ಲಾಕ್ಡೌನ್ ಕಾರಣದಿಂದ ದೇಶದ ಎಲ್ಲ ರೀತಿಯ ವ್ಯವಹಾರಗಳು ನಿಲುಗಡೆಯಾಗಿವೆ. ಆದರೆ ಈ ಸಂದರ್ಭದಲ್ಲಿ ಕೂಡ ಚಿತ್ರರಂಗದಲ್ಲಿರುವ ಸೃಜನಶೀಲರು ತಮ್ಮಿಂದಾದ ಜಾಗೃತಿಯನ್ನು ಮನರಂಜನೆಯ ಮೂಲಕವೇ ನೀಡುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳಿಬ್ಬರು ಸೇರಿಕೊಂಡು ಮಾಡಿರುವ ಕಿರುಚಿತ್ರವೊಂದು ಆ ನಿಟ್ಟಿನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ.
ಏಳು ನಿಮಿಷಗಳ ಕಿರುಚಿತ್ರದಲ್ಲಿ ದಿನಗೂಲಿ ಕಾರ್ಮಿಕರ ಕಷ್ಟದ ಬಗ್ಗೆ ತೋರಿಸಲಾಗಿದೆ. ಊರು ಬಿಟ್ಟು ಮತ್ತೊಂದು ಊರಲ್ಲಿ ಕೆಲಸ ಮಾಡುವ ಮಹಿಳೆಯೋರ್ವಳು ಕೆಲಸ ಇರದೇ ಹೋದಾಗ ಪಡಬೇಕಾದ ಕಷ್ಟ, ಪುಟ್ಟ ಮಗುವಿಗೆ ಹಾಲನ್ನೂ ನೀಡಲಾಗದ ಅಸಹಾಯಕತೆ, ಬೀದಿಗೆ ಕಾಲಿಡಲಾಗದ ಭೀಕರತೆ ಎಲ್ಲವನ್ನು ಕಣ್ಣಿಗೆ ಕಟ್ಟುವ ಕತೆಯಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪ್ರೀತಮ್ ಶೆಟ್ಟಿ. ದಿನಗೂಲಿ ಮಹಿಳೆಯೊಬ್ಬಳನ್ನು ಕೇಂದ್ರ ಪಾತ್ರವಾಗಿಸಿರುವ ಈ ಚಿತ್ರದಲ್ಲಿ ಯುವನಟಿ ಸಿಂಚನಾ ಚಂದ್ರಮೋಹನ್ ಆ ಪಾತ್ರವನ್ನು ನಿಭಾಯಿಸಿದ್ದಾರೆ. ನಿರ್ದೇಶಕ ಪ್ರೀತಮ್ ಶೆಟ್ಟಿಯವರೇ ಛಾಯಾಗ್ರಹಣ ಸೇರಿದಂತೆ ಇದೊಂದು ಕಿರುಚಿತ್ರವಾಗಿ ಹೊರಬರಲು ಬೇಕಾದ ಎಲ್ಲ ಜವಾಬ್ದಾರಿಯನ್ನು ಸುಸೂತ್ರವಾಗಿ ನಿಭಾಯಿಸಿದ್ದಾರೆ. ಲಾಕ್ಡೌನ್ ಸಂದರ್ಭದ ಚಿತ್ರವಾದ ಕಾರಣ ಎಲ್ಲ ವ್ಯವಸ್ಥೆಗಳ ಕೊರತೆಯ ನಡುವೆಯೂ ಲೊಕೇಶನ್, ಕಾಸ್ಟ್ಯೂಮ್ ಹೀಗೆ ಎಲ್ಲ ವಿಚಾರಗಳಲ್ಲಿಯೂ ಸಹಜತೆಯನ್ನು ತುಂಬಿರುವ ನಿರ್ದೇಶಕರ ಪರಿಶ್ರಮ ಅಭಿನಂದನಾರ್ಹ.
ಪ್ರೀತಮ್ ಶೆಟ್ಟಿ ಕನ್ನಡದ ಯುವ ನಿರ್ದೇಶಕರಾಗಿದ್ದು, ಇವರ ನಿರ್ದೇಶನದ ತುಳು-ಕನ್ನಡ ಮಿಶ್ರಿತ ಚಿತ್ರವು ಇತ್ತೀಚೆಗಷ್ಟೇ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾಗಿತ್ತು. ಮೂಲತಃ ಮಂಗಳೂರಿನವರಾದ ಪ್ರೀತಮ್ ಶೆಟ್ಟಿ ಧಾರಾವಾಹಿಗಳ ಮೂಲಕ ಬಣ್ಣದ ಲೋಕ ಪ್ರವೇಶಿಸಿದವರು. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ
ರಾಧಾಕಲ್ಯಾಣ’, ಮೀರಾ ಮಾಧವ',
ಖುಷಿ’, ಒಂದೂರಲ್ಲಿ ರಾಜಾರಾಣಿ',
ಕಿನ್ನರಿ’, ಪವಿತ್ರ ಬಂಧನ',
ಮೀನಾಕ್ಷಿ ಮದುವೆ’ಗಳನ್ನು ನಿರ್ದೇಶಿಸಿದವರು. ಪ್ರಸ್ತುತ ಕಲರ್ಸ್ ವಾಹಿನಿಯ ಗಿಣಿರಾಮ' ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವೆಲ್ಲ್ರ ನಡುವೆ ಪಿ ರವಿಶಂಕರ್ ಅವರು ಪ್ರಧಾನ ಪಾತ್ರದಲ್ಲಿರುವ
ಸದ್ಗುಣ ಸಂಪನ್ನ ಮಾಧವ 100%’ ಎನ್ನುವ ಚಿತ್ರದ ಪ್ರಥಮ ಹಂತ ಪೂರ್ತಿಗೊಳಿಸಿದ್ದಾರೆ.
ಕಿರುಚಿತ್ರದ ಪ್ರಧಾನ ಪಾತ್ರಧಾರಿ ಸಿಂಚನಾ ಚಂದ್ರಮೋಹನ್ ಮೂಲತಃ ಕೊಡಗಿನ ಬೆಡಗಿಯಾಗಿದ್ದು, ಈ ಹಿಂದೆ ಪ್ರೀತಮ್ ಶೆಟ್ಟಿಯವರದೇ ನಿರ್ದೇಶನದ ಪಿಂಗಾರ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದರು. ಸಿಂಚನಾ ಕುಶಾಲನಗರದ ಹಿರಿಯ ಪತ್ರಕರ್ತರಾದ ವನಿತಾ, ಚಂದ್ರಮೋಹನ್ ದಂಪತಿಯ ಪುತ್ರಿಯಾಗಿದ್ದಾರೆ. ಪತ್ರಿಕೋದ್ಯಮ ಪದವಿ ನಂತರ ಟಿವಿ ಮಾಧ್ಯಮದಲ್ಲಿ ವಾರ್ತಾ ನಿರೂಪಕಿಯಾಗಿ ನಂತರ
ಶಾಂತಂ ಪಾಪಂ’, ಕಣ್ಮಣಿ',
ನನ್ ಹೆಂಡ್ತಿ ಎಂಬಿಬಿಎಸ್’, ರಕ್ಷಾಬಂಧನ' ಮೊದಳಾದ ಧಾರಾವಾಹಿಗಳಲ್ಲಿ ನಟಿಸಿದ್ದು,
ಅವಲಕ್ಕಿ ಪವಲಕ್ಕಿ’, `ಗಿಲ್ಕಿ’ ಮೊದಲಾದ ಕನ್ನಡ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದಲ್ಲದೆ ವಿಟೂ ಲಾಂಛನದಡಿ ದಕ್ಷಿಣ ಭಾರತದ ವಿವಿಧೆಡೆ ಕಾರ್ಯಕ್ರಮ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸಿಂಚನಾ ಮತ್ತು ಪ್ರೀತಮ್ ಪ್ರಯತ್ನಕ್ಕೆ ಚಿತ್ರರಂಗ ಸೇರಿದಂತೆ ವೀಕ್ಷಕ ವೃಂದದಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.