ಕೊರೊನ ವೈರಸ್ ಹರಡುವ ಭೀತಿಯಿಂದ ಕೈಗೊಂಡ ದಿಢೀರ್ ಲಾಕ್ಡೌನ್ ಕ್ರಮ ಇಡೀ ದೇಶವಾಸಿಗಳನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಅದರಲ್ಲಿ ಸುದ್ದಿಗಳನ್ನು ತಲುಪಿಸುವ ಮಾಧ್ಯಮದ ಮಂದಿ ಕೂಡ ಹೊರತಾಗಿಲ್ಲ. ಟಿ.ವಿ ಮಾಧ್ಯಮಗಳು ನಿಮಗೆ ಸಕ್ರಿಯವಾಗಿ ಕಂಡರೂ ಕೂಡ ಅಲ್ಲಿ ಕಾರ್ಯ ನಿರ್ವಹಿಸುವವರಲ್ಲಿ ಅರ್ಧಕ್ಕರ್ಧ ಮಂದಿಗೆ ರಜೆ ನೀಡಲಾಗಿದೆ. ಹಾಗಂತ ರಜೆ ನೀಡಲಾದ ಮಂದಿಗೆ ಹಿಂದಿನಂತೆಯೇ ಸಂಬಳ ನೀಡಲಾಗುತ್ತಿದೆಯಾ ಎಂದರೆ ಖಂಡಿತವಾಗಿ ಇಲ್ಲ. ಒಂದು ವೇಳೆ ಸಂಬಳ ನೀಡುವುದಾಗಿದ್ದರೆ ಅವರಿಂದಲೂ ಕೆಲಸ ತೆಗೆದುಕೊಳ್ಳಬಹುದಿತ್ತಲ್ಲ? ಸದ್ಯದ ಪರಿಸ್ಥಿತಿಯಲ್ಲಿ ಯಾರು ವಾಹಿನಿಗೆ ತುಂಬ ಅಗತ್ಯ ಇದ್ದಾರೆ ಅವರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಒಟ್ಟು ದೇಶವೇ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಇದರಲ್ಲಿ ಪ್ರತ್ಯೇಕವಾಗಿ ಮಾಧ್ಯಮ ಕ್ಷೇತ್ರದ ಪರಾಮರ್ಶೆಯ ಅಗತ್ಯವಿಲ್ಲ ಎನ್ನಬಹುದು. ಅಂದಹಾಗೆ ಇಂಥ ಸಂಕಷ್ಟದಲ್ಲಿ ಪತ್ರಕರ್ತರ ಸಹಾಯಕ್ಕೆ ಪ್ರೆಸ್ ಕ್ಲಬ್ ಸೇರಿದಂತೆ ಪ್ರಮುಖ ವಲಯದಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಸಿನಿಮಾ ಪತ್ರಕರ್ತರ ಬಗ್ಗೆ ಮೊದಲ ಕಾಳಜಿ ತೋರಿ ಸಹಾಯಗೈದ ಕೀರ್ತಿ ಖಂಡಿತವಾಗಿ `ಆನಂದ್ ಆಡಿಯೋ ಸಂಸ್ಥೆ’ಗೆ ಸಂದಾಯವಾಗುತ್ತದೆ.
ಪ್ರಸ್ತುತ ಸಿನಿಮಾ ಸೇರಿದಂತೆ ಮನರಂಜನಾ ವಿಭಾಗದಲ್ಲಿ ಸುದ್ದಿಗಳೇ ಇಲ್ಲ. ಇಂಥ ಸಂದರ್ಭದಲ್ಲಿ ಕೆಲಸವನ್ನೇ ಕಳೆದುಕೊಳ್ಳುವಂಥ ಪರಿಸ್ಥಿತಿ ಸಿನಿಮಾ ಪತ್ರಕರ್ತರದ್ದು. ಮಾಧ್ಯಮದ ಮಂದಿ ಏನಿದ್ದರೂ ಇನ್ನೊಬ್ಬರ ಸುದ್ದಿಯನ್ನು ಸಮಾಜಕ್ಕೆ ತಿಳಿಸುವ ಮಾಧ್ಯಮಗಳೇ ಹೊರತು ತಾವೇ ಸುದ್ದಿ ಆಗುವವರಲ್ಲ. ಇತ್ತೀಚೆಗೆ ಟಿವಿ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡದಲ್ಲಿ ಕೂಡ ಒಂದಷ್ಟು ನಿರೂಪಕರು ಸ್ಟಾರ್ ಇಮೇಜ್ ಪಡೆದುಕೊಂಡು ಅಭಿಮಾನಿಗಳನ್ನು ಪಡೆದಿರಬಹುದು. ಆದರೆ ನಿರೂಪಕರಷ್ಟೇ ಮಾಧ್ಯಮವಲ್ಲ. ಅದರ ಹಿಂದೆ ಸುದ್ದಿ ತರುವ, ಸುದ್ದಿಗೆ ರೂಪ ಕೊಡುವ ತೆರೆಮರೆಯ ಪತ್ರಕರ್ತರ ಗುಂಪು ದೊಡ್ಡದಾಗಿದೆ. ಅವರೆಲ್ಲರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಾದವರು ಯಾರು? ಎಲ್ಲ ವಿಭಾಗದ ಸುದ್ದಿಗಳ ಕುರಿತಾದ ಆಹ್ವಾನವನ್ನು ಮಾಧ್ಯಮಗಳಿಗೆ ತಲುಪಿಸಲು ಪಿ.ಆರ್.ಒಗಳಿರುತ್ತಾರೆ. ಕನ್ನಡ ಸಿನಿಮಾರಂಗದ ಹಿರಿಯ ಪಿ.ಆರ್.ಒಗಳಲ್ಲಿ ಸುಧೀಂದ್ರ ವೆಂಕಟೇಶ್ ಅವರಿಗೆ ವಿಶೇಷ ಸ್ಥಾನವಿದೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿರುವ ಕಾರಣ ಅವರಿಗೆ ಸಿನಿಮಾ ಪತ್ರಕರ್ತರ ಕಷ್ಟದ ಅರಿವಾಗಿದೆ. ಪತ್ರಕರ್ತರಾಗಿದ್ದುಕೊಂಡು ಕಲಾವಿದರಾಗಿ ಗುರುತಿಸಿಕೊಂಡಿರುವ ಯತಿರಾಜ್ ಜತೆಗೆ ಈ ವಿಚಾರದ ಬಗ್ಗೆ ಮಾತನಾಡಿ, ಚಿತ್ರರಂಗದಿಂದ ಏನಾದರೂ ಸಹಕಾರ ಲಭಿಸಬಹುದೇ ಎಂದು ಪ್ರಯತ್ನಿಸಿದ್ದಾರೆ. ವಾಸ್ತವದಲ್ಲಿ ಚಿತ್ರರಂಗ ಕೂಡ ನಷ್ಟದಲ್ಲಿರುವುದರಿಂದ ಅದರ ಕಾರ್ಮಿಕ ವರ್ಗದ ಚಿಂತನೆ, ಕಿಟ್ ವಿತರಣೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಸಹಾಯ ಮಾಡಲೆಂದು ಚಿತ್ರರಂಗದಲ್ಲಿ ಎರಡು ದಶಕಗಳ ಇತಿಹಾಸ ಹೊಂದಿರುವ ಆನಂದ್ ಆಡಿಯೋ ಸಂಸ್ಥೆ ಮುಂದಾಗಿದೆ. ಆನಂದ್ ಆಡಿಯೋ ಸಿನಿಮಾ ಪತ್ರಕರ್ತರಿಗೆ ಕಿಟ್ ನೀಡುತ್ತಾರೆ ಎಂದೊಡನೆ ಅಲ್ಲಿಗೆ ಧಾವಿಸುವ ಮನಸ್ಸು ಯಾವ ಪತ್ರಕರ್ತರೂ ಮಾಡುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಯಾಕೆಂದರೆ ಮಾಧ್ಯಮಗಳ ಮೂಲಕ ಸದಾ ಇತರರಿಗೆ ಸಹಾಯ ಮಾಡಿದಂಥ ವರ್ಗವೊಂದು ಸ್ವಾಭಿಮಾನ ಮರೆತು ಕೈಚಾಚುವ ಸಂದರ್ಭವೇ ಇರುವುದಿಲ್ಲ. ಈ ವಿಚಾರವನ್ನು ಅರಿತ ನಟ, ಪತ್ರಕರ್ತ ಯತಿರಾಜ್ ಅವರು ಖುದ್ದಾಗಿ ಪತ್ರಕರ್ತರ ಮನೆಮನೆಗೆ ಹೋಗಿ ಕಿಟ್ ತಲುಪಿಸುವ ಮಹತ್ಕಾರ್ಯವನ್ನು ಮಾಡಿರುತ್ತಾರೆ. ಹಾಗಂತ ಆಗಲೂ ತಮ್ಮ ಮನೆಯ ಲೊಕೇಶನ್ ನೀಡದವರು, ಕೆಲಸ ಇಲ್ಲದಿದ್ದರೂ ಮನೆಯ ತಿಂಗಳ ಖರ್ಚನ್ನು ನಿಭಾಯಿಸಬಲ್ಲೆವೆಂದು ತಿಳಿಸಿದವರು ಕೂಡ ಇರಬಹುದು. ಆದರೆ ನಿಜವಾಗಿಯೂ ಅಗತ್ಯ ಎನಿಸಿದವರ ಕೈಗೆ ಇಂಥದೊಂದು ಕಿಟ್ ದೊರಕುವಂತೆ ಮಾಡಿರುವ `ಆನಂದ್ ಆಡಿಯೋ ಸಂಸ್ಥೆ’ ಮತ್ತು ಆ ಸಹಾಯ ತಲುಪಲು ಕಾರಣರಾದ ಪಿ.ಆರ್.ಒ ಸುಧೀಂದ್ರ ವೆಂಕಟೇಶ್, ಹಿರಿಯ ಪತ್ರಕರ್ತರಾದ ಚಿತ್ರಲೋಕ.ಕಾಮ್‌ನ ವೀರೇಶ್ ಮತ್ತು ಪತ್ರಕರ್ತ, ನಟ, ನಿರೂಪಕ ಯತಿರಾಜ್ ಅವರ ಕೆಲಸ ಅಭಿನಂದನಾರ್ಹವೆನಿಸಿದೆ.
ಆನಂದ್ ಆಡಿಯೋ ಹೀಗೊಂದು ಸತ್ಕಾರ್ಯ ಮಾಡಿದೆ ಎಂದ ಮೇಲೆ ಅದರ ಹಿನ್ನೆಲೆಯ ಬಗ್ಗೆ ನಮ್ಮ ಓದುಗರಿಗೆ ತಿಳಿಸಲೇಬೇಕಾಗುತ್ತದೆ. ಯಾಕೆಂದರೆ ಆನಂದ್ ಆಡಿಯೋ ಸಂಸ್ಥೆಯನ್ನು ಮದರಿಯಾಗಿಸಿಕೊಂಡು ಚಿತ್ರೋದ್ಯಮದ ಇನ್ನಷ್ಟು ಗಣ್ಯರು ಕೂಡ ಪತ್ರಕರ್ತರ ನೆರವಿಗೆ ಧಾವಿಸಲು ಮುಂದಾಗಿರುವ ಸುದ್ದಿಯಿದೆ. ಇಂಥದೊಂದು ಮಾದರಿ ಮಾರ್ಗವನ್ನು ಹಾಕಿಕೊಟ್ಟ ಆನಂದ್ ಆಡಿಯೋ ಸಂಸ್ಥೆ ಕನ್ನಡ ಚಿತ್ರರಂಗ ಪ್ರವೇಶಿಸಿ ಎರಡು ದಶಕಗಳೇ ಆಗಿವೆ.
ನಗುಮುಖ, ಮೃದು ಮಾತುಗಳ ಎತ್ತರದ ವ್ಯಕ್ತಿ ಮೋಹನ್ ಛಾಬ್ರಿಯಾ. ಅವರ ಸ್ಥಾಪಿಸಿದ ಆನಂದ್ ಆಡಿಯೋ ಸಂಸ್ಥೆಯ ಎರಡು ಸ್ಥಂಭಗಳಾಗಿ ಗುರುತಿಸಿಕೊಂಡವರು ಅವರ ತಮ್ಮ ಶ್ಯಾಮ್ ಮತ್ತು ಮೋಹನ್ ಅವರ ಪುತ್ರ ಆನಂದ್. ಮೋಹನ್ ಅವರ ನಿಧನದ ಬಳಿಕ ಕೂಡ ಆನಂದ್ ಆಡಿಯೋ ಸಂಸ್ಥೆಯೊಂದಿಗೆ ಚಿತ್ರೋದ್ಯಮ ಅಷ್ಟೇ ಚೆನ್ನಾಗಿ ವ್ಯವಹಾರ ಇರಿಸಿಕೊಂಡು ಮುಂದುವರಿಯಲು ಶ್ಯಾಮ್ ಮತ್ತು ಆನಂದ್ ಅವರ ಕಾರ್ಯವೈಖರಿಯೇ ಕಾರಣ ಎಂದರೆ ತಪ್ಪಾಗಲಾರದು.
1999ರಲ್ಲಿ ಆ ನಂದ್ ಆಡಿಯೋಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ಮೋಹನ್ ಛಾಬ್ರಿಯಾ ಅವರು ಹಾಡುಗಳಿಗೆ ಒಳ್ಳೆಯ ಶ್ರೋತೃವಾಗಿದ್ದವರು. ಹಾಡನ್ನು ಕೇಳಿಯೇ ಅದರ ಗುಣಮಟ್ಟವನ್ನು ಅಳೆಯಬಲ್ಲವರಾಗಿದ್ದರು. ಯಾರು ನಿರ್ಮಾಪಕರು, ಯಾವ ಸ್ಟಾರ್ಸ್ ಸಿನಿಮಾ ಎನ್ನುವುದಕ್ಕಿಂತ ಹಾಡುಗಳ ಬಗ್ಗೆ ಮಾತ್ರ ಮೊದಲ ಆದ್ಯತೆ ನೀಡುತ್ತಿದ್ದರು. ಇದೀಗ ಆನಂದ್ ಆಡಿಯೋಗೆ ಎರಡು ದಶಕಗಳು ಕಳೆದಿವೆ. ಇದುವರೆಗೆ ಎಂಟುನೂರು ಚಲನಚಿತ್ರಗಳ 3,500 ಟ್ರ್ಯಾಕ್‌ಗಳನ್ನು ಸ್ವಂತವಾಗಿಸಿಕೊಂಡಿದೆ. ಇವುಗಳಲ್ಲದೆ 7,500ಕ್ಕೂ ಅಧಿಕ ಭಕ್ತಿಗೀತೆ, ಭಾವಗೀತೆ ಮುಂತಾದ ಹಾಡುಗಳ ಟ್ರ್ಯಾಕ್‌ಗಳು ಕೂಡ ಇವರ ಮಾಲೀಕತ್ವದಲ್ಲಿದೆ. ಹೀಗೆ ಒಟ್ಟು 10,500 ಟ್ರ್ಯಾಕ್‌ಗಳ ಬೃಹತ್ ಮ್ಯೂಸಿಕ್ ಭಂಡಾರವನ್ನು ಸ್ವಂತವಾಗಿಸುವಲ್ಲಿ ಆನಂದ್ ಆಡಿಯೋ ಗೆಲವು ಕಂಡಿದೆ.
ಇದುವರೆಗೆ ನಾಲ್ಕು ಸಿನಿಮಾಗಳನ್ನು ಕೂಡ ನಿರ್ಮಿಸಿದ ಕೀರ್ತಿ ಆನಂದ್ ಆಡಿಯೋ' ಸಂಸ್ಥೆಯದ್ದಾಗಿದೆ. ಅವುಗಳಲ್ಲಿ
ಫ್ರೆಂಡ್ಸ್’ ಮತ್ತು ವಿಕ್ಟ್ರಿ' ಸಿನಿಮಾಗಳು ಅಭೂತಪೂರ್ವ ಯಶಸ್ಸು ಕಂಡ ಸಿನಿಮಾಗಳಾಗಿವೆ. ಸರಿಯಾಗಿ ಒಂಬತ್ತು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲೇ ಕನ್ನಡದ ಮೊದಲ ಯೂಟ್ಯೂಬ್ ಚಾನೆಲ್ ಎನ್ನುವ ಹೆಸರಲ್ಲಿ ಆರಂಭವಾದ ವಾಹಿನಿ ಎನ್ನುವ ಹೆಗ್ಗಳಿಕೆಯೂ
ಆನಂದ್ ಆಡಿಯೋ’ಗೇನೇ ಸಲ್ಲುತ್ತದೆ. ಐದು ಮಿಲಿಯನ್ ಚಂದಾದಾರರನ್ನು ಹೊಂದಿದ ಕನ್ನಡದ ಏಕೈಕ ಚಾನೆಲ್ ಯೂಟ್ಯೂಬ್ ಚಾನೆಲ್ ಇದಾಗಿದ್ದು, ನೂರು ಮಿಲಿಯನ್ ವ್ಯೂಸ್ ಪಡೆದ ಕನ್ನಡದ ಮೊದಲ ಹಾಡು ನೀಡಿದ ದಾಖಲೆಯನ್ನು ರ್ಯಾಂಬೋ' ಚಿತ್ರದ
ಚುಟ್ಟು ಚುಟ್ಟು ಅಂತೈತೀ’ ಎನ್ನುವ ಗೀತೆಯ ಮೂಲಕ ಸಾಧಿಸಲಾಗಿದೆ. ಪ್ರಸ್ತುತ ವರ್ಷದ ಬಹುನಿರೀಕ್ಷೆಯ ಚಿತ್ರಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್' ಮತ್ತು ಧ್ರುವ ಸರ್ಜ ನಟನೆಯ
ಪೊಗರು’ ಚಿತ್ರದ ಆಡಿಯೋ ಹಕ್ಕುಗಳನ್ನು `ಆನಂದ್ ಆಡಿಯೋ ಸಂಸ್ಥೆ’ಯೇ ಹೊಂದಿರುವುದು ಗಮನಾರ್ಹ. ಆನಂದ್ ಆಡಿಯೋ ಸಂಸ್ಥೆಗೆ ಶುಭವಾಗಲಿ.