ಈ ಸುದ್ದಿ ಸುಳ್ಳಾಗಲು ಬಯಸಿದ ಕವಿರಾಜ್

ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಸಾಮಾಜಿಕ ಹೋರಾಟಗಳಲ್ಲಿ ಕೂಡ ಹಿಂದೆ ಬಿದ್ದವರಲ್ಲ. ಬಹುಶಃ ಇದೇ ಕಾರಣದಿಂದಲೇ ಇರಬಹುದು ‘ನಮ್ಮ ಧ್ವನಿ’ ತಂಡದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದ ಮಹೇಂದ್ರ ಕುಮಾರ್ ಅವರೊಂದಿಗೆ ಕೂಡ ಆತ್ಮೀಯತೆ ಹೊಂದಿದ್ದರು. ಇಂದು ಹೃದಯಾಘಾತದಿಂದ ಅಗಲಿ‌ಹೋಗಿರುವ ಮಹೇಂದ್ರ ಕುಮಾರ್ ಅವರ ಬಗ್ಗೆ ಕವಿರಾಜ್ ನೆನಪಿಸಿಕೊಂಡಿರುವ ವಿಚಾರಗಳು ಇಲ್ಲಿವೆ.

ಮಲೆನಾಡಿನವರೆಂಬ ಮೊದಲ ಕೊಂಡಿಯಿಂದ ಬೆಸೆದುಕೊಂಡ ಆಪ್ತತೆ ಸಮಾನ ಸಮಾಜಮುಖಿ ಮನಸ್ಥಿತಿಯಿಂದ ಇನ್ನಷ್ಟು ಗಟ್ಟಿಯಾಗಿತ್ತು. ಭೇಟಿ ಆಗಿದ್ದು ತೀರಾ ಕಡಿಮೆ ಆದರೂ ಹೆಚ್ಚುತ್ತಿರುವ ಮೂಲಭೂತವಾದ , ಕೋಮುವಾದಗಳ ಕುರಿತು ಫೋನಿನಲ್ಲೇ ಬಹಳಷ್ಟು ಅತಂಕ,ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನನ್ನ ಸಿನಿಮಾ, ಸಾಮಾಜಿಕ, ರಾಜಕೀಯ ಪೋಸ್ಟ್ ಗಳಿಗೆಲ್ಲ ತಪ್ಪದೇ ಕಮೆಂಟಿಸುತ್ತಿದ್ದರು. ಒಂದು ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದು ಅದರ ಉದ್ದೇಶ, ಕಾರ್ಯವೈಖರಿಗಳನ್ನು ಅತ್ಯಂತ ಹತ್ತಿರದಿಂದ ಕಂಡು ಅವು ಸ್ವಸ್ಥ ಸಮಾಜದ ಪರ ಇಲ್ಲವೆಂಬ ಅರಿವಾಗಿ ಅದರ ವಿರುದ್ಧ ಸಿದ್ಧಾಂತವನ್ನು ಪ್ರತಿಪಾದಿಸಲು ತೊಡಗಿದಾಗಿನಿಂದ ಇವರು ನನಗೆ ಬಹಳ ಇಂಟರೆಸ್ಟಿಂಗ್ ವ್ಯಕ್ತಿಯೆನಿಸಿದ್ದರು.


ಕಳೆದ ತಿಂಗಳು ನಡೆಯಬೇಕಿದ್ದು, ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಅವರ ನಮ್ಮ ಧ್ವನಿ ಸಂಘಟನೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಚಾರ ಮಂಡಿಸುವಂತೆ ನನ್ನನ್ನು ಬಹಳ ಪ್ರೀತಿಯಿಂದ ಒಪ್ಪಿಸಿದ್ದರು. ಇಂದಿನ ವಿಷಾದನೀಯ ಪರಿಸ್ಥಿತಿ ಬಗ್ಗೆ ಅವರಿಗೆ ನೋವಿತ್ತು.ಸ್ವಸ್ಥ ಸಮಾಜ ಅವರ ಕನಸಾಗಿತ್ತು. ಕನಸು ನನಸಾಗದೆ ನಮ್ಮೆಲ್ಲರನ್ನು ಅಗಲಿದ್ದಾರೆ.
ಮಹೇಂದ್ರ ಕುಮಾರ್,ನೀವಿಲ್ಲ ಅನ್ನುವುದನ್ನು ನಂಬಲಾಗುತ್ತಿಲ್ಲ, ಸುಳ್ಳು ಸುದ್ದಿಗಳ ಕಾಲದಲ್ಲಿ ಇದೊಂದು ಸುದ್ದಿ ಸುಳ್ಳಾಗಬಾರದೇ ಅಂತಾ ಬೆಳಿಗ್ಗೆಯಿಂದ ಮನಸು ಹಪಾಹಪಿಸುತ್ತಲೇ ಇದೆ. ಹಾಗಾಗಿಯೇ ತಡೆದೂ ತಡೆದು ಕೊನೆಗೆ ಎಷ್ಟೇ ಕಹಿ ಆದರೂ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು ಎಂದು ಅರಿವಾಗಿ ಇದನ್ನು ಬರೆಯುತ್ತಿದ್ದೇನೆ. ನಿಜವಾಗಿಯೂ ನಿಮ್ಮ ಅವಶ್ಯಕತೆ ನಮಗೂ ಈ ಸಮಾಜಕ್ಕು ಬಹಳ ಇತ್ತು. ನೀವು ಮದ್ಯದಲ್ಲೇ ಎದ್ದು ಯಾರಿಗೂ ಹೇಳದೆ ಹೊರಟು ಬಿಟ್ಟೀರಿ. ಆದರೆ ನಿಮ್ಮ ಆಶಯ, ವಿಚಾರಗಳು ಎಂದೆಂದಿಗೂ ನಮ್ಮಂತವರಲ್ಲಿ ಜೀವಂತವಾಗಿರುತ್ತವೆ. ಅವನ್ನು ನನಸಾಗಿಸಲು ನಾವು ಶ್ರಮಿಸುತ್ತೇವೆ. ನೋಡೋಣ, ಒಂದಲ್ಲಾ ಒಂದು ದಿನ ನಿಮ್ಮ ಕನಸಿನ ಸಮಾಜ ನಿರ್ಮಾಣವಾಗಬಹುದು. ಹಾಗಾದರೆ ಅದೇ ನಿಮಗೆ ಸೂಕ್ತ ಶ್ರದ್ಧಾಂಜಲಿ.

Recommended For You

Leave a Reply

error: Content is protected !!