ಲ ಎನ್ನುವುದು ಮಾತ್ರ. ಅದರಲ್ಲಿಯೂ ಇಂಥದೊಂದು ಬರಹಕ್ಕೆ ಪ್ರೇರಣೆಯಾಗಿರುವುದು ಪ್ರಜಾಕೀಯ'ದ ಸಂಸ್ಥಾಪಕ ಉಪೇಂದ್ರ ಕುಮಾರ್ ಅವರು ಹಂಚಿಕೊಂಡ ಒಂದು ಚಿತ್ರ ಮತ್ತು ತಲೆ ಬರಹ. ಮನುಷ್ಯನ ಮೆದುಳಿನಿಂದ ಪ್ರಕಾಶ ಹೊಮ್ಮುವ ಚಿತ್ರವೊಂದರ ಜತೆಗೆವಿಚಾರಗಳ ದೀಪ ನಿರಂತರವಾಗಿ ಬೆಳಗಲಿ’ ಎಂದು ಬುದ್ಧಿವಂತನ ಸಂದೇಶ ಅಲ್ಲಿತ್ತು. ಅದರ ಬಗ್ಗೆ ಹೇಳುವ ಮೊದಲು ಮೋದಿಯವರ ಕರೆಯ ಬಗ್ಗೆಯೂ ಒಂದಷ್ಟು ನೆನಪಿಸಿಕೊಳ್ಳಲೇಬೇಕು.

ಕೊರೊನ ನೀಡಿದ ಸಂಕಟದ ಅಂಧಕಾರದಿಂದ ಬೆಳಕಿನೆಡೆಗೆ ಸಾಗಬೇಕಾಗಿದೆ. ಆ ಬೆಳಕನ್ನು ದೇಶದ ೧೩೦ ಕೋಟಿ ಜನಗಳು ಸೇರಿ ನಾಲ್ಕು ಭಾಗಕ್ಕೂ ಚೆಲ್ಲುವ ಮೂಲಕ ನಾವು ಯಾರೂ ಒಂಟಿಯಲ್ಲ ಎಂದು ಆತ್ಮ ವಿಶ್ವಾಸ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದ್ದರು. ಅಂದು ಹಾಗೊಂದು ವೀಡಿಯೋ ಸಂದೇಶದ ಅಗತ್ಯವಿರಲಿಲ್ಲ. ಭಾರತ ಕೊರೊನಾ ಪಿಡುಗನ್ನು ಎದುರಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ, ಮುಂದಿನ ದಿನಗಳನ್ನು ನಾವು ಹೇಗೆ ಕಳೆಯಬೇಕಾಗುತ್ತದೆ, ಇಷ್ಟು ದಿನ ಪೆಟ್ಟು ತಿಂದಿರುವ ಆರ್ಥಿಕತೆಯನ್ನು ಎಲ್ಲರೂ ಒಗ್ಗೂಡಿ ಮೇಲೆತ್ತುವ ಮಾರ್ಗ ಏನು ಎಂದು ನೀವು ಸೂಚ್ಯವಾಗಿಯಾದರೂ ಪ್ರಸ್ತಾಪಿಸಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಕೋಮುರೂಪ ಪಡೆದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಧಾರರ್ಮಿಕ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಅವರ ಜವಾಬ್ದಾರಿಯ ಬಗ್ಗೆ ನೆನಪಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ದೀಪ ಹಚ್ಚಿ ಪ್ರಧಾನಿ ಸ್ಥಾನದಲ್ಲಿ ಕೂತು ನೀವು ಜನತೆಗೆ ನೀಡಬೇಕಾದ ಕರೆ ಆಗಿರಲಿಲ್ಲ. ಇಟಲಿಯಲ್ಲಿ ಕರೆ ನೀಡಲಾಗಿತ್ತು ನಿಜ. ಅದು ಪರಿಸ್ಥಿತಿ ಕೈ ಮೀರಿದಾಗ ಎಲ್ಲರ ಮನೆಯಲ್ಲಿಯೂ ಶೋಕವಿರುವಾಗ ಅದನ್ನು ದೀಪದ ಮೂಲಕ ವ್ಯಕ್ತಪಡಿಸುವ ಕೋರಿಕೆಯಾಗಿತ್ತು. ಆದರೆ ನಮ್ಮ ದೇಶಕ್ಕೆ ಸದ್ಯಕ್ಕೆ ಬೇಕಿದ್ದಿದ್ದು ಮುಂಜಾಗ್ರತಾ ಸೂಚನೆಗಳು. ಈಗಾಗಲೇ ಚಪ್ಪಾಳೆ ಮತ್ತು ಗಂಟೆ ಬಡಿಯಲು ಹೇಳಿರುವುದನ್ನು ಕೇಳಿ ಜನ ಜಾತ್ರೆ ಮಾಡಿದ ದೇಶ ಎಂದು ಗೊತ್ತಿದ್ದರೂ ಈ ಬಾರಿ ಬೆಂಕಿಯೊಂದಿಗೆ ಸರಸಕ್ಕೆ ಆಹ್ವಾನ ನೀಡಿದ್ದು ಕಂಡು ಹಲವರಲ್ಲಿ ಆತಂಕ ಮೂಡಿತ್ತು. ನಿರೀಕ್ಷೆಯಂತೆ ಗುಜರಾತ್, ಛತ್ತೀಸ್ ಘಡ ಮೊದಲಾದೆಡೆ ಬೆಂಕಿಯ ಆಟ ಆಡಿದ್ದಾರೆ. ನಾವಿದ್ದ ಕಡೆಯೂ ಪಟಾಕಿ ಗದ್ದಲ ಇತ್ತು. ಉಳಿದಂತೆ ಪಂಜಿನ ಮೆರವಣಿಗೆಗಳನ್ನು ವಾಟ್ಯ್ಸಾಪ್ ನಲ್ಲಿ ನೋಡಿದ್ದೇವೆ.

ದೇಶದ ಮುಖ್ಯಸ್ಥರಾಗಿ ಪ್ರತಿದಿನ ಹತ್ತು ನಿಮಿಷದ ಮಟ್ಟಿಗಾದರೂ ನೀವು ಪತ್ರಿಕಾಗೋಷ್ಠಿ ನಡೆಸಿ ದಿನದ ಬೆಳವಣಿಗೆ, ಕೈಗೊಂಡ ಕ್ರಮ, ಸಿಕ್ಕಿದ ಯಶಸ್ಸು, ಸೋಲುತ್ತಿರುವುದು ಎಲ್ಲಿ ಎನ್ನುವುದನ್ನು ವಿವರಿಸಬೇಕು ಎಂದು ಮೋದಿಯನ್ನು ಮೆಚ್ಚುವವರು ಕೂಡ ನಿರೀಕ್ಷಿಸುತ್ತಿದ್ದರು. ಹಾಗಂತ ಮೋದಿಯವರ ಹೇಳಿಕೆಗೆ ಬೆಂಬಲ ಸಿಗಲಿಲ್ಲವೇ ಖಂಡಿತವಾಗಿ ಸಿಕ್ಕಿದೆ. ಪ್ರಧಾನ ಮಂತ್ರಿಯರೆ ಕರೆ ಎನ್ನುವ ಕಾರಣಕ್ಕೆ ಅದನ್ನು ಅನುಸರಿಸುವವರೇ ದೇಶದ ಹೆಚ್ಚಿನ ಮಂದಿ ಎನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಪ್ರಧಾನ ಮಂತ್ರಿ ವಿನಂತಿಸಿದ್ದಾರೆ ಎಂದರೆ ಅದೇ ಆದೇಶ ಎಂದುಕೊಂಡಿರುವ ಮುಗ್ದರಿಗೆ ಕೊರತೆ ಇಲ್ಲ. ಅದನ್ನೇ ಬಂಡವಾಳವಾಗಿಸಿದ ಒಂದಷ್ಟು ಬಿಜೆಪಿ ಕಾರ್ಯಕರ್ತರು ದೀಪ ಹಚ್ಚದವರ ಮನೆಗೆ ನುಗ್ಗಿ ಬಲವಂತದಿಂದ ದೀಪ ಹಚ್ಚುವಂತೆ ಒತ್ತಡ ಹೇರಿದ ಘಟನೆಯೂ ನಡೆಯಿತು. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಯಿತು! ಒಟ್ಟಿನಲ್ಲಿ ಅವರಿಗೆ ದೀಪ ಬೆಳಗಿಸಿ ನಾಡಿಗೆ ಒಳಿತಾಗುತ್ತದೋ ಬಿಡುವುದೋ ಒಂದು ಪಕ್ಷಕ್ಕೆ ಅದರ ಕ್ರೆಡಿಟ್ ತಂದು ಕೊಡಬೇಕಾದ ಒತ್ತಡ ಇರುತ್ತದೆ. ಹಾಗೆ ತಮ್ಮ ನಾಯಕರ ಮುಂದೆ ಗುರುತಿಸಿಕೊಳ್ಳುವ ಅವಕಾಶವಾಗಿ ಅವರು ಕಾಣುತ್ತಾರೆ. ಸ್ಥಳೀಯ ನಾಯಕರಂತೂ ಮೋದಿಯ ಗಮನ ಸೆಳೆಯಲು ಸ್ವತಃ ದೀಪ ಹಂಚಲು ಮುಂದೆ ಬಿದ್ದಿರುತ್ತಾರೆ.

ಮೋದಿಯವರು ಪ್ರಧಾನ ಮಂತ್ರಿಯಾದ ದಿನಗಳಿಂದಲೂ ಬಾಲಿವುಡ್ ಚಿತ್ರೋದ್ಯಮದ ಜತೆಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಂಡಿದ್ದಾರೆ. ಸಹಜವಾಗಿ ಅವರ ಕಡೆಯಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡದ ಮಟ್ಟಿಗೆ ಎಲ್ಲ ರೀತಿಯ ಕಲಾವಿದರು ಕೂಡ ಇದ್ದಾರೆ. ಆದರೆ ಹೆಚ್ಚಿನವರು ಬೆಂಬಲ ನೀಡಿದ್ದಾರೆ. ಅದಕ್ಕೆ ಕಾರಂ ಹೇಳದಿದ್ದರೂ ನಾವು ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದಾಗಿ ಕಲಾವಿದರು ಭಾವನಾತ್ಮಕ ಜೀವಿಗಳು. ಮೋದಿ ಕರೆ ನೀಡಿದ ಬಳಿಕ ಅದರ ಪ್ರಚಾರಕ್ಕೆ ಬಳಕೆಯಾಗುವವರೇ ಕಲಾವಿದರು. ಜತೆಗೆ ಲಾಕ್ಡೌನ್ ಬೇರೆ ಘೋಷಣೆಯಾಗಿರುವ ಕಾರಣ ಸಾಕಷ್ಟು ಬಿಡುವು ಕೂಡ ಇರುತ್ತದೆ. ಒಂದಷ್ಟು ದೊಡ್ಡ ತಾರೆಯರು ಪ್ರಧಾನಿಗಳ ಮಾತಿಗೆ ತಮ್ಮ ಬೆಂಬಲ ತೋರಿಸಲು ದೀಪಹಚ್ಚುವುದು ಸಹಜವೇ ಆಗಿದೆ. ಒಂದಷ್ಟು ಮಂದಿ ತಮ್ಮ ಬಿಡುವಿನ ವೇಳೆಯಲ್ಲಿ ಈ ಮೂಲಕವಾದರೂ ಗುರುತಿಸಿಕೊಳ್ಳೋಣ ಎನ್ನುವ ಆಗ್ರಹದಿಂದಲೂ ಹಚ್ಚಿ ವಿಡಿಯೋ ಮಾಡಿಕೊಂಡಿರುತ್ತಾರೆ. ಇಲ್ಲಿ ಕಾರಣಗಳಿಗಿಂತ ದೀಪ ಬೆಳಗಿದ್ದಾರೆ ಎನ್ನುವುದಷ್ಟೇ ಮುಖ್ಯವಾಗುತ್ತದೆ.

ಸಿನಿಮಾರಂಗದಲ್ಲಿ ರಾಜಕಾರಣಿಗಳ ವಿಚಾರಕ್ಕೆ ಬಂದರೆ ಮಾಜಿ ಪ್ರಧಾನಿಯವರ ಪುತ್ರ ಕುಮಾರ ಸ್ವಾಮಿ ಇದ್ದಾರೆ. ಅವರು ಮಾಜಿ ಮುಖ್ಯಮಂತ್ರಿಗಳಾದರೂ, ನಿರ್ಮಾಪಕರಾಗಿ ನಾಯಕನ ತಂದೆಯಾಗಿ, ನಾಯಕಿಯ ಪತಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅವರ ತಂದೆ ದೇವೇಗೌಡರು ದೀಪ ಹಚ್ಚಿದರೂ ಸಹ ಕುಮಾರಸ್ವಾಮಿ ದೀಪದೊಂದಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ರಾಧಿಕಾ ಕುಮಾರಸ್ವಾಮಿಯವರು ದೀಪ ಹಚ್ಚಿದ ವಿಡಿಯೋ ವೈರಲ್ ಆಗುತ್ತದೆ. ಶಿವರಾಜ್ ಕುಮಾರ್, ಶ್ರೀ ಮುರಳಿ, ಯಶ್, ಧ್ರುವ ಸರ್ಜ ಹೀಗೆ ಪ್ರಮುಖ ಸ್ಟಾರ್ ನಟ ನಟಿಯರು ದೀಪಗಳೊಂದಿಗೆ ಕಾಣುತ್ತೇವೆ. ಆದರೆ ಉಪೇಂದ್ರ ಅವರಿಂದ ಬಂದಂಥ ಸಂದೇಶ ಮತ್ತೆ ಯಾರಿಂದಲೂ ನಿರೀಕ್ಷಿಸಲು ಕೂಡ ಸಾಧ್ಯವಾಗುವುದಿಲ್ಲ!

ಬಡವರು ಹಚ್ಚಿದ್ದಾರೆ, ಪ್ರತಿ ಪಕ್ಷಗಳ ಮಂದಿ ಹಚ್ಚಿದ್ದಾರೆ ಎನ್ನುವುದನ್ನೇ ಮುಖ್ಯವಾಗಿಸಿಕೊಂಡು ದೀಪ ಹಚ್ಚುವುದನ್ನು ವಿರೋಧಿಸಿದವರನ್ನು ಎಂದಿನಂತೆ ದೇಶದ್ರೋಹಿಗಳ ಪಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತದೆ. ಆದರೆ ಇಲ್ಲಿ ವಿರೋಧ ಹೇಗಿತ್ತು ಎನ್ನುವುದನ್ನು ಗಮನಿಸಬೇಕು. ಯಾರು ಕೂಡ ದೀಪ ಹಚ್ಚುವವರನ್ನು ತಡೆಯಿರಿ ಎಂದು ಒತ್ತಾಯಿಸಿಲ್ಲ. ಆದರೆ ಇದು ದೀಪ ಹಚ್ಚಿ ಸಂಭ್ರಮಿಸುವ ಕಾಲವಲ್ಲ ಎನ್ನುವುದಷ್ಟೇ ಉದ್ದೇಶವಾಗಿತ್ತು. ಮಾತ್ರವಲ್ಲ, ಇಂದು ದೀಪ ಕೊಳ್ಳಲು ಕೂಡ ಕಷ್ಟಪಡುವವರು ಕೊಂಡು ಆಚರಿಸಿದ್ದರೆ ಅದಕ್ಕೆ ಕಾರಣ, ದೀಪದ ಮೂಲಕ ಕೊರೊನ ವಿರುದ್ಧ ಹೋರಾಡುವ ಶಕ್ತಿ ಬಂದೀತು, ಹಚ್ಚದಿದ್ದರೆ ತಪ್ಪಾದೀತು ಎನ್ನುವ ಅಜ್ಞಾನವೇ ಹೊರತು ಬೇರೇನಲ್ಲ. ಅವರ ಅಜ್ಞಾನ ಅಥವಾ ಮುಗ್ದತೆಯನ್ನು ಹಳಿಯಲಾಗದು. ಆದರೆ ಅದನ್ನು ಬಂಡವಾಳ ಮಾಡಿ ಮರೆಯುವವರನ್ನು ಒಪ್ಪಲೂ ಆಗದು. ಇಲ್ಲಿಯೇ ಮನುಷ್ಯ ತನ್ನಮೆದುಳಿನ ಪ್ರಕಾಶವನ್ನು ಬಳಸಬೇಕಾಗಿರುವುದು. ಉಪೇಂದ್ರ ಅವರು `ಪ್ರಜಾಕೀಯ’ದ ಮೆದುಳಿನ ಮೂಲಕ ಜ್ಞಾನದ ಪ್ರಕಾಶವನ್ನು ಎಲ್ಲರಿಂದ ಹೊಮ್ಮಿಸುವ ದಿನಗಳು ಶೀಘ್ರದಲ್ಲೇ ಬರುವಂತಾಗಲಿ ಎಂದು ಹಾರೈಕೆ.

Recommended For You

Leave a Reply

error: Content is protected !!
%d bloggers like this: