ಅಭಿಮಾನಿಗಳನ್ನು ಅಭಿನಂದಿಸಿದ ದುನಿಯಾ ವಿಜಯ್

ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ನಟನಿದ್ದರೆ ಬಹುಶಃ ಅದು ದುನಿಯಾ ವಿಜಯ್ ಎನ್ನಬಹುದು. ಯಾಕೆಂದರೆ ಅವರು ಸೆಲ್ಫೀ ಹೊಡೆಸಿಕೊಳ್ಳುವಾಗ ಮಾತ್ರ ಅಭಿಮಾನಿಯ ಹೆಗಲ‌ಮೇಲೆ ಕೈ ಹಾಕುವ ಸ್ಟಾರ್ ಅಲ್ಲ. ಸದಾ ಬೆಂಬಲವಾಗಿ ಧೈರ್ಯ ನೀಡುವ ಸ್ಟಾರ್. ಹಾಗಾಗಿಯೇ ಅವರ ಅಭಿಮಾನಿಗಳಿಗೂ ಸಹ ದುನಿಯಾ ವಿಜಯ್ ಎಂದರೆ ಎಲ್ಲೆ ಮೀರಿದ ಅಭಿಮಾನ. ಈ ಫ್ಯಾನ್ ಮತ್ತು ಸ್ಟಾರ್ ನಡುವಿನ ಸಂಬಂಧಕ್ಕೆ ಇಲ್ಲೊಂದು ಫೆಂಟಾಸ್ಟಿಕ್ ಉದಾಹರಣೆ ಇದೆ.

ಇದು ಕೂಡ ತಮ್ಮ ಫೇಸ್ಬುಕ್ ಮೂಲಕ ದುನಿಯಾ ವಿಜಯ್ ಹಂಚಿಕೊಂಡಂಥ ವಿಚಾರ. ಅಲ್ಲಿ ಅವರು ಹೇಳಿರುವುದು ಇಷ್ಟೇ.

“ಕಲಾವಿದರಿಗೆ ಸಿಗುವ ಭಾಗ್ಯವೇ ಅಭಿಮಾನಿಗಳು. ಅದರಲ್ಲಿ ಕೂಡ ಅವರು ನಮ್ಮ ಮೇಲಿನ‌ ಅಭಿಮಾನದಿಂದ ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದಾರೆ ಎಂದ ಮೇಲೆ ಇಂಥ ಅಭಿಮಾನಿಗಳಿರುವುದೇ ಸಾರ್ಥಕ. ಇಲ್ಲಿ ಆಹಾರ ವಿತರಿಸುತ್ತಿರುವವರು “ಮೈಸೂರು ಜಿಲ್ಲಾ ದುನಿಯಾ ವಿಜಯ್ ಅಭಿಮಾನಿಗಳ ಬಳಗ”ದವರು. ಅಂದಹಾಗೆ ಇವರು ಇದನ್ನು ಎರಡು ದಿನಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರು ನಗರದಲ್ಲಿ ಕೆಲವು ನಿರ್ಗತಿಕರು, ಕಡುಬಡವರು, ನಿರಾಶ್ರಿತರಿಗೆ, ಆಹಾರ ವಿತರಣೆಯನ್ನು ಮಾಡಿದ್ದಾರೆ.

ಈ ಸಮಾಜ ಸೇವೆಯನ್ನು ಕಂಡ ಬಳಿಕ ತುಂಬ ಖುಷಿಯಾಗಿದ್ದೇನೆ. ಈ ಮೂಲಕ ಅಭಿಮಾನಿಗಳಲ್ಲಿ‌ ನಾನು ನೇರವಾಗಿ ಹೇಳಬಯಸುವುದು ಒಂದೇ.. ” ನಿಮ್ಮ ಈ ಋಣವನ್ನು ನನ್ನಿಂದ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ನಿಮಗೆ ತುಂಬು ಹೃದಯದಿಂದ ವಂದನೆಗಳು.” ಎಂದು ಬರೆದುಕೊಂಡಿದ್ದಾರೆ.

ದುನಿಯಾ ವಿಜಯ್ ಅವರು ತಳಸಮುದಾಯದ ಜನರ ಪ್ರತಿನಿಧಿಯಾಗಿ ಬಂದು, ಅಂಥದೇ ಪಾತ್ರಗಳ ಮೂಲಕ ಸ್ಟಾರ್ ಆದವರು. ಇಂದು ಮೈಕಟ್ಟು ಬೆಳೆಸಿ ಪೊಲೀಸ್ ಮಾದರಿಯ ಪಾತ್ರಗಳಿಂದಲೂ ಹೆಸರಾಗಿರಬಹುದು.‌ ಆದರೆ ಜನಸಾಮಾನ್ಯರ ಪಾತ್ರವನ್ನು ದುನಿಯಾ ವಿಜಯ್ ಅವರಂತೆ ನಿಭಾಯಿಸುವ ಮತ್ತೋರ್ವ ನಟ ಕನ್ನಡದಲ್ಲಿ ಇಲ್ಲ ಎನ್ನಬಹುದು. ಅದೇ ರೀತಿ ಅವರ ಅಭಿಮಾನಿಗಳು ಕೂಡ ಅಂಥವರೇ. ಮಲ್ಟಿಪ್ಲೆಕ್ಸ್ ಥಿಯೇಟರಲ್ಲಿ ಕುಳಿತು ಭಾವನೆಗಳನ್ನು ಮುಚ್ಚಿಕೊಂಡು‌ ಚಿತ್ರ ನೋಡುವವರಲ್ಲ. ಅಲ್ಲೇ ನೋಡಲಿ ಅಥವಾ ಫಸ್ಟ್‌ ಡೇ ಫಸ್ಟ್ ಶೋ ಸಿಂಗಲ್ ಥಿಯೇಟರಲ್ಲೇ ನೋಡಲಿ‌, ಚಿತ್ರವನ್ನು ಹಬ್ಬ ಮಾಡಬಲ್ಲ ಕಲೆ ಅವರಲ್ಲಿದೆ. ಅವರ ಭಾವನೆಗಳು ಸಿನಿಮಾಗಳಿಗೆ ಮಾತ್ರ ಸೀಮಿತವಲ್ಲ. ಜನತೆ ಸಂಕಷ್ಟದಲ್ಲಿದ್ದಾಗ ಅದಕ್ಕೂ ಮಿಡಿಯುವ ಹೃದಯ ಅವರದು. ಅದರ ಪ್ರತಿಫಲವೇ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಸಹಾಯ ಹಸ್ತ. ಇದನ್ನು ಕಂಡು ಸ್ವತಃ ದುನಿಯಾ‌ ವಿಜಯ್ ಖುಷಿಗೊಂಡಿದ್ದಾರೆ. ಅವರ ಕೆಲಸವನ್ನು ಮೆಚ್ಚಿ ಫೇಸ್‌ಬುಕ್‌ ‌ನಲ್ಲಿಯೂ ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ಇದು ಖಂಡಿತವಾಗಿ ಸಂತೃಪ್ತಿ ನೀಡಿರುತ್ತದೆ. ಯಾಕೆಂದರೆ, ಅವರು ತಮ್ಮ ಸೇವೆ ಮಾಧ್ಯಮಗಳಲ್ಲಿ ಬರುವುದಕ್ಕಿಂತಲೂ ಅದು ಅರ್ಹರನ್ನು ತಲುಪುವುದು ಮತ್ತು ಈ ಒಳ್ಳೆಯ ಕೆಲಸವನ್ನು ತಮ್ಮ ಮೆಚ್ಚಿನ ನಟ ಗುರುತಿಸುವುದು ಮುಖ್ಯ ಎಂದು ಗುರಿ ಮಾಡಿಕೊಂಡಿರುತ್ತಾರೆ. ಈಗ ಸ್ವತಃ ದುನಿಯಾ ವಿಜಯ್ ಅವರಿಂದಲೇ ಮೆಚ್ಚುಗೆ ಲಭಿಸಿದೆ. ಹಾಗಾಗಿ ಖಂಡಿತವಾಗಿ ಅವರು ಖುಷಿಯಾಗಿರುತ್ತಾರೆ. ವಿಜಯ್ ಮತ್ತು ಅಭಿಮಾನಿಗಳಿಗೆ ನಮ್ಮ ಸಲ್ಯೂಟ್.

Recommended For You

Leave a Reply

error: Content is protected !!