ಕನ್ನಡ ಚಿತ್ರರಂಗದ ಯುವನಟ, ನವ ರಾಜಕಾರಣಿ ನಿಖಿಲ್ ಕುಮಾರ್ ಅವರ ವಿವಾಹ ಇಂದು ಬೆಂಗಳೂರಿನಲ್ಲಿ ನೆರವೇರಿದೆ. ರಾಮನಗರ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ರೇವತಿಯವರೊಂದಿಗೆ ವಿವಾಹ ನೆರವೇರಿದೆ.
ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವ ನಡೆಯಿತು. ಕೊರೊನಾ ವೈರಸ್ ಕುರಿತಾದ ಎಚ್ಚರಿಕೆಯಿಂದ ಹೆಚ್ಚು ಜನರನ್ನು ಸೇರಿಸದೆ ನಡೆದ ವಿವಾಹವಾದರೂ ವಿಶೇಷ ರೀತಿಯಲ್ಲಿ ಸುವ್ಯವಸ್ಥಿತವಾಗಿ ನಡೆಸಲಾಗಿತ್ತು. ಮಂಟಪದಲ್ಲಿ ನಿಖಿಲ್ ರೇವತಿ ಅವರಿಗೆ ತಾಳಿಕಟ್ಟುವ ಸಂದರ್ಭದಲ್ಲಿ ವರನ ತಂದೆ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ದಂಪತಿ, ತಾತ ಮಾಜಿ ಪ್ರಧಾನಿ ದೇವೇಗೌಡ ಚೆನ್ನಮ್ಮ ದಂಪತಿ ಉಪಸ್ಥಿತರಿದ್ದು ಆಶೀರ್ವಾದ ಮಾಡಿದರು. ಬೀಗರಾದ ಮಂಜುನಾಥ ದಂಪತಿ ಹಾಗೂ ಎರಡೂ ಕುಟುಂಬದ ಆತ್ಮೀಯರು ಭಾಗವಹಿಸಿದ್ದರು. ಶಾಸಕ ಎಚ್.ಡಿ. ರೇವಣ್ಣ ,ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಒಟ್ಟು 42 ವಾಹನಗಳಿಗೆ ಮಾತ್ರ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಎಷ್ಟೇ ಸರಳ ವಿವಾಹವಾದರೂ ಕೂಡ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಶಾಸಕ, ಸಂಸದರು ಸಂಬಂಧಿಕರೇ ಇರುವುದರಿಂದಾಗಿ ವಿವಾಹವು ವಿಶೇಷ ಗಮನ ಸೆಳೆದಿತ್ತು.

ಕುಮಾರಸ್ವಾಮಿಯವರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದು ಜಾಗ್ವಾರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಿಖಿಲ್ ಅವರು ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ ಸಿನಿಮಾಗಳ ನಟನೆಯಿಂದ ಗಮನ ಸೆಳೆದು ಕನ್ನಡದ ಯುವನಟರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಕನ್ನಡ.ಕಾಮ್ ಅವರ ವಿವಾಹ ಜೀವನಕ್ಕೆ ಶುಭ ಹಾರೈಸುತ್ತದೆ.




