ಕರಿಚಿರತೆ ಕಂಡಂತೆ ಅಣ್ಣಾವ್ರ ಅಭಿಮಾನ

ಇವತ್ತು ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ ದಿನ. ಚಿತ್ರರಂಗದವರು ಸೇರಿದಂತೆ ಕನ್ನಡಿಗರೆಲ್ಲರು ಕೂಡ ಲಾಕ್ಡೌನ್ ನಡುವೆಯೂ ಡಾ.ರಾಜ್ ನೆನಪಿನಲ್ಲಿದ್ದಾರೆ. ಅದು ಆ ಧೀಮಂತ ವ್ಯಕ್ತಿಗಿರುವಂಥ ಶಕ್ತಿ.

ಇಂದು ಅಣ್ಣಾವ್ರ ನೆನಪನ್ನು ಹಂಚಿಕೊಂಡ ತಾರೆಯರಲ್ಲಿ ಕನ್ನಡದ ‘ಕರಿಚಿರತೆ’ ದುನಿಯಾ‌ವಿಜಯ್ ಕೂಡ ಒಬ್ಬರು. ಎಂದಿನಂತೆ ಫೇಸ್ಬುಕ್ ಮೂಲಕ ಮನಸು ಬಿಚ್ಚಿರುವ ಅವರು ಹಂಚಿಕೊಂಡಂಥ ಅಣ್ಣಾವ್ರ ಸ್ಫೂರ್ತಿ ಸಿನಿಮಾ ಅಪರೂಪ ಎನಿಸುವ ಚಿತ್ರ ‘ಕಣ್ತೆರೆದು ನೋಡು’. ಅವರು ಬರೆದಿರುವುದನ್ನು ಇಲ್ಲಿ ಅದೇ ರೀತಿ ನೀಡಲಾಗಿದೆ.

ಬುದ್ಧಿವಂತ ಮನುಷ್ಯ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳನ್ನು ಕೂಡ ಪ್ರಶ್ನೆ ಮಾಡಿ ಒಪ್ಪಿಕೊಳ್ಳಬೇಕಂತೆ. ಅದು ನಿಜವೂ ಹೌದು. ಆದರೆ ನಾ ಕಂಡಂತೆ ಕೆಲವು ವಿಚಾರಗಳನ್ನು ಕಣ್ಮುಚ್ಚಿಕೊಂಡು ಒಪ್ಪಬಹುದು. ಅವುಗಳಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಅಭಿಮಾನಿಯಾಗುವುದು ಕೂಡ ಒಂದು. ಒಂದು ವೇಳೆ ನೀವು ಅವರ ಅಭಿಮಾನಿಯಾಗದೇ ತರ್ಕಿಸಿ ಕುಳಿತವರಿದ್ದರೆ ಅಣ್ಣಾವ್ರ ಬೆರಳೆಣಿಕೆಯ ಚಿತ್ರಗಳನ್ನು ನೋಡಿದರೂ ಸಾಕು ಅಭಿಮಾನಿಯಾಗಿ ಬಿಡುವುದು ನಿಸ್ಸಂಶಯ. ಹಾಗಾಗಿ ಅವರ ಚಿತ್ರಗಳನ್ನು ಪರೀಕ್ಷಾತ್ಮವಾಗಿ ನೋಡಿ ತಲೆಬಾಗುವುದಕ್ಕಿಂತ, ಅಭಿಮಾನಿಯಾಗಿ ನೋಡಿ ಆರಾಧಿಸಿದವರಲ್ಲಿ ನಾನೂ ಒಬ್ಬ. ಅಂದಹಾಗೆ ಇವತ್ತು ವಿಶೇಷವಾಗಿ ಅವರ ಬಗ್ಗೆ ನೆನಪಿಸಲು ಕಾರಣ, ನಮಗೆಲ್ಲರಿಗೂ ಗೊತ್ತು. ಇಂದಿಗೆ ಅವರು ನಮ್ಮನ್ನು ಅಗಲಿ ಹದಿನಾಲ್ಕು ವರ್ಷಗಳಾಗಿವೆ. ಆದರೆ ಅವರ ಸಿನಿಮಾಗಳ ಮೂಲಕ, ಅದರ ಸಂದೇಶಗಳ ಮೂಲಕ ನಾವು ಬದುಕನ್ನು ಮತ್ತು ಆ ಬದುಕಲ್ಲಿ ಅವರನ್ನು ಜೀವಂತವಾಗಿ ಕಾಣುತ್ತಿದ್ದೇವೆ.

ಅಣ್ಣಾವ್ರ ಇನ್ನೂರು ಸಿನಿಮಾಗಳಲ್ಲಿ ಒಂದಲ್ಲ ಒಂದು ಸಿನಿಮಾದ ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ಕೂಡ ನಡೆದಿರುತ್ತದೆ. ಯಾಕೆಂದರೆ ಅವರ ಚಿತ್ರದ ಕತೆಗಳು ಸಮಾಜಕ್ಕೆ ಅಷ್ಟು ಹತ್ತಿರವಾಗಿದ್ದು, ನೈಜ ಅಂಶಗಳನ್ನು ಹೊಂದಿರುತ್ತವೆ. ಅವರ ಸಿನಿಮಾಗಳನ್ನು ಸ್ಫೂರ್ತಿಯಾಗಿಸಿಕೊಂಡು ಬದುಕು ಕಟ್ಟಿ ಗೆದ್ದವರಿದ್ದಾರೆ. ಬಿದ್ದಲ್ಲಿಂದ ಎದ್ದವರಿದ್ದಾರೆ.‌ ಇಂಥ ಸಂದರ್ಭದಲ್ಲಿ ಒಬ್ಬ ಪುಟ್ಟ ಕಲಾವಿದನಾಗಿ ನನಗೆ ಅವರು ಅಂಧನಾಗಿ ನಟಿಸಿರುವ ಚಿತ್ರವೊಂದು ಯಾವಾಗಲೂ ಕಾಡುತ್ತಿರುತ್ತದೆ. ಚಿತ್ರದ ಹೆಸರು ‘ಕಣ್ತೆರೆದು ನೋಡು’. ಬಹುಶಃ ಒಂದಷ್ಟು ಮಂದಿ ಈ ಚಿತ್ರವನ್ನು ನೋಡವರು ಕೂಡ ಇರಬಹುದು. ಅವರಲ್ಲಿ ನನ್ನದೊಂದು ವಿನಂತಿ. ಈ ಚಿತ್ರ ಸಿಕ್ಕಾಗ ದಯವಿಟ್ಟು ಒಮ್ಮೆ ಕಣ್ತೆರೆದು ನೋಡಿ! ಯಾಕೆಂದರೆ ಅಣ್ಣಾವ್ರ ಸಿನಿಮಾ ಎಂದರೆ ಕಾಲಜ್ಞಾನಿಗಳ ಮಾತಿನಂತೆ. ಬದುಕಿನ ಒಂದಷ್ಟು ವಿಷಯಗಳನ್ನು
ಗುಟ್ಟುಗಳನ್ನು ಬಿಚ್ಚಿಡುತ್ತಾ ಬದುಕಿಗೆ ಸ್ಫೂರ್ತಿಯಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಅವರ ಸ್ಮರಣೆಯಲ್ಲಿ ಆದರಾಂಜಲಿಗಳನ್ನು ಸಲ್ಲಿಸುತ್ತೇನೆ.

Recommended For You

Leave a Reply

error: Content is protected !!
%d bloggers like this: